ಜಿಲ್ಲೆಯಲ್ಲಿ ಚಿಗುರಿನಲ್ಲೇ ಕಮರಿದ ಕೆಜೆಪಿ
ಕಪ್ರವಾರ್ತೆ,ಚಿಕ್ಕಮಗಳೂರು, ಏ.18
ಬಿಜೆಪಿ ವಿರುದ್ಧ ಸಮರ ಸಾರಲು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸ್ಥಾಪಿಸಿದ ಕೆಜೆಪಿ ಎಂಬ ಸಸಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಚಿಗುರಿನಲ್ಲೇ ಕಮರಿ ಹೋಗುತ್ತಿದೆ.
ಪಕ್ಷ ಹುಟ್ಟಿದ ಆರಂಭದಲ್ಲಿ ಇದ್ದ ಹುಮ್ಮಸ್ಸು, ಕಾರ್ಯಕರ್ತರ ಪಡೆ ಚದುರಿದೆ. ಬೇರೆ ಪಕ್ಷಗಳಿಂದ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡು ಬಂದವರು, ಯಡಿಯೂರಪ್ಪ ಅವರನ್ನು ಹೊಗಳಿದವರು. ಇಂದು, ಅವರನ್ನು ಟೀಕಿಸುತ್ತಲೇ ಕೆಜೆಪಿಗೆ ಗುಡ್ ಬೈ ಹೇಳಿ ಬೇರೆ ಪಕ್ಷಗಳತ್ತ ಮುಖ ಮಾಡಿದ್ದಾರೆ. ಕೆಲವರು ಈಗಾಗಲೇ ಬೇರೆ ಪಕ್ಷಗಳಿಗೆ ಸೇರ್ಪಡೆಗೊಂಡಿದ್ದಾರೆ.
ಇತ್ತೀಚೆಗೆ ನಡೆದ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ 148 ವಾರ್ಡ್‌ಗಳಲ್ಲಿ ಕೆಜೆಪಿ ಗೆದ್ದಿದ್ದು ಕೇವಲ 2 ವಾರ್ಡ್‌ಗಳಲ್ಲಿ ಮಾತ್ರ. ಇದರ ಬೆನ್ನಲೆ ಬಂದ ವಿಧಾನಸಭಾ ಚುನಾವಣೆ ಕೆಜೆಪಿಯೊಳಗಿನ ಗುಂಪುಗಾರಿಕೆಯ ಸ್ಪೋಟಕಕ್ಕೆ ಕಾರಣವಾಗಿದೆ.
ಕಡೂರು ವಿಧಾನಸಭಾ ಕ್ಷೇತ್ರಕ್ಕೆ ಟಿಕೆಟ್ ಆಕಾಂಕ್ಷಿಯಾಗಿದ್ದ ಕಾಮನಕೆರೆ ಶಶಿಧರ್ ಅವರು ಬಿಜೆಪಿಯನ್ನು ಬಿಟ್ಟು ಕೆಜೆಪಿಗೆ ಬಂದಿದ್ದರು. ಕಡೂರು ಕ್ಷೇತ್ರದ ಟಿಕೆಟ್ ಬೆಳ್ಳಿ ಪ್ರಕಾಶ್‌ಗೆ ನೀಡುತ್ತಿದ್ದಂತೆ ಅವರು ಮರಳಿ ಮಾತೃ ಪಕ್ಷಕ್ಕೆ ಹೋದರು.
ಶ್ರೀಕಂಠಪ್ಪ ಪುತ್ರ ಕಣಕ್ಕೆ: ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ವೇದಮೂರ್ತಿ ಅವರಿಗೆ ನೀಡಲಾಗಿದೆ. ಆದರೂ, ಇನ್ನೋರ್ವ ಟಿಕೆಟ್ ಆಕಾಂಕ್ಷಿ ಮಾಜಿ ಸಂಸದ ದಿವಂಗತ ಡಿ.ಸಿ. ಶ್ರೀಕಂಠಪ್ಪ ಅವರು ಪುತ್ರ ಕೆ.ಎಸ್. ಅಶೋಕ್ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದಾರೆ.
