ಬಿಜೆಪಿ ಗೆಲವು ಖಚಿತ: ಮಂಜುನಾಥ
ಕ.ಪ್ರ.ವಾರ್ತೆ, ತರೀಕೆರೆ.ಏ.22 ಕಾರ್ಯಕರ್ತರ ಶ್ರಮದಿಂದ ಬಿಜೆಪಿ ಗೆದ್ದು ಅಧಿಕಾರಕ್ಕೆ ಬರುತ್ತದೆ ಎಂದು ಸಂಸದ ಆಯನೂರು ಮಂಜುನಾಥ್ ತಿಳಿಸಿದರು. ಅವರು, ಸೋಮವಾರ ಬಿಜೆಪಿ ಕಾರ್ಯಾಲಯದಲ್ಲಿ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯದಲ್ಲಿ ಪಕ್ಷಕ್ಕೆ ಹಿಂದೆ ಇದ್ದ ಹಿಂಜರಿಕೆ ಈಗ ಇಲ್ಲ. ಪಕ್ಷ ಅತಿ ಹೆಚ್ಚು ಸ್ಥಾನ ಗೆಲ್ಲುತ್ತದೆ, ಹಿಂದೆ ಎಲ್ಲೆಲ್ಲಿ ಗೆದ್ದಿದ್ದವೋ ಅಲ್ಲಿ ಗೆಲ್ಲುತ್ತೇವೆ. ಜತೆಗೆ ಹೊಸ ಸ್ಥಾನಗಳನ್ನೂ ಗೆಲ್ಲುತ್ತೇವೆ. ಕಾಂಗ್ರೆಸ್ನಲ್ಲಿ ಸಿಎಂ ಸ್ಥಾನಕ್ಕೆ ಪೈಪೋಟಿ ಇದೆ. ಕಾಂಗ್ರೆಸ್ ಬಗ್ಗೆ ಯಡಿಯೂರಪ್ಪನವರು ಮೌನ ತಾಳಿದ್ದಾರೆ ಎಂದು ಅವರು ತಿಳಿಸಿದರು. ಟಿ.ಜಿ. ಸದಾನಂದ್, ಸುನಿಲ್ ಕುಮಾರ್, ಅಜಯ್ ಕುಮಾರ್ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
27ಕ್ಕೆ ಜಿಲ್ಲೆಗೆ ಸೋನಿಯಾ
ಚಿಕ್ಕಮಗಳೂರು: ಜಿಲ್ಲೆಗೆ ಚುನಾವಣಾ ಪ್ರಚಾರಕ್ಕಾಗಿ ಆಗಮಿಸಬೇಕಾಗಿದ್ದ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರ ಕಾರ್ಯಕ್ರಮವನ್ನು ಕಾರಣಾಂತರಗಳಿಂದ 27ಕ್ಕೆ ಮುಂದೂಡಲಾಗಿದೆ.
ಪೂರ್ವ ನಿಗಧಿಯಂತೆ ಅವರು 25 ರಂದು ಚಿಕ್ಕಮಗಳೂರಿಗೆ ಬರಬೇಕಾಗಿತ್ತು. ಆದರೆ ಅವರು, 27ರ ಬೆಳಿಗ್ಗೆ 10 ಗಂಟೆಗೆ ಚಿಕ್ಕಮಗಳೂರಿಗೆ ಆಗಮಿಸಿ, ಅಂದು ಜಿಲ್ಲಾ ಆಟದ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ಭಾಷಣ ಮಾಡಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷ ಎ.ಎನ್. ಮಹೇಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ಗೆ ರಾಜಿನಾಮೆ
ಕ.ಪ್ರ.ವಾರ್ತೆ, ತರೀಕೆರೆ.ಏ.22 ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಮತ್ತು ಪಕ್ಷಕ್ಕೆ ತಾವು ರಾಜಿನಾಮೆ ನೀಡುವುದಾಗಿ ಮಾಜಿ ಶಾಸಕ ಟಿ.ಎಚ್. ಶಿವಶಂಕರಪ್ಪ ತಿಳಿಸಿದ್ದಾರೆ.
ಅವರು ಸೋಮವಾರ ತಮ್ಮ ನಿವಾಸದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕೆಪಿಸಿಸಿ ಅಧ್ಯಕ್ಷರಿಗೆ ಬರೆದಿರುವ ರಾಜಿನಾಮೆ ಪತ್ರದಲ್ಲಿ ಪಕ್ಷದ ಮುಖಂಡರಿಂದ ನನ್ನನ್ನು ನಡೆಸಿಕೊಂಡಿರುವ ಬಗ್ಗೆ ಬೇಸರ ಮೂಡಿದ್ದು, ಪಕ್ಷವನ್ನು ಸಂಘಟಿಸಿದ ನನಗೆ ಗೌರವ ಕೊಡದೆ ಹೀನಾಯವಾಗಿ ನಡೆಸಿಕೊಂಡಿರುವುದರಿಂದ ಮನನೊಂದು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ತಿಳಿಸಿದ್ದು, ರಾಜಿನಾಮೆ ಪತ್ರದ ಪ್ರತಿಯನ್ನು ಬ್ಲಾಕ್ ಕಾಂಗ್ರೆಸ್, ಜಿಲ್ಲಾ ಕಾಂಗ್ರೆಸ್ ಸಮಿತಿ, ಕೆಪಿಸಿಸಿಗೆ ಕಳುಹಿಸಿಕೊಡುವುದಾಗಿ ತಿಳಿಸಿದರು.
ಪಕ್ಷ ಸಂಘಟಿಸಿದ್ದೆ: ಕಾಲೇಜು ದಿವಸದಲ್ಲೇ 1990ರಲ್ಲಿ ರಾಜಕೀಯ ಪ್ರವೇಶಿಸಿದ ತಾವು, 2004ರಲ್ಲಿ ಇಡೀ ಜಿಲ್ಲೆಯಲ್ಲೇ ಏಕೈಕ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲವು ಸಾಧಿಸಿ ಕಾಂಗ್ರೆಸ್ ಪಕ್ಷ ಸಂಘಟಿಸಿದ್ದೆ. ಎಂದು ತಿಳಿಸಿದ ಅವರು ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಅರ್ಪಿಸಿದರು.