ಈಜಲು ಹೋಗಿ ಬೆಂಗಳೂರಿನ ವಿದ್ಯಾರ್ಥಿ ಸಾವು
ತರೀಕೆರೆ: ಕೆರೆಯಲ್ಲಿ ಈಜಲು ಹೋಗಿ ಬೆಂಗಳೂರಿನ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ಘಟನೆ ಸಮೀಪದ ಬಾವಿಕೆರೆ ಬಳಿ ಶುಕ್ರವಾರ ಸಂಜೆ ಸಂಭವಿಸಿದೆ. ಮೃತಪಟ್ಟ ವಿದ್ಯಾರ್ಥಿ ಬೆಂಗಳೂರಿನ ಕಿರಣ್‌ಕುಮಾರ್ (22) ಎಂದು ಗುರುತಿಸಲಾಗಿದೆ. ಈತ ತನ್ನ ಸಹಪಾಠಿಗಳೊಂದಿಗೆ ಬೆಂಗಳೂರಿನಿಂದ ಪ್ರವಾಸ ಬಂದಿದ್ದು, ಭಾವಿಕೆರೆ ಬಳಿ ಇರುವ ಕೆರೆಯಲ್ಲಿ ಇವರೆಲ್ಲ ಈಜಲು ಹೋದಾಗ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಕಿರಣ್ ಕುಮಾರ್ ಬೆಂಗಳೂರಿನ ಎಆರ್‌ಟಿಒ ಕಚೇರಿಯ ನೌಕರ ತಮ್ಮಣ್ಣ ಎಂಬುವರ ಪುತ್ರ.
ನಿಯಂತ್ರಣ ತಪ್ಪಿ ಹಳ್ಳಕ್ಕೆಬಿದ್ದ ಕಾರು
ಕೊಪ್ಪ: ಇಲ್ಲಿನ ದ್ಯಾವೇಗೌಡ ವೃತ್ತದಿಂದ ತಾಲೂಕು ಕಚೇರಿಗೆ ತೆರಳುವ ಮಾರ್ಗದಲ್ಲಿರುವ ಮುಸರೇ ಹಳ್ಳದ ಸೇತುವೆಯಿಂದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಘಟನೆ ಶುಕ್ರವಾರ ಸಂಬವಿಸಿದ್ದು ಚಾಲಕ ಆಶ್ಚರ್ಯಕರ ರೀತಿಯಲ್ಲಿ ಪ್ರಾಣಪಾಯದಿಂದ ಪರಾಗಿದ್ದಾನೆ.
ಬಾಲಮಂದಿರದ 2 ಬಾಲಕರು ನಾಪತ್ತೆ
ಚಿಕ್ಕಮಗಳೂರು: ನಗರದ ಹೌಸಿಂಗ್ ಬೋರ್ಡ್‌ನಲ್ಲಿರುವ ಸರ್ಕಾರಿ ಬಾಲಕರ ಬಾಲ ಮಂದಿರದಿಂದ ಇಬ್ಬರು ಬಾಲಕರು ನಾಪತ್ತೆಯಾಗಿದ್ದಾರೆ. ನಾಗ (16) ಮತ್ತು ಸಮೀರ್ ಖಾನ್ (15) ಎಂಬ ಬಾಲಕರು ನಾಪತ್ತೆಯಾಗಿದ್ದಾರೆ. ಗುರುವಾರ ಸರ್ಕಾರಿ ಬಾಲಕರ ಬಾಲಮಂದಿರದ ಆವರಣದ ಕಂಬ ಏರಿ ತಪ್ಪಿಸಿಕೊಂಡು ಹೋಗಿದ್ದಾರೆ. ಇವರ ಬಗ್ಗೆ ದೊರೆತಲ್ಲಿ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ಕೋರಲಾಗಿದೆ.