ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಸಂಸದ ವಿಶ್ವನಾಥ್ ಬಂಧನಕ್ಕೆ ಆಗ್ರಹಿಸಿ ಧರಣಿ

Lingaraj Badiger
Updated On : 19 Apr 2013, 10:59 am

ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಏ.18
ಬೆಂಗಳೂರಿನಲ್ಲಿ ಬಾಂಬ್ ಸ್ಪೋಟಕ್ಕೆ ಸಂಬಂಧಿಸಿದಂತೆ ಆರ್‌ಎಸ್‌ಎಸ್ ವಿರುದ್ಧ ಆರೋಪ ಮಾಡಿರುವ ಸಂಸದ ಎಚ್. ವಿಶ್ವನಾಥ್ ಅವರನ್ನು ಬಂಧಿಸುವಂತೆ ಆಗ್ರಹಿಸಿ ಆರ್‌ಎಸ್‌ಎಸ್ ಕಾರ್ಯಕರ್ತರು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಆರ್‌ಎಸ್‌ಎಸ್ ಜಿಲ್ಲಾ ಕಾರ್ಯವಾಹ ಮಹೇಶ್ ಬೆರಣಗೋಡು ಹಾಗೂ ಮಲ್ಲಿಕಾರ್ಜುನ್ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿ ಮನವಿಯಲ್ಲಿ ಸಲ್ಲಿಸಲಾಯಿತು.
ರಾಜಕೀಯ ಸ್ವಾರ್ಥ: ಬಾಂಬ್ ಸ್ಪೋಟದ ಹಿಂಸಾತ್ಮಕ ಮತ್ತು ಅಮಾನವೀಯ ಕೃತ್ಯ ಜನಸಾಮಾನ್ಯರು ಒಳಗೊಂಡಂತೆ ನಾಡಿನ ಎಲ್ಲರೂ ಖಂಡಿಸುತ್ತಿರುವ ಬೆನ್ನಿನಲ್ಲೇ ವಿಕೃತ ಸಂಸ್ಕೃತಿಯ ಪ್ರತಿಬಿಂಬವಾಗಿರುವ ಸಂಸದ ಎಚ್. ವಿಶ್ವನಾಥ್ ಅವರು ತಮ್ಮ ಹೇಳಿಕೆಯಲ್ಲಿ ಸದರಿ ಬಾಂಬ್ ಸ್ಪೋಟದ ಕೃತ್ಯದ ಹಿಂದೆ ಆರ್‌ಎಸ್‌ಎಸ್ ಕೈವಾಡವಿದೆಯೆಂದು ಹೇಳುವುದರ ಮೂಲಕ ತಮ್ಮಲ್ಲಿ ಹುದುಗಿರುವ ವೈಯಕ್ತಿಕ ದ್ವೇಷ, ರಾಜಕೀಯ ಸ್ವಾರ್ಥವನ್ನು ಹೊರಗೆಡವಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಿದ್ದಾರೆ.
ಸೇವಾ ಚಟುವಟಿಕೆ: ಇಂದು ದೇಶದಾದ್ಯಂತ ಸುಮಾರು 1.75 ಲಕ್ಷಕ್ಕೂ ಹೆಚ್ಚು ಸೇವಾ ಪ್ರಕಲ್ಪಗಳನ್ನು ನಡೆಸುತ್ತಿರುವ, ದೇಶದಲ್ಲಿ ಯಾವುದೇ ಪ್ರತಿಕೂಲ ವಾತಾವರಣ, ಪರಿಸ್ಥಿತಿಗಳಲ್ಲಿ ತನ್ನನ್ನು ತಾನು ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ದೇಶಭಕ್ತಿಯನ್ನು ಪ್ರಕಟಿಸುತ್ತಿರುವ, ಆಪತ್ತಿನ ಸಂದರ್ಭದಲ್ಲಿ ಎದೆಯೊಡ್ಡಿ ನಿಲ್ಲುವುದರ ಮೂಲಕ ದೇಶದ ಬೆಂಗಾವಲಾಗಿ ನಿಲ್ಲುತ್ತಿರುವ ಆರ್‌ಎಸ್‌ಎಸ್ ದೇಶಭಕ್ತಿಯನ್ನು ಮೆಚ್ಚಿ ಅಂದಿನ ಪ್ರಧಾನಿ ನೆಹರೂರವರೆ ಗಣರಾಜ್ಯೋತ್ಸವದ ಪೆರೇಡ್‌ನಲ್ಲಿ ಆರ್‌ಎಸ್‌ಎಸ್ ಅನ್ನು ಭಾಗವಹಿಸಲು ಆಹ್ವಾನವಿತ್ತು ಅವಕಾಶ ಮಾಡಿಕೊಟ್ಟಿದ್ದರು.
