ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಚಿಕ್ಕಮಗಳೂರು ಜಿಲ್ಲೆಯಲ್ಲಿ ನೀರಿಗೆ ಹಾಹಾಕಾರ

Lingaraj Badiger
Updated On : 20 Apr 2013, 10:59 am

ಕ.ಪ್ರ.ವಾರ್ತೆ ಚಿಕ್ಕಮಗಳೂರು  ಏ.19
ಜಿಲ್ಲೆಯ ಬಯಲುಸೀಮೆ ಬಿಸಿಲಿನ ಝಳಕ್ಕೆ ತತ್ತರಿಸುತ್ತಿದೆ. ಎಲ್ಲೆಡೆ ಕುಡಿಯುವ ನೀರಿನ ಅಭಾವ ದಿನ ದಿನಕ್ಕೂ ತೀವ್ರವಾಗುತ್ತಿದೆ. ಈ ಸಮಸ್ಯೆಗೆ ಸ್ಪಂಧಿಸಬೇಕಾದ ಅಧಿಕಾರಿಗಳು ಹಳ್ಳಿಗಳತ್ತ ಮುಖ ಮಾಡುತ್ತಿಲ್ಲ.
ಅರಣ್ಯರೋದನವಾದ ಗ್ರಾಮೀಣರ ಕೂಗು ಕಿವಿಗೆ ಹಾಕಿಕೊಳ್ಳಲು ಜನಪ್ರತಿನಿಧಿಗಳಿಗೆ ಟೈಂ ಇಲ್ಲ, ಅಧಿಕಾರಿಗಳು ಚುನಾವಣಾ ಕರ್ತವ್ಯದಲ್ಲಿ ಬಿಜಿಯಾಗಿದ್ದಾರೆ. ಬರ ನಿರ್ವಹಣೆಗೆ ರಚನೆ ಮಾಡಿದ್ದ ಅಧಿಕಾರಿಗಳ ತಂಡ ಎರಡು ದೋಣಿಯ ಮೇಲೆ ಕಾಲಿಟ್ಟು ಮುಂದೆ ಸಾಗಬೇಕಾದ ಅನಿವಾರ್ಯತೆಯಲ್ಲಿ ಸಿಲುಕಿದ್ದಾರೆ.
ಬರ ಪೀಡಿತ ತಾಲೂಕು: ಕಳೆದ ಒಂದು ದಶಕಕ್ಕೆ ಹೋಲಿಕೆ ಮಾಡಿದರೆ ಇದೇ ಪ್ರಥಮ ಬಾರಿಗೆ ಚಿಕ್ಕಮಗಳೂರು ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಮಳೆ ಇಲ್ಲದೆ ಬರಗಾಲ ಬಂದಿದೆ.
ಬರ ಪೀಡಿತ ರಾಜ್ಯದ 157 ತಾಲೂಕುಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ, ಕಡೂರು, ಚಿಕ್ಕಮಗಳೂರು ಹಾಗೂ ಮೂಡಿಗೆರೆ ತಾಲೂಕುಗಳು ಸಹ ಸೇರಿಕೊಂಡಿವೆ. ಸಕಾಲದಲ್ಲಿ ಮಳೆ ಬರದೆ ರೈತರು ಬೆಳೆ ಕಳೆದುಕೊಂಡರು. ಅಂತರ್ಜಲ ಮಟ್ಟ ಕುಸಿದಿದ್ದರಿಂದ ಹೊಸದಾಗಿ ಕೊರೆಸಿದ ಹಾಗೂ ಹಳೆಯ ಬೋರ್‌ವೆಲ್‌ಗಳು ನೀರಿಲ್ಲದೆ ಬತ್ತಿ ಹೋಗಿವೆ. ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ರಾಜ್ಯ ಸರ್ಕಾರ ಕೋಟ್ಯಂತರ ರುಪಾಯಿ ಬಿಡುಗಡೆ ಮಾಡಿದೆ. ಅದರಂತೆ ಚಿಕ್ಕಮಗಳೂರು ಜಿಲ್ಲೆಗೆ ವಿವಿಧ ಹಂತಗಳಲ್ಲಿ 16.90 ಕೋಟಿ ಬಿಡುಗಡೆಯಾಗಿದೆ.
