ಹಣ, ಸೀರೆ ಹಂಚುತ್ತಿರುವ ಬಿಜೆಪಿ, ಕಾಂಗ್ರೆಸ್: ಆರೋಪ
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಏ.20
ತರಳಬಾಳು ಸ್ವಾಮೀಜಿಗಳಿಗೆ ಕೊಟ್ಟ ಮಾತಿಗೆ ತಪ್ಪಿ ಚುನಾವಣೆಯಲ್ಲಿ ಅಕ್ರಮವಾಗಿ ಹಣ, ಹೆಂಡ, ಸೀರೆ ಹಂಚುತ್ತಿರುವ ಬಿಜೆಪಿ ಚಾಳಿಯನ್ನು ಕಾಂಗ್ರೆಸ್ ಸಹ ಮುಂದುವರೆಸಿ ವಚನ ಭ್ರಷ್ಟತೆ ಪ್ರದರ್ಶಿಸಿದೆ ಎಂದು ಜೆಡಿಎಸ್ ಅಭ್ಯರ್ಥಿ ಎಸ್.ಎಲ್. ಧರ್ಮೇಗೌಡ ಆರೋಪಿಸಿದ್ದಾರೆ.
ಕಳಸಾಪುರ ಸುತ್ತ ಮುತ್ತ ಗ್ರಾಮಗಳಲ್ಲಿ ಶನಿವಾರ ಮತಯಾಚನೆ ಮಾಡಿ ಮಾತನಾಡಿದ ಅವರು, ಆರಂಭದಲ್ಲಿ ಇಂತಹ ಅಕ್ರಮಗಳನ್ನು ಬಿಜೆಪಿ ಕಾರ್ಯಕರ್ತರು ಮಾಡಿದ್ದರು. ಅದನ್ನೇ ಹಿಂಬಾಲಿಸಿದ ಕಾಂಗ್ರೆಸ್ ಪಕ್ಷದವರು ನಾವು ಕಮ್ಮಿ ಇಲ್ಲವೆಂಬಂತೆ ಮತದಾರರಿಗೆ ಆಮಿಷ ತೋರಿಸುತ್ತಿದ್ದಾರೆ ಎಂದರು.
ಬೀರೂರು ಕ್ಷೇತ್ರದ ಶಾಸಕನಾಗಿದ್ದ ಸಂದರ್ಭದಲ್ಲಿ ಜನತೆಗೆ ಅಗೌರವ ತರುವ ಕೆಲಸ ಎಂದೂ ಮಾಡಲ್ಲ. ಮುರಾರ್ಜಿ ವಸತಿ ಶಾಲೆಗಳ ಮೂಲಕ ಬಡವರ್ಗದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಕಾರಿಯಾಗಲೆಂದು ಒತ್ತುಕೊಟ್ಟಿದ್ದೇನೆ, ರೈತರ ಅನುಕೂಲಕ್ಕಾಗಿ ಡ್ರಿಪ್ ಇರಿಗೆಷನ್ ಮಾಡಿ ಸಾಮಾನ್ಯ ಜನರಿಗೆ ಸ್ಪಂದಿಸಿದ್ದೇನೆ ಎಂದು ಹೇಳಿದರು.
ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಅಭಿವೃದ್ಧಿ ಹೆಸರಿನಲ್ಲಿ ಭ್ರಷ್ಟಾಚಾರ ಹೆಚ್ಚಿದೆ, ಮತ್ತೊಂದೆಡೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಪತ್ನಿಯ ಕೈಯಲ್ಲಿ ಅಧಿಕಾರವಿದ್ದರು ಅದರಲ್ಲೆ ಜನಸೇವೆ ಮಾಡುವ ಬದಲು ಮತ್ತೊಂದು ಅಧಿಕಾರಕ್ಕಾಗಿ ಸ್ಪರ್ಧಿಸಿರುವುದು ಅವರ ಅಧಿಕಾರದ ಆಸೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ದೂರಿದರು.ಜಿ.ಪಂ. ಮಾಜಿ ಸದಸ್ಯ ಚಂದ್ರೇಗೌಡ, ಎಚ್ಡಿಕೆ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಹೊಲದಗದ್ದೆ ಗಿರೀಶ್, ಮುಖಂಡರಾದ ನಿಂಗೇಗೌಡ, ದಯಾನಂದ, ಪ್ರಕಾಶ್, ನೂರ್ ಅಹಮದ್, ಲಕ್ಷ್ಮಣಗೌಡ ಹಾಜರಿದ್ದರು.