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಇನ್ನೋರ್ವ ಟಿಕೆಟ್ ಆಕಾಂಕ್ಷಿಯಾಗಿದ್ದ ಕೆಜೆಪಿ ಕಾರ್ಯಕಾರಿ ಸಮಿತಿಯ ಸದಸ್ಯ ಎಚ್.ಎಚ್. ದೇವರಾಜ್ ಅವರು ಟಿಕೆಟ್ ನೀಡದೆ ಇದ್ದರಿಂದ ಕೆಲವು ಮುಖಂಡರೊಂದಿಗೆ ಕೆಜೆಪಿಗೆ ರಾಜಿನಾಮೆ ನೀಡಿದ್ದಾರೆ. ಅವರು, ಗುರುವಾರ ಸುದ್ಧಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಕೆಜೆಪಿ ಪಕ್ಷ ಅಸ್ತಿತ್ವಕ್ಕೆ ಬರುವಾಗ ಯಡಿಯೂರಪ್ಪ ಅವರು ರೈತರ, ದಲಿತರ ಪರ ಹಲವು ಘೋಷಣೆಗಳನ್ನು ಮಾಡಿದ್ದರು. ಈ ರಾಜ್ಯಕ್ಕೆ ಹೊಸ ಕೊಡುಗೆ ನೀಡುತ್ತಾರೆಂದು ನಿರೀಕ್ಷಿಸಲಾಗಿತ್ತು. ಆದರೆ, ಅದು ಹುಸಿಯಾಗಿದೆ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು, ಸಾಮಾಜಿಕ ನ್ಯಾಯ ನೀಡುತ್ತಾರೆಂದು ನಂಬಿದ್ದೆವು. ಈ ಘೋಷಣೆಗಳು ಬ್ಯಾನರ್‌ಗೆ ಸೀಮಿತವಾಗಿವೆ ಎಂದು ಆರೋಪಿಸಿದರು.
ಆರ್‌ಎಸ್‌ಎಸ್‌ನಿಂದ ಬಂದವರಿಗೆ ಮಣೆ: ಕೆಜೆಪಿ, ಆರ್‌ಎಸ್‌ಎಸ್‌ನ ಒಂದು ಅಂಗ ಪಕ್ಷ. ಇಲ್ಲಿ ಆರ್‌ಎಸ್‌ಎಸ್‌ನಿಂದ ಬಂದವರಿಗೆ ಶೇ.100 ರಷ್ಟು ಅಂಕ. ಅವರಿಗೆ ಮಣೆ ಹಾಕಲಾಗುತ್ತಿದೆ. ಪಕ್ಷದ ಪದಾಧಿಕಾರಿಗಳ ಆಯ್ಕೆ ಮತ್ತು ಆಂತರಿಕ ನಿಲುವು ಪ್ರಜಾಪ್ರಭುತ್ವಕ್ಕೆ ವಿರುದ್ಧವಾದ ನಿಲುವುಗಳಾಗಿವೆ ಎಂದ ದೇವರಾಜ್, ಪಕ್ಷದ ಜಿಲ್ಲಾಧ್ಯಕ್ಷ ಡಿ.ಎಸ್. ಸುರೇಶ್ ಅವರು ನಿಷ್ಕ್ರೀಯರು. ಅವರು ತರೀಕೆರೆ ಹೊರತುಪಡಿಸಿ ಜಿಲ್ಲೆಯಲ್ಲಿ ನಡೆದ ಕೆಜೆಪಿಯ ಯಾವುದೇ ಸಭೆಗಳಿಗೆ ಹಾಜರಾಗುತ್ತಿರಲಿಲ್ಲ. ಪಕ್ಷವನ್ನು ಸರಿಯಾದ ದಾರಿಯಲ್ಲಿ ತೆಗೆದುಕೊಂಡು ಹೋಗುವಲ್ಲಿ ವಿಫಲರಾಗಿದ್ದಾರೆ. ಕೆಜೆಪಿ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷ ಧನಂಜಯಕುಮಾರ್ ಸಹ ವಿಫಲರಾಗಿದ್ದಾರೆ. ಇವರ ನಿರ್ಲಕ್ಷ ಧೋರಣೆಯಿಂದಾಗಿ ಪಕ್ಷ ಅಧೋಗತಿಗೆ ತಲುಪಿದೆ ಎಂದು ಟೀಕಿಸಿದರು.
ಚುನಾವಣೆಯಲ್ಲಿ ಯಾವುದೇ ಒಬ್ಬ ವ್ಯಕ್ತಿಗೆ ಟಿಕೆಟ್ ನೀಡಬೇಕಾದರೆ ಜಿಲ್ಲಾ ಸಮಿತಿಯಲ್ಲಿ ಚರ್ಚಿಸಬೇಕು. ಟಿಕೆಟ್‌ಗಾಗಿ ಅರ್ಜಿ ಸಲ್ಲಿಸುವುದು ರಾಜಕೀಯ ಪಕ್ಷದ ಸಂಪ್ರದಾಯ. ಆದರೆ, ಇದ್ಯಾವುದನ್ನು ಮಾಡದೆ ಮನಸ್ಸಿಗೆ ಬಂದಂತೆ ಟಿಕೆಟ್ ಹಂಚಿಕೆ ಮಾಡಲಾಗಿದೆ. ಕಡೂರಿನಲ್ಲಿ ಪಕ್ಷವನ್ನು ಕಟ್ಟಿದ್ದ ಕಾಮನಕೆರೆ ಶಶಿಧರ್ ಅವರಿಗೆ ಟಿಕೆಟ್ ನೀಡದೆ, ಬೆಳ್ಳಿ ಪ್ರಕಾಶ್ ಅವರಿಗೆ ಪಕ್ಷದ ಟಿಕೆಟ್ ನೀಡಲಾಗಿದೆ.
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಸಿ.ಟಿ. ರವಿ ಅವರನ್ನು ಗೆಲ್ಲಿಸಲು ಡಿ.ಎಸ್. ಸುರೇಶ್ ಅವರು ಒಳ ಒಪ್ಪಂದ ಮಾಡಿಕೊಂಡು ವೇದಮೂರ್ತಿ ಅವರಿಗೆ ಈ ಕ್ಷೇತ್ರದಲ್ಲಿ ಟಿಕೆಟ್ ಕೊಡಲಾಗಿದೆ. ವೇದಮೂರ್ತಿ ಅಮಾಯಕರು ಇಂತಹವರನ್ನು ಕಣಕ್ಕೆ ನಿಲ್ಲಿಸುವ ಔಚಿತ್ಯವೇನಿತ್ತು. ಯಾವ ಮಾನದಂಡದ ಮೇಲೆ ಅವರಿಗೆ ಟಿಕೆಟ್ ನೀಡಲಾಗಿದೆ ಎಂಬುದನ್ನು ಯಡಿಯೂರಪ್ಪ ಅವರು ಸಾರ್ವಜನಿಕರಿಗೆ ತಿಳಿಸಬೇಕು ಎಂದು ಆಗ್ರಹಿಸಿದರು.
ನಂಬಿ ಮಂಗಗಳಾದೆವು: ಯಡಿಯೂರಪ್ಪ ಅವರು ಸ್ವಜಾತಿಗೆ ಮಣೆ ಹಾಕಿರುವುದನ್ನು ತಾವುಗಳು ಉಗ್ರವಾಗಿ ಖಂಡಿಸುತ್ತೇವೆ. ಅವರಿಗೆ ಕಾರ್ಮಿಕರ, ಜನಪರ ಕಾಳಜಿ ಇಲ್ಲ. ಅವರನ್ನು ನಂಬಿ ನಾವುಗಳು ಮಂಗಗಳಾಗಿದ್ದೇವೆ. ಇದರಿಂದಾಗಿ ಬಹಳ ನಿರಾಶೆಯಾಗಿದೆ ಎಂದ ದೇವರಾಜ್, ಸದ್ಯ ತಾವು ಯಾವುದೇ ಪಕ್ಷಕ್ಕೆ ಹೋಗುವುದಿಲ್ಲ. ಜಿಲ್ಲೆಯಲ್ಲಿ ಬಿಜೆಪಿಯನ್ನು ಸೋಲಿಸುವುದೇ ನಮ್ಮ ಗುರಿ. ಅದುದರಿಂದ ಇನ್ನೆರಡು ದಿನಗಳಲ್ಲಿ ತೀರ್ಮಾನವನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ನಗರಸಭೆಯ ಮಾಜಿ ಅಧ್ಯಕ್ಷ ಜಮೀಲ್ ಅಹಮದ್, ಕೆಜೆಪಿ ನಗರಾಧ್ಯಕ್ಷ ರವಿಕುಮಾರ್, ಪಕ್ಷದ ಮುಖಂಡರು ಇದ್ದರು.