ನಿಜವಾದ ಸಮಾಜವಾದಿ ನಿಲುವುಗಳಿರುವ ಅಭ್ಯರ್ಥಿಗೆ ಮತ ನೀಡಿ
ಕ.ಪ್ರ ವಾರ್ತೆ, ಮೂಡಿಗೆರೆ, ಏ.19
ಜಾಗತೀಕರಣ ಅಳಿಸಲು, ಭ್ರಷ್ಟಾಚಾರ ಬಗ್ಗು ಬಡಿಯಲು, ಕೋಮುವಾದಿ ಮತ್ತು ಜಾತಿವಾದಿಗಳನ್ನು ಸೋಲಿಸುವ ಮೂಲಕ ನಿಜವಾದ ಸಮಾಜವಾದಿ ನಿಲುವುಗಳಿರುವ ಅಭ್ಯರ್ಥಿಗಳಿಗೆ ಮತ ಚಲಾಯಿಸುವಂತೆ ಸಿಪಿಐಎಂಎಲ್ ರಾಜ್ಯ ಕಾರ್ಯದರ್ಶಿ ಬಿ. ರುದ್ರಯ್ಯ ಒತ್ತಾಯಿಸಿದರು.
ಅವರು ಶುಕ್ರವಾರ ಮೂಡಿಗೆರೆಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ನಂಥ ರಾಜಕೀಯ ಪಕ್ಷಗಳು ಪ್ರತಿ ಚುನಾವಣೆಗಳಲ್ಲಿ ಪರಸ್ಪರ ಕಚ್ಚಾಟ ನಡೆಸುತ್ತದೆ. ಗೆದ್ದ ಬಳಿಕ ಮುಖಂಡರೆಲ್ಲರೂ ಒಂದಾಗಿ ಜನವಿರೋಧಿ ನೀತಿ ಅನುಸರಿಸುತ್ತಾರೆ.ತತ್ವ, ಸಿದ್ಧಾಂತ, ದೇಶಭಕ್ತಿ ಹೆಸರಿನಲ್ಲಿ ಅಧಿಕಾರ ಹಿಡಿದ ಬಿಜೆಪಿ ಹಿಂದುತ್ವ, ಕೋಮುವಾದ, ಭ್ರಷ್ಟಾಚಾರ, ಹಗರಣಗಳಿಂದ ಮುಳುಗಿ ಹೋಗಿರುವುದು ನಾಚಿಕೆಗೇಡಿನ ಸಂಗತಿ ಎಂದು ಅಭಿಪ್ರಾಯಪಟ್ಟರು.
ಚುನಾವಣೆಯಲ್ಲಿ ಪ್ರತಿ ಮನೆಗಳಿಗೆ ತೆರಳುತ್ತಿರುವ ಪಕ್ಷಗಳ ಮುಂದೆ ಸಿಪಿಐಎಂಲ್ ಮೂರು ವಿಷಯಗಳಲ್ಲಿ ನಿಮ್ಮ ನಿಲುವೇನು ಎನ್ನುವ ಪ್ರಶ್ನೆಗಳನ್ನು ಮುಂದಿಡುತ್ತಿದೆ. ಮಲೆನಾಡಿನಲ್ಲಿ ಭೂಮಿತಿ ಕಾಯ್ದೆ ಜಾರಿಗೊಳಿಸಬೇಕೇ ಬೇಡವೇ, ಭೂಮಾಲೀಕರಿಂದ ಒತ್ತುವರಿಯಾಗಿರುವ ಭೂಮಿ ತೆರವುಗೊಳಿಸಬೇಕೇ, ಬೇಡವೇ ಹಾಗೂ ಅವುಗಳನ್ನು ಬಡವರ ಬದುಕಿಗಾಗಿ ಹಂಚಬೇಕೇ, ಬೇಡವೇ ಈ ಕುರಿತು ವಿವಿಧ ರಾಜಕೀಯ ಪಕ್ಷಗಳು ತಮ್ಮ ನಿಲುವುಗಳನ್ನು ಸ್ಪಷ್ಟಪಡಿಸುವಂತೆ ಸವಾಲೆಸೆದರು. ಸಿಪಿಐಎಂಎಲ್ ಅಭ್ಯರ್ಥಿ ಕುಮಾರ್, ಮುಖಂಡ ಗೋಪಾಲ್ ಉಪಸ್ಥಿತರಿದ್ದರು.