10ರಲ್ಲಿ 1 ತಿರಸ್ಕೃತ
ಮೂಡಿಗೆರೆ: ಮೂಡಿಗೆರೆ ಮೀಸಲು ವಿಧಾನಸಭಾ ಚುನಾವಣೆಯಲ್ಲಿ 10 ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಿದ್ದು, ಒಂದು ನಾಮಪತ್ರ ತಿರಸ್ಕೃತಗೊಂಡಿದೆ.
ಬಿಜೆಪಿಯ ಎಂ.ಪಿ. ಕುಮಾರಸ್ವಾಮಿ, ಕಾಂಗ್ರೆಸ್‌ನ ಬಿ.ಎನ್. ಚಂದ್ರಪ್ಪ, ಜೆಡಿಎಸ್‌ನ ಬಿ.ಬಿ. ನಿಂಗಯ್ಯ, ಸಿಪಿಐನ ಸಾತಿ ಸುಂದರೇಶ್, ಬಿಎಸ್‌ಪಿಯ ಯು.ಬಿ. ಮಂಜಯ್ಯ, ಸಿಪಿಐಎಂಎಲ್‌ನ ಕುಮಾರ್, ಪಕ್ಷೇತರರಾಗಿ ನಂಜುಂಡ, ಬಿ.ಕೆ. ಗೋಪಾಲ್, ಬಿ.ಎಂ. ರಮೇಶ್, ಬಿಎಸ್ಸಾರ್ ಕಾಂಗ್ರೆಸ್‌ನ ಮಂಜುನಾಥ್ ನಾಮಪತ್ರ ಸಲ್ಲಿಸಿದ್ದರು.
ಗುರುವಾರ ನಾಮಪತ್ರ ಪರೀಶಿಲನೆ ನಡೆಸಿದ ಕಂದಾಯ ಉಪವಿಭಾಗಾಧಿಕಾರಿ ಹಾಗೂ ಚುನಾವಣಾಧಿಕಾರಿ ಎ.ವಿ. ರುದ್ರಪ್ಪಾಜಿರಾವ್ ಬಿಎಸ್ಸಾರ್ ಕಾಂಗ್ರೆಸ್ ಅಭ್ಯರ್ಥಿಗೆ ಸೂಚಕರಿಲ್ಲದೆ ಇರುವುದರಿಂದ ಅವರ ನಾಮಪತ್ರ ತಿರಸ್ಕೃತಗೊಂಡಿದೆ ಎಂದು ತಿಳಿಸಿದ್ದಾರೆ.
ವಿಜಯವಾಹಿನಿ ಇಂದಿನಿಂದ ಸಂಚಾರ
ಮೂಡಿಗೆರೆ: ಸಿಪಿಐ ಅಭ್ಯರ್ಥಿ ಸಾತಿ ಸುಂದರೇಶ್ ಪರ ಮತಯಾಚಿಸಲು ವಿಜಯವಾಹಿನಿ ಹೆಸರಿನ ವಾಹನ 20 ರಿಂದ ಅಧಿಕೃತವಾಗಿ ಮೂಡಿಗೆರೆ ಕ್ಷೇತ್ರದಲ್ಲಿ ಸಂಚರಿಸಲಿದೆ ಎಂದು ಪಕ್ಷದ ತಾಲೂಕು ಕಾರ್ಯದರ್ಶಿ ಗೋಪಾಲ್ ಎನ್. ಶೆಟ್ಟಿ ಹೇಳಿದ್ದಾರೆ.
ಈ ಕುರಿತು ಶುಕ್ರವಾರ ಹೇಳಿಕೆ ನೀಡಿದ್ದು, ವಾಹನದಲ್ಲಿ ಪಕ್ಷದ ಹೋರಾಟ ಮತ್ತು ಅಭ್ಯರ್ಥಿಯ ಗುರುತನ್ನು ಚಿತ್ರಿಸಲಾಗಿದೆ. ಪ್ರಚಾರಕ್ಕೆ ತಕ್ಕಂತೆ ವೇದಿಕೆಯನ್ನು ಹೊಂದಿದೆ. ವೇದಿಕೆ ಹಿಂಭಾಗದಲ್ಲಿ ಕರ್ನಾಟಕದ ಶಕ್ತಿ ಕೇಂದ್ರ ವಿಧಾನಸೌಧವನ್ನು ಜನತೆಗೆ ತೋರಿಸಲಾಗಿದೆ. ಭ್ರಷ್ಟ ರಾಜಕಾರಣಿಗಳಿಂದ ತುಂಬಿರುವ ವಿಧಾನಸೌಧದಲ್ಲಿ ಜನಪರ ಹೋರಾಟಗಾರರ ಧ್ವನಿ ಮೊಳಗಲಿ ಎಂಬ ಸಂಕಲ್ಪದಿಂದ ಜನರ ಬಳಿಗೆ ತೆರಳಿ ಮತ ಯಾಚಿಸಲಿರುವುದಾಗಿ ತಿಳಿಸಿದ್ದಾರೆ.
ವಿಜಯವಾಹಿನಿ ವಾಹನ ನಾಡಿನ ಹೆಸರಾಂತ ಸಾಹಿತಿಗಳು, ಗಣ್ಯರು ಸಿಪಿಐ ಪರವಾಗಿ ಮತಯಾಚನೆ ಮಾಡುವ ಸಂದೇಶವನ್ನು ರವಾನಿಸಲಿದೆ. ಪ್ರಮುಖ ಸ್ಥಳಗಳಲ್ಲಿ ಇಪ್ಟಾ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ರಾಜಕೀಯ ಪರಿಜ್ಞಾನವನ್ನು ಜನರಲ್ಲಿ ಜಾಗೃತಿ ಮೂಡಿಸಲಾಗುವುದು. ಪಕ್ಷ ನಾಲ್ಕನೇ ಹಂತದಲ್ಲಿ ವಿಜಯವಾಹಿನಿಗೆ ಚಾಲನೆ ನೀಡಲಾಗುವುದು ಎಂದಿದ್ದಾರೆ.
ಭದ್ರತಾ ಪಡೆ ಪಥ ಸಂಚಲನ
ಮೂಡಿಗೆರೆ: ರಾಜ್ಯ ವಿಧಾನಸಭೆಗೆ ನಡೆಯಲಿರುವ ಚುನಾವಣೆ ನಿಮಿತ್ತ ಮೂಡಿಗೆರೆ ಮೀಸಲು ಕ್ಷೇತ್ರದಲ್ಲಿ ಚುನಾವಣಾ ಅಕ್ರಮ ನಡೆಯದಂತೆ ತಡೆಯಲು ಹಾಗೂ ಶಾಂತಿ, ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಭದ್ರತೆ ಕಾಪಾಡಲು ಬಿಗಿ ಭದ್ರತೆ ಏರ್ಪಡಿಸಿದೆ.
ಈ ಸಂಬಂಧ ದೆಹಲಿಯಿಂದ ಬಂದಿರುವ ಪ್ಯಾರಾ ಮಿಲಿಟರಿ ಪಡೆಯ ಸಶಸ್ತ್ರ ಪಡೆಯ ಒಂದು ತುಕಡಿ ವಾರದ ಸಂತೆ ದಿನವಾದ ಶುಕ್ರವಾರದಂದು ಮೂಡಿಗೆರೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ನಡೆಸಿದರು. ಪಥ ಸಂಚಲನದ ವೇಳೆ ವೃತ್ತ ನಿರೀಕ್ಷಕ ರಮೇಶ್ ನೇತೃತ್ವ ವಹಿಸಿದ್ದರು.