ನೀರಿಗಾಗಿ ಹಾಹಾಕಾರ: ಕುಡಿಯುವ ನೀರಿನ ಅಭಾವ ಕೇವಲ ಗ್ರಾಮಾಂತರ ಪ್ರದೇಶಕ್ಕೆ ಮಾತ್ರ ಸೀಮಿತಗೊಂಡಿಲ್ಲ. ನಗರ ಮತ್ತು ಪಟ್ಟಣ ಪ್ರದೇಶಗಳು ನೀರಿನ ಹಾಹಾಕಾರ ಎದುರಿಸುತ್ತಿವೆ. ಸ್ಥಳೀಯ ಸಂಸ್ಥೆಗಳಿಗೆ ನೀರು ಸರಬರಾಜಿಗಾಗಿ ರಾಜ್ಯ ಸರ್ಕಾರ ಚಿಕ್ಕಮಗಳೂರು, ತರೀಕೆರೆ, ಕಡೂರು ಹಾಗೂ ಬೀರೂರು ಪಟ್ಟಣಗಳಿಗೆ ಕಳೆದ ಮಾ.6 ರಂದು 50 ಲಕ್ಷ ಬಿಡುಗಡೆ ಮಾಡಿತ್ತು. ಮಾರ್ಚ್ 23 ರಂದು ಚಿಕ್ಕಮಗಳೂರು ನಗರಕ್ಕೆ 5 ಲಕ್ಷ, ಕಡೂರು ಪಟ್ಟಣಕ್ಕೆ 10 ಲಕ್ಷ ಬಿಡುಗಡೆಯಾಗಿದೆ.
ಬಾಯಾರಿದ ಜನರಿಗೆ ನೀರೋದಗಿಸಲು ಹಣ  ಬಿಡುಗಡೆಯಾಗಿದೆ. ನಿಜ, ಆದರೆ, ಆ ಹಣದ ಬಳಕೆಯ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಅದಕ್ಕಾಗಿ ಹೋಬಳಿವಾರು ನೋಡಲ್ ಅಧಿಕಾರಿಗಳನ್ನು  ನೇಮಕ ಮಾಡಲಾಗಿದೆ. ಅವರು ಪ್ರತಿವಾರ ಹೋಬಳಿವಾರು ಗ್ರಾಮಗಳಲ್ಲಿ ಪ್ರವಾಸ ಕೈಗೊಳ್ಳಬೇಕು. ಕುಡಿಯುವ ನೀರಿನ ಸಮಸ್ಯೆ, ಮೇವಿನ ಸಮಸ್ಯೆ, ಜಾನುವಾರು ಸಂರಕ್ಷಣೆ, ಗ್ರಾಮೀಣಾಭಿವೃದ್ಧಿ ಹಾಗೂ ಜಿಲ್ಲಾ ಪಂಚಾಯ್ತಿಯಿಂದ ಮಂಜೂರಾಗಿರುವ ಕಾಮಗಾರಿಗಳನ್ನು ತಪಾಸಣೆ ಮಾಡಬೇಕು.
