ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಪರಿಸರ ಸಂರಕ್ಷಣೆಗೆ ಒತ್ತು ಅಗತ್ಯ

Rashmi Kasaragodu
Updated On : 23 Apr 2013, 11:55 am

ಕ.ಪ್ರ.ವಾರ್ತೆ, ಹೊಸನಗರ, ಏ.22 ವಾತಾವರಣ ಕಲುಷಿತಗೊಳ್ಳುತ್ತಿರುವುದು ಭವಿಷ್ಯದ ಅಪಾಯದ ಮುನ್ಸೂಚನೆಯಾಗಿದ್ದು ಪರಿಸರ ಸಂರಕ್ಷಣೆಗೆ ಹೆಚ್ಚಿನ ಗಮನ ಕೇಂದ್ರೀಕರಿಸಬೇಕಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಪುರಂದರ ಪೂಜಾರಿ ಹೇಳಿದರು.
ತಾಲೂಕಿನ ಮಾವಿನಕೊಪ್ಪದಲ್ಲಿ ಗೋಪ್ರದ ಕೃಷಿ ತಂತ್ರಜ್ಞಾನ, ಡೈಮಂಡ್ ಜೇಸಿ ಹಮ್ಮಿಕೊಂಡಿದ್ದ ವಿಶ್ವ ಪೃಥ್ವಿ ದಿನಾಚರಣೆಯನ್ನು ಉದ್ಘಾಟಿಸಿ, ತ್ವರಿತ ಲಾಭ, ಸುಲಭದ ಬದುಕಿಗಾಗಿ ಪರಿಸರ ಹಾಳುಗೆಡವಲಾಗುತ್ತಿದೆ ಎಂದು ವಿಷಾದಿಸಿದರು.
ಮಹತ್ವ ಅರಿಯಿರಿ: ಪ್ರಕೃತಿ ಅದೆಷ್ಟೋ ಕೊಡುಗೆ ನೀಡಿದೆ. ಆದರೆ ಅದು ನಮಗಾಗಿ ಸೀಮಿತವಲ್ಲ. ಮುಂದಿನ ಪೀಳಿಗೆಗೂ ರವಾನಿಸುವ ಜವಾಬ್ದಾರಿಯನ್ನು ನಾವು ಮರೆತಿದ್ದೇವೆ. ತಂತ್ರಜ್ಞಾನ, ಶಿಕ್ಷಣದಲ್ಲಿ ಮಾನವ ಎಷ್ಟು ಮುಂದುವರೆದಿದ್ದರೂ ಕೂಡ ಪರಿಸರ ಮಹತ್ವ ಅರಿಯುವಲ್ಲಿ ವಿಫಲರಾಗಿದ್ದೇವೆ. ಈ ಬಗ್ಗೆ ಜಾಗೃತಿ ಹೊಂದಿ ಪರಿಸರ ಸಂರಕ್ಷಣೆಗೆ ಮುಂದಾಗದಿದ್ದರೆ ಮುಂದಿನ ದಿನ ಕಲ್ಪಿಸಿಕೊಳ್ಳಲೂ ಅಸಾಧ್ಯವಾಗುತ್ತದೆ ಎಂದು ಎಚ್ಚರಿಸಿದರು.
 ಗೋಪ್ರದ ಕೃಷಿ ತಂತ್ರಜ್ಞಾನದ ಕಾನುಮನೆ ನಾರಾಯಣ ಅಧ್ಯಕ್ಷತೆ ವಹಿಸಿ, ಪರಿಸರ ಪ್ರೀತಿಸುವ ಮನಸ್ಸು ಎಲ್ಲರದ್ದಾಗಲಿ ಎಂದು ಆಶಿಸಿದರು. ಡೈಮಂಡ್ ಜೇಸಿ ಅಧ್ಯಕ್ಷ ಅರಮನೆ ವಿನಾಯಕ, ಪ್ರಮುಖರಾದ ನಾಗರಾಜ ಗೊಂಡ್, ಸಾಲಗೇರಿ ಗಣಪತಿ ಭಟ್, ಗಣೇಶ್, ಮಧುಕರ್, ಜಯನಗರ ಗುರು, ನಿಖಿಲ್ ಪ್ರಭಾಕರ್, ಗುರುಕಿರಣ್, ಮಂಜು, ರಾಘವೇಂದ್ರ, ಪೂರ್ಣೇಶ್, ವಿನಯ ಇತರರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement