ಮನೆ, ಮನೆಗೆ ಮತದಾನ ಅರಿವು; ಶಿವಶಂಕರ್
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಏ.21
ವಿಧಾನಸಭಾ ಚುನಾವಣೆಗೆ ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ನಗರ, ಪಟ್ಟಣ ಪ್ರದೇಶಗಳಲ್ಲಿ ಪ್ರತೀ ಮನೆ, ಮನೆಗೆ ತೆರಳಿ ಮತದಾನದ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಲಾಗುವುದು ಎಂದು ಜಿಪಂ ಸಿಇಒ ಪಿ. ಶಿವಶಂಕರ್ ಹೇಳಿದ್ದಾರೆ.
ಜಿಪಂ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಗರ, ಪಟ್ಟಣ ಪ್ರದೇಶಗಳಲ್ಲಿ ಮತದಾನದ ಪ್ರಮಾಣ ಕಡಿಮೆ ಇರುವುದರಿಂದ ಆ ಪ್ರದೇಶಗಳಲ್ಲಿ ಗುರಿಯಾಗಿರಿಸಿ ಈ ಕಾರ್ಯಕ್ರಮ ನಡೆಯುತ್ತಿದೆ. ಏ.24ರಿಂದ 29ರ ವರೆಗೆ ಜಿಲ್ಲೆಯ ಎಲ್ಲಾ ನಗರ ಪಟ್ಟಣ ಪ್ರದೇಶಗಳಲ್ಲಿ ಈ ಅಭಿಯಾನ ನಡೆಯಲಿದೆ ಎಂದು ತಿಳಿಸಿದರು.
ಪ್ರತೀ ಮನೆ ಮನೆಗೆ: ಈ ಕಾರ್ಯಕ್ರಮದ ಜಾರಿಗೆ ಪ್ರತೀ ವಾರ್ಡ್ಗೆ ತಂಡ ರಚಿಸಲಾಗಿದೆ. ಪುರಸಭೆ, ನಗರಸಭೆ, ಪಟ್ಟಣ ಪಂಚಾಯಿತಿಗಳ ಸಿಬ್ಬಂದಿಗಳು, ಶಿಕ್ಷಣ ಇಲಾಖೆ, ಬಿಸಿಎಂ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಮೇಲ್ವಿಚಾರಕರು, ಈ ತಂಡದಲ್ಲಿದ್ದಾರೆ. ಈ ತಂಡವು ಆಯಾ ವಾರ್ಡ್ಗಳ ಪ್ರತೀ ಮನೆಗಳಿಗೆ ತೆರಳಿ, ಮತದಾನದ ಮಹತ್ವ ತಿಳಿಸಿ, ಮಾಹಿತಿಗಳನ್ನು ನೀಡಲಿದ್ದಾರೆ ಎಂದು ಶಿವಶಂಕರ್ ಹೇಳಿದರು.
ಮತದಾನದ ಅರಿವು ಮೂಡಿಸುವ ಕರಪತ್ರಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಗುವುದು ಎಂದು ಹೇಳಿದ ಅವರು, ಪಟ್ಟಣ ಪಂಚಾಯಿತಿ, ಪುರಸಭೆ ಮುಖ್ಯಾಧಿಕಾರಿಗಳು ಮತ್ತು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಇದರ ಮೇಲ್ವಿಚಾರಣೆ ನೋಡಲಿದ್ದಾರೆ. ಅಲ್ಲದೆ ಜಿಲ್ಲಾ ಮಟ್ಟದ ಸ್ವೀಪ್ ಕಾರ್ಯಕ್ರಮದ ನೋಡಲ್ ಅಧಿಕಾರಿಗಳು ಇದರ ಉಸ್ತುವಾರಿ ವಹಿಸಲಿದ್ದಾರೆ ಎಂದರು.
ಎಲ್ಲರೂ ಕೈ ಜೋಡಿಸಿ: ಈ ಕಾರ್ಯಕ್ರಮದ ಬಗ್ಗೆ ಪ್ರತೀ ದಿನ ವರದಿ ಪಡೆದು ಅವಲೋಕನ ಮಾಡಲಾಗುತ್ತದೆ. ಇದರ ಯಶಸ್ವಿಗೆ ಎಲ್ಲರೂ ಕೈಗೋಡಿಸಬೇಕು ಎಂದರು.
ಮನೆ, ಮನೆಗೆ ತೆರಳಿ ಮತದಾನದ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ನಗರಕ್ಕೆ- 129 ಸಿಬ್ಬಂದಿಗಳು, ಕಡೂರು-77, ಬೀರೂರು- 47, ಕೊಪ್ಪ- 29, ಮೂಡಿಗೆರೆ- 40, ಶೃಂಗೇರಿ- 27, ಎನ್.ಆರ್.ಪುರ- 32 ಮತ್ತು ತರೀಕೆರೆ ಪುರಸಭಾ ವ್ಯಾಪ್ತಿಯಲ್ಲಿ 63 ಸಿಬ್ಬಂದಿಗಳ ತಂಡ ರಚಿಸಲಾಗಿದೆ ಎಂದು ವಿವರಿಸಿದರು.
ಸಭೆಯಲ್ಲಿ ಸ್ವೀಪ್ ಕಾರ್ಯಕ್ರಮದ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು, ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳು, ಪಟ್ಟಣ ಪಂಚಾಯಿತಿ ಪುರಸಭೆ ಮುಖ್ಯಾಧಿಕಾರಿಗಳು ಹಾಜರಿದ್ದರು.
ಮತಗಟ್ಟೆಗಳಲ್ಲಿ ನೆರಳು ವ್ಯವಸ್ಥೆ
ಚುನಾವಣೆಯಲ್ಲಿ ಮತದಾರರು ಸರತಿಯ ಸಾಲಿನಲ್ಲಿ ನಿಲ್ಲುವಾಗ ಬಿಸಿಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು ಅಲ್ಲಿ ಶಾಮಿಯಾನ ಹಾಕಿ ನೆರಳಿನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಸ್ವೀಪ್ ಸಮಿತಿ ಅಧ್ಯಕ್ಷ ಪಿ. ಶಿವಶಂಕರ್ ಹೇಳಿದ್ದಾರೆ.
ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆಯಾ ಬೂತ್ ಮಟ್ಟದ ಅಧಿಕಾರಿ (ಬಿಎಲ್ಒ)ಗಳಿಗೆ ಈಗಾಗಲೇ ಸೂಚನೆ ನೀಡಿದ್ದಾರೆ. ಮತಗಟ್ಟೆಗಳಿಗೆ ಸಿಬ್ಬಂದಿಗಳಿಗೆ ಮತ್ತು ಮತದಾರರಿಗೆ ಕುಡಿಯುವ ನೀರು ಸೌಲಭ್ಯ, ಶೌಚಾಲಯ, ಅಂಗವಿಕಲರಿಗೆ ರ್ಯಾಂಪ್ ಮತ್ತಿತರ ವ್ಯವಸ್ಥೆ ಕಲ್ಪಿಸಲಾಗುವುದು. ಇದಕ್ಕಾಗಿ ಅಗತ್ಯ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಅವರು ಹೇಳಿದರು.
--