ಕಡೂರು ಕ್ಷೇತ್ರ: ಎಲ್ಲ ನಾಮಪತ್ರ ಕ್ರಮಬದ್ಧ
ಕ.ಪ್ರ.ವಾರ್ತೆ, ಕಡೂರು, ಏ.18 ಕಡೂರು ವಿಧಾನಸಭಾ ಚುನಾವಣಾ ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆ ದಿನವಾದ ಗುರುವಾರ ಕಡೂರು ವಿಧಾನಸಭಾ ಚುನಾವಣಾ ಕಣದಲ್ಲಿ 12 ಅಭ್ಯರ್ಥಿಗಳು ಉಳಿಯುವ ಮೂಲಕ 22 ನಾಮಪತ್ರಗಳ ಪೈಕಿ ಯಾವುದೇ ನಾಮಪತ್ರ ತಿರಸ್ಕೃತವಾಗಿಲ್ಲ ಎಂದು ಕಡೂರು ವಿಧಾನಸಭಾ ಕ್ಷೇತ್ರದ ಚುನಾವಣಾ ಅಧಿಕಾರಿ ಲಕ್ಷ್ಮೀನರಸಯ್ಯ ತಿಳಿಸಿದ್ದಾರೆ.
ನಾಮಪತ್ರ ಸಲ್ಲಿಕೆಯ ಕಡೆ ದಿನವಾದ ಬುಧವಾರ 12 ಅಭ್ಯರ್ಥಿಗಳು ಒಟ್ಟು 22 ನಾಮಪತ್ರಗಳನ್ನು ಸಲ್ಲಿಸಿದ್ದರು. ನಾಮಪತ್ರ ಪರಿಶೀಲನೆಯ ಗುರುವಾರ ನಾಮಪತ್ರ ಪರಿಶೀಲಿಸಲಾಗಿದ್ದು, ಯಾವುದೇ ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತವಾಗಿಲ್ಲ. 12 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದು, ಏ. 20 ನಾಮಪತ್ರ ಹಿಂಪಡೆಯಲು ಕಡೆ ದಿನ ಎಂದರು.
ಚುನಾವಣಾ ಅಭ್ಯರ್ಥಿಗಳ ನಾಮಪತ್ರಗಳ ಪರೀಶೀಲನೆ ಸಂದರ್ಭದಲ್ಲಿ ಜೆಡಿಎಸ್ ಅಭ್ಯರ್ಥಿ ವೈ.ಎಸ್.ವಿ. ದತ್ತವರು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ವಿವರದಲ್ಲಿ ತುಮಕೂರಿನ ಚೆಕ್ ಪ್ರಕರಣದ ವಿವಾದಕ್ಕೆ ಸಂಭಂದಿಸಿದಂತೆ ವಿವರ ಸಲ್ಲಿಸಿಲ್ಲ. ಆದ್ದರಿಂದ ಅವರ ನಾಮಪತ್ರವನ್ನು ತಿರಸ್ಕರಿಸಬೇಕು ಎಂದು ಚೇತನ್ ಎಂಬುವರು ಅರ್ಜಿ ನೀಡಿದರು.
ಅದಕ್ಕೆ ಚುನಾವಣಾಧಿಕಾರಿ ಲಕ್ಷ್ಮೀನರಸಯ್ಯನವರು ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಅವರ ಉಮೇದುವಾರಿಕೆ ರದ್ದುಗೊಳಿಸಲು ಸಾಧ್ಯವಿಲ್ಲ. ನೀಡಿರುವ ಅರ್ಜಿಯನ್ನು ಚುನಾವಣಾ ಆಯೋಗಕ್ಕೆ ಕಳುಹಿಸಿಕೊಡಲಾಗುವುದು ಎಂದು ತಿಳಿಸಿ ಹಿಂಬರಹ ನೀಡಿದ್ದಾರೆ.
ದಾಖಲೆಯಲ್ಲಿ ವಿವರ: ಅರ್ಜಿ ಸಲ್ಲಿಕೆ ಬಗ್ಗೆ ಪ್ರತಿಕ್ರಿಯಿಸಿರುವ ವೈ.ಎಸ್.ವಿ. ದತ್ತ, ಚೆಕ್ ಪ್ರಕರಣದ ವಿವರವನ್ನು ಚುನಾವಣಾ ಆಯೋಗಕ್ಕೆ ನೀಡಿರುವ ದಾಖಲೆಯಲ್ಲಿ ವಿವರಿಸಿದ್ದೇನೆ. ಪ್ರಕರಣ ನ್ಯಾಯಾಲಯದಲ್ಲಿ ಇದ್ದು ಇತ್ಯರ್ಥದ ಹಂತದಲ್ಲಿ ಇದೆ. ಈ ಬಗ್ಗೆ ಸಾಮಾನ್ಯರು ಅರ್ಜಿ ನೀಡಿದರೂ ನ್ಯಾಯಾಲದಲ್ಲಿ ವಿವರ ದೊರಕುತ್ತದೆ. ತಮ್ಮನ್ನು ಚುನಾವಣಾ ಕಣದಿಂದ ಹಿಂದೆ ಸರಿಸುವ ಹುನ್ನಾರ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
--
ಅರೆಸೇನಾ ಪಡೆಯಿಂದ ಪಥ ಸಂಚಲನ
ತರೀಕೆರೆ: ಶಾಂತಿಯುತ, ಭ್ರಷ್ಟಾಚಾರ ಮುಕ್ತ ಮತದಾನಕ್ಕಾಗಿ ಗುರುವಾರ ಪಟ್ಟಣದಲ್ಲಿ ಕೇಂದ್ರ ಅರೆ ಸೇನಾ ಪಡೆಯವರು ನಡೆಸಿದ ಪಥ ಸಂಚಲನಾ ಆಕರ್ಷಣೀಯವಾಗಿಮೂಡಿಬಂದು ಎಲ್ಲರ ಮೆಚ್ಚುಗೆ ಪಡೆಯಿತು.
ಡಿವೈಎಸ್‌ಪಿ ಸದಾನಂದ ಬಿ. ನಾಯಕ್, ಗ್ರಾಮಾಂತರ ಪೊಲೀಸ್ ಇನ್ಸ್‌ಪೆಕ್ಟರ್ ಉಮಾಪತಿ, ಪೊಲೀಸ್ ಇನ್ಸ್‌ಪೆಕ್ಟರ್ ಸುರೇಶ್, ಪ್ರಿಯ ರಾಜ್‌ಕುಮಾರ್ ಅವರು ಅರೆ ಸೇನಾ ಪಡೆಯೊಂದಿಗೆ ಪಥ ಸಂಚಲನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪಟ್ಟಣದ ಎಲ್ಲ ರಸ್ತೆಗಳಲ್ಲೂ ಪಥ ಸಂಚಲನಾ ಅರಿವು ಜಾಥಾ ನಡೆಯಿತು.