ಕಿಗ್ಗಾ: ಸಂಭ್ರಮದ ಓಕುಳಿ, ಸಂದಾನೋತ್ಸವ
ಶೃಂಗೇರಿ: ಮಲೆನಾಡಿನ ಪ್ರಸಿದ್ಧ ಮಳೆ ದೇವರು ಕಿಗ್ಗಾ ಶ್ರೀ ಋಷ್ಯಶೃಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಎರಡನೇ ದಿನವಾದ ಗುರುವಾರ ಸ್ವಾಮಿಗೆ ಓಕುಳಿ, ಸಂದಾನೋತ್ಸವ ವಿಜೃಂಭಣೆಯಿಂದ ನಡೆಯಿತು.
ಬುಧವಾರ ವೈಭವಯುತ ಮಹಾ ರಥೋತ್ಸವ ಜರುಗಿತ್ತು. ಬೆಳಿಗ್ಗೆಯಿಂದಲೇ ಸಾವಿರಾರು ಭಕ್ತಾದಿಗಳು ಸ್ವಾಮಿಯ ದರ್ಶನ ಪಡೆದರು. ಭಕ್ತಾದಿಗಳಿಂದ ತುಲಾಬಾರ ಸೇವೆ ನಡೆಯಿತು. ರಥೋತ್ಸವಾಂಗ ಕಳೆದ ಗುರುವಾರದಿಂದಲೇ ವಿವಿಧ ಧಾರ್ಮಿಕ ಕಾರ್ಯಗಳು ನಡೆದಿತ್ತು. ಬುಧವಾರ ಮಧ್ಯಾಹ್ನ ಬೀದಿ ಪಲ್ಲಕ್ಕಿ ಉತ್ಸವ, ಅವಭೃತ ನಡೆಯಿತು. ಕಳೆದೆರೆಡು ದಿನಗಳಿಂದ ಕೆರೆ, ಮರ್ಕಲ್, ನೆಮ್ಮಾರು ಪಂಚಾಯಿತಿ ಸುತ್ತಮುತ್ತಲ ಗ್ರಾಮಗಳಲ್ಲಿ ಗ್ರಾಮಸ್ಥರು ಜಾತ್ರಾ ಮಹೋತ್ಸವವನ್ನು ಹಬ್ಬದ ದಿನವನ್ನಾಗಿ ಬಹಳ ಸಂಭ್ರಮ ಸಡಗರದಿಂದ ಆಚರಿಸಿದರು. ಶುಕ್ರವಾರ ಸ್ವಾಮಿಗೆ ಸಂಪ್ರೋಕ್ಷಣೆ, ಶೈವ ಮಹಾಯಾಗದ ಮುಕ್ತಾಯ ಕಾರ್ಯಕ್ರಮ ನಡೆಯಲಿದ್ದು, ರಥೋತ್ಸವಾಂಗ ಕಳೆದ ಒಂಬತ್ತು ದಿನಗಳಿಂದ ನಡೆಯುತ್ತಿರುವ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜಾತ್ರಾ ಮಹೋತ್ಸವಕ್ಕೆ ತೆರೆಬೀಳಲಿದೆ.