 ನೀತಿ ಸಂಹಿತೆ ಉಲ್ಲಂಘನೆ: ಹೈದರಬಾದ್‌ನ ಚಂಡಮಾರುತದ ಸಂದರ್ಭದಲ್ಲಿ ಆರ್‌ಎಸ್‌ಎಸ್‌ನ ಸೇವಾ ಕಾರ್ಯವನ್ನು ಆಗಿನ ಪ್ರಧಾನಿ ಇಂದಿರಾಗಾಂಧಿಯವರೇ ಮೆಚ್ಚಿಕೊಂಡಿದ್ದರು. ಯುದ್ಧದ ಸಂದರ್ಭದಲ್ಲಿ ಪ್ರತ್ಯಕ್ಷವಾಗಿ ಯುದ್ಧಭೂಮಿಯಲ್ಲಿ ಭಾರತೀಯ ಸೈನಿಕರಿಗೆ ನೀಡಿದ ಆರ್‌ಎಸ್‌ಎಸ್ ಸಹಕಾರವನ್ನು ನೇರವಾಗಿ ಅಂದಿನ ಸೇನಾಧಿಕಾರಿಗಳು ಮೆಚ್ಚಿದ್ದರಲ್ಲದೆ ಮೋರ್ವಿ ದುರಂತದಲ್ಲೂ ಈ ಸಂಘಟನೆ ತನ್ನೆಲ್ಲ ಶಕ್ತಿ ಸಾಮರ್ಥ್ಯದೊಂದಿಗೆ ನೊಂದವರಿಗೆ ಶಿಬಿರಗಳ ಮೂಲಕ ಸಾಂತ್ವನ ಸಹಕಾರಗಳನ್ನು ನೀಡಿತ್ತು. ಇಂತಹ ಸಂಘಟನೆಯ ಬಗ್ಗೆ ವಿಶ್ವನಾಥ್ ತಮ್ಮ ಪ್ರಚೋದನಾಕಾರಿ ಹೇಳಿಕೆ ನೀಡುವುದರ ಮೂಲಕ ಕಾನೂನಿನ ಚೌಕಟ್ಟನ್ನು ಮೀರಿರುವುದಲ್ಲದೆ, ಚುನಾವಣೆಯ ಸಂದರ್ಭದಲ್ಲಿ ಚುನಾವಣಾ ನೀತಿ ಸಂಹಿತೆಯನ್ನೂ ಉಲ್ಲಂಘನೆ ಮಾಡಿರುವುದು ಸ್ಪಷ್ಟವಾಗಿ ಕಂಡು ಬರುತ್ತದೆ ಎಂದು ಆರೋಪಿಸಿದ್ದಾರೆ.
ಆದ್ದರಿಂದ ಅವರ ಮೇಲೆ ಕಾನೂನು ಕ್ರಮವನ್ನು ಜರುಗಿಸಬೇಕು ಹಾಗೂ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಗೆ ಸಂಬಂಧಿಸಿದಂತೆ ಕಾನೂನಿನ ಕ್ರಮ ಜರುಗಿಸಿ ಕೂಡಲೇ ವಿಶ್ವನಾಥ್‌ರನ್ನು ಬಂಧಿಸಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ನರೇಂದ್ರ, ಕೇಶವ್ ಸೇರಿದಂತೆ ಸಂಘಟನೆಯ ಮುಖಂಡರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement