ಪ್ರತಿಭಟನೆ (ಸುದ್ದಿ ಸಂಕ್ಷೇಪ)
ಶಿವಮೊಗ್ಗ: ನಗರಸಭೆ 2013-14ನೇ ಸಾಲಿನ ನೀರು ಸರಬರಾಜು ಶುಲ್ಕ ಮತ್ತು ಹೆಚ್ಚುವರಿ ಸ್ವಚ್ಛತಾ ಶುಲ್ಕವನ್ನು ಏರಿಕೆ ಮಾಡಿರುವುದನ್ನು ವಿರೋಧಿಸಿ ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟ 25ರಂದು ಪ್ರತಿಭಟನೆ ಹಮ್ಮಿಕೊಂಡಿದೆ. ಅಂದು ಬೆಳಿಗ್ಗೆ 11 ಗಂಟೆಗೆ ಮನೆ ಕಂದಾಯವನ್ನು ಪಾವತಿಸಿ ಪ್ರತಿಭಟನಾ ಪೂರ್ವಕವಾಗಿ ನಮೂನೆ 2ನ್ನು ನಗರಸಭೆಗೆ ಸಲ್ಲಿಸಲಿದೆ. ಈ ಸಂಬಂಧ ತೆರಿಗೆದಾರರು 25ಕ್ಕೆ ನಡೆಯುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ವಿ. ವಸಂತಕುಮಾರ ಕೋರಿದ್ದಾರೆ.
ತಿಂಗಳ ಅತಿಥಿ
ಶಿವಮೊಗ್ಗ: 23ರಂದು ಸಂಜೆ 5.30ಕ್ಕೆ ಕರ್ನಾಟಕ ಸಂಘದಲ್ಲಿ ತಿಂಗಳ ಅತಿಥಿ ಕಾರ್ಯಕ್ರಮ ಆಯೋಜನೆಗೊಂಡಿದೆ. ಧಾರವಾಡದ ಭಾಷಾ ಸಂಶೋಧಕ ಡಾ. ಸಂಗಮೇಶ ಸವದತ್ತಿಮಠ ಅವರು ವಚನಗಳನ್ನು ಅರ್ಥೈಸುವ ಬಗೆ ಕುರಿತಂತೆ ಉಪನ್ಯಾಸ ನೀಡುವರು. ಸಂಘದ ಅಧ್ಯಕ್ಷ ಎಸ್.ವಿ. ತಿಮ್ಮಯ್ಯ ಅಧ್ಯಕ್ಷತೆ ವಹಿಸುವರು ಎಂದು ಸಂಘ ತಿಳಿಸಿದೆ.
ಧರ್ಮ ಸಭೆ
ಶಿವಮೊಗ್ಗ: ಬಿದರೆಯ ವೀರಭದ್ರೇಶ್ವರ ಸೇವಾ ಸಮಿತಿ 27 ಮತ್ತು 28ರಂದು ಬೆಳಿಗ್ಗೆ 10.30ಕ್ಕೆ ದೇವಸ್ಥಾನದ ಆವರಣದಲ್ಲಿ ಗೋಪುರ ಕಳಸಾರೋಹಣ ಮತ್ತು ಶ್ರೀ ವೀರಭದ್ರೇಶ್ವರ ಸ್ವಾಮಿಯ ಪ್ರತಿಷ್ಠಾಪನೆ ಹಾಗೂ ಧರ್ಮ ಸಭೆ ಏರ್ಪಡಿಸಿದೆ. ತರಳಬಾಳು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, 28ರಂದು ಶ್ರೀ ವೀರಭದ್ರೇಶ್ವರ ಸ್ವಾಮಿಯ ಕೆಂಡಾರ್ಚನೆ, ಸರ್ವ ದೇವರಿಗೆ ಡೊಳ್ಳು, ಓಲಗ, ವೀರಗಾಸೆಗಳೊಂದಿಗೆ ಮೆರವಣಿಗೆ ಉತ್ಸವ ನಡೆಯಲಿದೆ. ಮಧ್ಯಾಹ್ನ 1.30ಕ್ಕೆ ಅನ್ನ ಸಂತರ್ಪಣೆ ಇರುತ್ತದೆ ಎಂದು ಸಮಿತಿ ತಿಳಿಸಿದೆ.
25ರಂದು ಚರ್ಚ್ ಉದ್ಘಾಟನೆ
ಕಾರ್ಗಲ್: ನಾಗವಳ್ಳಿ ಲೂರ್ಧಮಾತೆಯ ನೂತನ ದೇವಾಲಯದ ಉದ್ಘಾಟನೆ ಏ.25ರಂದು ನಡೆಯಲಿದೆ. ಭದ್ರಾವತಿ ಧರ್ಮಾಧ್ಯಕ್ಷ ಜೋಸೆಫ್ ಅರುಮಚ್ಚಾಡತ್ ಹೊಸ ದೇವಾಲಯ ಉದ್ಘಾಟಿಸಲಿದ್ದಾರೆ. ಮಹೋತ್ಸವದ ಅಂಗವಾಗಿ ವಿಶೇಷ ಪೂಜೆ ಹಾಗೂ ಬೈಬಲ್ ಪ್ರಬೋಧನೆ ನಡೆಯಲಿದೆ ಎಂದು ನಾಗವಳ್ಳಿ ಧರ್ಮ ಕೇಂದ್ರದ ಫಾದರ್ ಥಾಮಸ್ ತಿಳಿಸಿದ್ದಾರೆ