ಕಾಂಗ್ರೆಸ್ ಬುಟ್ಟಿಗೆ ಕೈ ಹಾಕಲು ಸಾಧ್ಯವಿಲ್ಲ
ಚಿಕ್ಕಮಗಳೂರು: ಕಾಂಗ್ರೆಸ್ ಪಕ್ಷದ ಮತ ಬುಟ್ಟಿಗೆ ಲಗ್ಗೆ ಹಾಕಲು ಯಾರಿಂದಲೂ ಸಾಧ್ಯವಿಲ್ಲ. ಕಾಂಗ್ರೆಸ್ ಮತಗಳ ಭದ್ರ ಕೋಟೆಯನ್ನು ಭೇದಿಸಲು ಸಿ.ಟಿ. ರವಿಯವರ ಯಾವ ತಂತ್ರಗಾರಿಕೆಯೂ ಫಲ ನೀಡುವುದಿಲ್ಲ ಎಂದು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಎಸ್. ಶಾಂತೇಗೌಡ ಹೇಳಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಡೆದ ಭ್ರಷ್ಟಚಾರ, ಅನಾಚಾರ, ದುರಾಡಳಿತದಿಂದ ಬಿಜೆಪಿಯ ಬಗ್ಗೆ ಜನರು ಬೇಸತ್ತಿದ್ದು, ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಈಗಾಗಲೇ ಖಚಿತವಾಗಿದ್ದು, ಈ ಹಿನ್ನಲೆಯಲ್ಲಿ ತಮ್ಮ ಗೆಲವು ಸುಲಭ ದಾರಿಯಲ್ಲಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸೋಲಿನ ಭಯದಿಂದ ಸಚಿವ ಸಿ.ಟಿ. ರವಿ ಯವರು ಬೇರೆ ಪಕ್ಷದಲ್ಲಿನ ಕೆಲವು ಅತೃಪ್ತ ಕಾರ್ಯಕರ್ತರಿಗೆ ಹಣ ಅಮಿಷವೊಡ್ಡಿ ತಮ್ಮ ಪಕ್ಷಕ್ಕೆ ಸೇರಿಸಿಕೊಂಡು ಅದನ್ನೇ ದೊಡ್ಡ ಪ್ರಚಾರವಾಗಿ ಮಾಡಿಕೊಂಡು ಕಾಂಗ್ರೆಸ್ ಮತ್ತು ಇತರೆ ಪಕ್ಷಗಳ ಮತ ಬುಟ್ಟಿಗೆ ಲಗ್ಗೆ ಹಾಕುತ್ತಿರುವುದಾಗಿ ಹೇಳಿಕೊಳ್ಳುತ್ತಿರುವ ತಂತ್ರಗಾರಿಕೆ ಸಿ.ಟಿ. ರವಿಯವರಿಗೆ ತಿರುಗುಬಾಣವಾಗಲಿದೆ ಎಂದು ಹೇಳಿದರು.
ಅಭಿವೃದ್ಧಿ ಅವರದಲ್ಲ: ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಹಿಂದೆ ಯಾರೂ ಮಾಡದಷ್ಟು ಅಭಿವೃದ್ಧಿ ಕೆಲಸ ಮಾಡಿರುವುದಾಗಿ ಸಚಿವರು ಹೇಳುತ್ತಿದ್ದಾರೆ. ಆದರೆ, ಇದರಲ್ಲಿ ಅವರ ಹೆಚ್ಚುಗಾರಿಕೆ ಏನೂ ಇಲ್ಲ. ದೇಶದಲ್ಲಿ ಹಿಂದೆಯೇ ನಿರ್ಧಾರವಾಗಿರುವಂತೆಯೆ ಆಯಾ ಕಾಲದ ಯೋಜನೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬಜೆಟ್ನಲ್ಲಿ ಹೆಚ್ಚು ಹಣ ಒದಗಿಸಲಾಗುತ್ತಿದೆ. ಈ ಅನುದಾನದಿಂದಾಗಿರುವ ಕೆಲಸಗಳನ್ನು ತಮ್ಮ ಸಾಧನೆಯೆಂದು ಹೇಳಿದ್ದು, ಸುಳ್ಳು ಹೇಳಿಕೊಂಡು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಬೇನಾಮಿ ಗುತ್ತಿಗೆದಾರ: ತಾವು ಗುತ್ತಿಗೆದಾರರಾಗಿದ್ದರಿಂದ ಕಾಂಗ್ರೆಸ್ ಟಿಕೆಟ್ ನೀಡಿದೆ ಎಂದು ವಿರೋಧ ಪಕ್ಷದವರು ಟೀಕಿಸುತ್ತಿದ್ದಾರೆ. ನಾನು ಅಧಿಕೃತ ನೋಂದಾಯಿತ ಗುತ್ತಿಗೆದಾರನಾಗಿ ಜಿಲ್ಲೆಯಲ್ಲಿ ಹಲವಾರು ಕಾಮಗಾರಿಗಳನ್ನು ಮಾಡಿದ್ದು, ಯಾವುದೇ ಆರೋಪ ನನ್ನ ಮೇಲಿಲ್ಲ. ಪ್ರಸ್ತುತ ನನ್ನ ಗುತ್ತಿಗೆದಾರಿಕೆ ಲೈಸನ್ಸ್ನ್ನು ಸರ್ಕಾರಕ್ಕೆ ಹಿಂದಿರುಗಿಸಿದ್ದೇನೆ. ಪ್ರಸ್ತುತ ಬಿಜೆಪಿ ಅಭ್ಯರ್ಥಿ ಬೇನಾಮಿ ಗುತ್ತಿಗೆದಾರರಾಗಿ ಸಂಬಂಧಿ ಕೈಯಲ್ಲಿ ಗುತ್ತಿಗೆ ಮಾಡಿಸುತ್ತಿದ್ದು, ಜೆಡಿಎಸ್ ಅಭ್ಯರ್ಥಿಯೂ ಈ ಹಿಂದೆ ಗುತ್ತಿಗೆದಾರರಾಗಿ ಕಾರ್ಯನಿರ್ವಹಿಸಿದ್ದು ಮರೆಯಬಾರದು ಎಂದು ತಿರುಗೇಟು ನೀಡಿದರು.