ನ್ಯಾಯದ ತಕ್ಕಡಿಯಲ್ಲಿ ತೂಗಿ ಆರಿಸಿ
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಏ.22
ಕ್ಷೇತ್ರದಲ್ಲಿರುವ ಅಭಿವೃದ್ಧಿ, ಅಧಿಕಾರದಲ್ಲಿದ್ದಾಗಿನ ನಡವಳಿಕೆ, ಸಾಮರಸ್ಯ ಇವೆಲ್ಲವನ್ನೂ ನಿಮ್ಮ ನ್ಯಾಯದ ತಕ್ಕಡಿಯಲ್ಲಿ ತೂಕ ಹಾಕಿ ಯಾರು ಹೆಚ್ಚಿಗೆ ತೂಗುತ್ತಾರೋ ಅವರನ್ನು ನಿಮ್ಮ ಪ್ರತಿನಿಧಿಯಾಗಿ ಆರಿಸಿ ಎಂದು ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ ಹೇಳಿದರು.
ನಗರದ ಹೊರವಲಯದ ಗವನಹಳ್ಳಿಯಲ್ಲಿ ಭಾನುವಾರ ಮತಯಾಚಿಸಿ ನಂತರ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದಲ್ಲಿ 3ಜನ ಮಂತ್ರಿಗಳು ಪೂರ್ಣಾವಧಿ ಅಧಿಕಾರದಲ್ಲಿದ್ದರೂ, ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸ್ಪಂದಿಸಿ ಒಂದು ಸರ್ಕಾರಿ ಮೆಡಿಕಲ್ ಕಾಲೇಜು ಅನುಮೋದನೆಗೆ ಶ್ರಮಿಸುವ ಕಾಳಜಿ ಇರಲಿಲ್ಲವೇ ಎಂದು ಪ್ರಶ್ನಿಸಿದರು.
6ತಿಂಗಳ ಮಂತ್ರಿ: ಇಕ್ಕಟ್ಟಿನ ಪರಿಸ್ಥಿತಿಯಲ್ಲಿ 6 ತಿಂಗಳ ಮಂತ್ರಿ ನಾನು. ಬಡವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ವಿದ್ಯಾಭ್ಯಾಸದಿಂದ ವಂಚಿತರಾಗಿ ಅವರ ಬಾಳು ಕುರುಡಾಗಬಾರದೆಂಬ ದೃಷ್ಟಿ ಹೊಂದಿ ಸರ್ಕಾರಿ ಎಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜು ಮಂಜೂರು ಮಾಡಿಸಿದೆ.
ಇದು ನಾನು ಮಾಡಿದ ದೊಡ್ಡ ತಪ್ಪಂತೆ. ಹೀಗೆಂದು ಅಪಪ್ರಚಾರದಲ್ಲಿ ತೊಡಗಿರುವವರು ಜೆಡಿಎಸ್ ಮತ್ತು ಕಾಂಗ್ರೆಸ್ ಜನನಾಯಕರು ಎಂದವರು ಹೇಳಿದರು.
ರು. 108 ಕೋಟಿ ವಿಶೇಷ ಅನುದಾನ ತರುವ ಮೂಲಕ ಯುಜಿಡಿ, ರಸ್ತೆ, ಚರಂಡಿ, ಸೇತುವೆ ನಿರ್ಮಿಸಿ ನಗರವನ್ನು ಅಭಿವೃದ್ಧಿಪಡಿಸುವ ಮೂಲಕ ಜನರ 3 ದಶಕಗಳ ಕನಸಿಗೆ ತೆರೆ ಹಾಡಿದರೆ ರಾಜಕೀಯ ವಿರೋಧಿಗಳು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದು ವಿಪಕ್ಷ ರಾಜಕಾರಣದ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಜಾತಿ ವಿಷ ಬೀಜ: ಜಾತಿ ವಿಷ ಬೀಜ ಬಿತ್ತುವ ಮೂಲಕ ಬಿಜೆಪಿಗೆ ಕೋಮುವಾದದ ಪಟ್ಟ ಕಟ್ಟಿ ನಿತ್ಯ ಜಾತಿ ರಾಜಕಾರಣ ಮಾಡುತ್ತಿರುವ ಜೆಡಿಎಸ್, ಕಾಂಗ್ರೆಸ್ಗೆ ಅದೇ ಮುಳುವಾಗಿ ಪರಿಣಮಿಸಲಿದೆ. ಶಾಸಕರಾದಾಗಿನಿಂದ ಸಾಮರಸ್ಯ ಕಾಪಾಡಿರುವ ರವಿಯವರಿಗೆ ಈ ಬಾರಿ ಎಲ್ಲಾ ವರ್ಗದ ಜನ ಬೆಂಬಲಿಸಿ ಅತ್ಯಧಿಕ ಮತಗಳ ಅಂತರದಲ್ಲಿ ಗೆಲ್ಲಿಸುವುದರಲ್ಲಿ ಅನುಮಾನವಿಲ್ಲ ಎಂದು ತಿಳಿಸಿದರು.
ನಗರಾಧ್ಯಕ್ಷ ರಂಗನಾಥ್, ಜಿಲ್ಲಾ ಕಾರ್ಯದರ್ಶಿ ವರಸಿದ್ಧಿ ವೇಣುಗೋಪಾಲ್, ನಗರಸಭೆ ಸದಸ್ಯ ಶ್ರೀನಿವಾಸ್, ಸಿ. ಆನಂದ್, ಉಮೇಶ್ ರಾಜ್ ಅರಸ್, ಯಶೋಧ ರಾಜ್ ಅರಸ್, ಕೋಶಾಧಿಕಾರಿ ಆನಂದ್, ಪ್ರೇಮ ಮೊದಲಾದರು ಉಪಸ್ಥಿತರಿದ್ದರು.