ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮತಯಾಚನೆ
ತರೀಕೆರೆ: ತಾಲೂಕು ಕಾಂಗ್ರೆಸ್ ವತಿಯಿಂದ ಭಾನುವಾರ ಸಾಲುಮರದಮ್ಮನವರ ದೇವಸ್ಥಾನದ ಮುಂಭಾಗದಲ್ಲಿ ಪಕ್ಷದ ವಿಧಾನಸಭಾ ಕ್ಷೇತ್ರದ ಚುನಾವಣೆ ಅಭ್ಯರ್ಥಿ ಜಿ.ಎಚ್. ಶ್ರೀನಿವಾಸ್ ಅವರ ಪರ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಾಯಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಘನಿ ಅನ್ವರ್, ಪಕ್ಷದ ಅಭ್ಯರ್ಥಿ ಜಿ.ಎಚ್. ಶ್ರೀನಿವಾಸ್, ಜಿಲ್ಲಾ ಕಾಂಗ್ರೆಸ್ ಸಮಿತಿ ಖಚಾಂಚಿ ಬಿಎಸ್‌ಆರ್ ಮಂಜುನಾಥ್, ಮುಖಂಡರಾದ ಟಿ.ಎನ್. ಗೋಪಿನಾಥ್, ಎಸ್. ತಿಪ್ಪೇರುದ್ರಯ್ಯ, ಮಂಜುನಾಥ್ ಪ್ರಸಾದ್, ಟಿ.ಎಂ. ವೆಂಕಟೇಶ್, ಪದ್ಮರಾಜ್, ಟಿ.ಕೆ. ರಮೇಶ್, ಪರುಶುರಾಮ್, ಪಕ್ಷದ ಕಾರ್ಯಕರ್ತರು ಮತ್ತಿತರರುಭಾಗವಹಿಸಿದ್ದರು.
ಕಾಂಗ್ರೆಸ್ ಅಭ್ಯರ್ಥಿ ಜಿ.ಎಚ್. ಶ್ರೀನಿವಾಸ್ ಮಾತನಾಡಿ, ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ.
ತಾಲೂಕಿನ ಭದ್ರಾ ಹೆಬ್ಬೆ ಜಲಾಶಯ ಇತ್ಯಾದಿ ಯೋಜನೆಗಳ ಪ್ರಯೋಜನವನ್ನು ಪಡೆಯಬೇಕು, ಓಬಿರಾಯನ ಹಳ್ಳ ಪಥ ಪರಿವರ್ತನೆಗೆ ತಾವು ಪ್ರಯತ್ನಿಸುವುದಾಗಿ ತಿಳಿಸಿದ ಅವರು, ತಾವು ಶುದ್ಧಹಸ್ತರಾಗಿ ಜನರ ಸೇವೆ ಮಾಡಿ ಮಾದರಿ ತಾಲೂಕನ್ನಾಗಿಸಲು ತಾವು ಪ್ರಯತ್ನಿಸುವುದಾಗಿ ಶ್ರೀನಿವಾಸ್ ಅವರು ತಿಳಿಸಿದರು.
--
ಚುರುಕುಗೊಂಡ ಚುನಾವಣಾ ಪ್ರಚಾರ
ಶೃಂಗೇರಿ: ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ತಾಲೂಕಿನೆಲ್ಲೆಡೆ ವಿವಿಧ ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರವನ್ನು ಚುರುಕುಗೊಳಿಸಿವೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಈಗಾಗಲೇ ಮತದಾರರ ಮನವೊಲಿಸುವ ಕೆಲಸಕ್ಕೆ ಮುಂದಾಗಿದೆ. ಕಾರ್ಯಕರ್ತರ ಸಭೆಗಳು ನಡೆಯುತ್ತಿವೆ. ಕೆಲ ಅಭ್ಯರ್ಥಿಗಳು ಈಗಾಗಲೇ ಕ್ಷೇತ್ರದ ಪ್ರವಾಸ ಕೈಗೊಂಡಿದ್ದರೆ ಇನ್ನುಳಿದವರು ಪ್ರವಾಸದ ಸಿದ್ಧತೆಯಲ್ಲಿದ್ದಾರೆ. ಪಕ್ಷ ಬಿಟ್ಟು ಪಕ್ಷ ಸೇರುವ ಕೆಲಸಗಳು ಭರದಿಂದ ಸಾಗಿದೆ.