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೈಗೊಂಡಿರುವ ಬರಪರಿಹಾರ ಕಾಮಗಾರಿಗಳನ್ನು ಪರಿಶೀಲಿಸಬೇಕು. ಗೋಶಾಲೆಗಳ ನಿರ್ವಹಣೆ, ಕುಡಿಯುವ ನೀರು ಮತ್ತು ಜಾನುವಾರುಗಳ ಕುಡಿಯುವ ನೀರಿನ ಕಾಮಗಾರಿಗಳನ್ನು ಪರಿಶೀಲಿಸಬೇಕು. ರೈತರಿಗೆ ಕೊಟ್ಟಿರುವ ಜಾನುವಾರುಗಳ ಮೇವಿನ ಕಿಟ್‌ಗಳ ಬಳಕೆ, ಮುಂದೆ ತಲೆದೋರಬಹುದಾದ ನೀರಿನ ಸಮಸ್ಯೆಗಳ ಸ್ಥಳಗಳ ಪರಿಶೀಲನೆ, ವಿದ್ಯುತ್ ಸಮಸ್ಯೆಗಳ ಪರಿಶೀಲನೆ ಮಾಡಿ ಈ ಎಲ್ಲಾ ಮಾಹಿತಿಯನ್ನು ಜಿಲ್ಲಾ ಬರ ಪರಿಹಾರ ನೋಡಲ್ ಅಧಿಕಾರಿಗಳಿಗೆ ಒದಗಿಸಬೇಕು.
ಚುನಾವಣಾ ಕರ್ತವ್ಯ: ಬರ ನಿರ್ವಹಣೆಗೆ ಹೋಬಳಿವಾರು ನೋಡಲ್ ಅಧಿಕಾರಿಗಳು ಹಾಗೂ ತಾಲೂಕು ಮಟ್ಟದಲ್ಲಿ ಅಧಿಕಾರಿಗಳ ತಂಡಗಳನ್ನು ರಚನೆ ಮಾಡಲಾಗಿದೆ. ಆದರೆ, ಅವರನ್ನು ಚುನಾವಣಾ ಕರ್ತವ್ಯಗಳಿಗೆ ನಿಯೋಜನೆ ಮಾಡಲಾಗಿದೆ.
ಗ್ರಾಮಾಂತರ ಪ್ರದೇಶದಲ್ಲಿ ಕುಡಿಯುವ ನೀರಿನ ಬಗ್ಗೆ ನಿಗಾ ಇಡಲು ಜಿಲ್ಲಾ ಪಂಚಾಯ್ತಿಯಲ್ಲಿ ಇಂಜಿನಿಯರಿಂಗ್ ವಿಭಾಗ ಇದೆ. ಅಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರು ಇರುತ್ತಾರೆ. ಅವರನ್ನು ಸಹ ಮಾದರಿ ನೀತಿ ಸಂಹಿತೆ ತಂಡಕ್ಕೆ ನಿಯೋಜನೆ ಮಾಡಲಾಗಿದೆ.
ಕೆಲವರನ್ನು ಡೇ ಅಂಡ್ ನೈಟ್ ಸ್ಕ್ವಾಡ್‌ಗೆ ನಿಯೋಜಿಸಲಾಗಿದೆ. ಚುನಾವಣಾ ಕರ್ತವ್ಯದಲ್ಲಿ ಫುಲ್ ಬಿಜಿಯಾಗಿರುವ ಅಧಿಕಾರಿಗಳಿಗೆ ನೀರಿನ ಅಭಾವ ಇರುವ ಗ್ರಾಮಗಳಿಗೆ ಭೇಟಿ ನೀಡಲು ಸಾಧ್ಯವಾಗುತ್ತಿಲ್ಲ. ಕೆಲವು ಅಧಿಕಾರಿಗಳು ಈ ಕಾರಣವನ್ನು ಕೊಟ್ಟು ತಮ್ಮನ್ನು ಬರ ನಿರ್ವಹಣೆ ಕೆಲಸಕ್ಕೆ ಮಾತ್ರ ಸೀಮಿತಗೊಳಿಸುವಂತೆ ಸಲ್ಲಿಸಿದ ಅಹವಾಲುಗಳನ್ನು ಜಿಲ್ಲಾಡಳಿತ ಸಾರಾಸಗಟಾಗಿ ತಳ್ಳಿ ಹಾಕಿದೆ. ಈ ಬಗ್ಗೆ ಹೆಸರು ಹೇಳಲು ಇಚ್ಚಿಸದ ಅಧಿಕಾರಿಯೋರ್ವರು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ಎಲ್ಲ್ಲೆಲ್ಲಿ ಸಮಸ್ಯೆ: ಚಿಕ್ಕಮಗಳೂರು ತಾಲೂಕಿನ ಲಕ್ಯಾ, ಬೆಳವಾಡಿ, ಕಳಸಾಪುರ ಸೇರಿದಂತೆ ಹಲವೆಡೆ ನೀರಿನ ಸಮಸ್ಯೆ ಇದ್ದು, ಈ ಭಾಗದಲ್ಲಿ ಬೋರ್‌ವೆಲ್ ಕೊರೆಸಿದರೂ ಹೆಚ್ಚು ನೀರು ಬರುತ್ತಿಲ್ಲ. ಈ ತಾಲೂಕಿನಲ್ಲಿ ಈವರೆಗೆ 125 ಬೋರ್‌ವೆಲ್ ಕೊರೆಸಿದ್ದು, ಇವುಗಳಲ್ಲಿ 35 ಬೋರ್‌ವೆಲ್‌ಗಳಲ್ಲಿ ನೀರು  ಬಂದಿರುವುದಿಲ್ಲ. ಇನ್ನು ಕೆಲವೆಡೆ ವಿದ್ಯುತ್ ಅಭಾವ ಇದೆ.
ಇನ್ನು ಕಡೂರು ತಾಲೂಕಿನಲ್ಲಿ ನೀರಿಲ್ಲದ ಗ್ರಾಮಗಳೇ ಹೆಚ್ಚು. ಸಖರಾಯಪಟ್ಟಣ, ಎಮ್ಮೆದೊಡ್ಡಿ, ನಾಗೇನಹಳ್ಳಿ, ಕೇತುಮಾರನಹಳ್ಳಿ ಸೇರಿದಂತೆ ಸುಮಾರು 12 ಗ್ರಾಮಗಳಲ್ಲಿ ನೀರಿನ ಕೊರತೆ ಉಂಟಾಗಿದ್ದು, ಇಲ್ಲಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕಾಗಿದೆ.
ಇದಕ್ಕಾಗಿ ಸಂಬಂಧಿಸಿದ ಅಧಿಕಾರಿಗಳಿಂದ ಲಿಖಿತವಾಗಿ ಆದೇಶ ಬೇಕಾಗಿದ್ದು, ಪತ್ರ ವ್ಯವಹಾರ ನಡೆಸಬೇಕಾದ, ಆದೇಶ ನೀಡಬೇಕಾದ ಅಧಿಕಾರಿಗಳು ಚುನಾವಣಾ ಕರ್ತವ್ಯದಲ್ಲಿದ್ದಾರೆ. ತರೀಕೆರೆ ತಾಲೂಕಿನ ದೋರನಾಳ್, ಕೂಡ್ಲೂರು, ಕೊರಟಗೆರೆಗಳಲ್ಲಿ ನೀರಿನ ತೊಂದರೆ ಇದೆ.
ಚುನಾವಣೆಯ ಪ್ರಚಾರ ಕಾವು ಇನ್ನೆರಡು ದಿನಗಳಲ್ಲಿ ಏರಲಿದೆ. ಆದರೆ, ಬೇಸಿಗೆ ಬಿಸಿಲಿನ ಕಾವು, ಭೂಮಿಯ ಅಂತರ್ಜಲ ಮಟ್ಟವನ್ನು ಕುಗ್ಗಿಸುತ್ತಿದೆ. ಎಲ್ಲೆಡೆ ನೀರಿನ ಹಾಹಾಕಾರದ ಕೂಗು ಕೇಳಿ ಬರುತ್ತಿದೆ.
-ಆರ್. ತಾರಾನಾಥ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement