ಗ್ರಾಮೀಣ ಸಾರಿಗೆ ಸೌಲಭ್ಯ ನಿರ್ಲಕ್ಷ್ಯ
ಅ ಅನಂತ ನಾಡಿಗ್
ತರೀಕೆರೆ: ಜಿಲ್ಲೆಯಲ್ಲಿ ತರೀಕೆರೆ ಹೆಸರಿಗೆ ದೊಡ್ಡ ಪಟ್ಟಣ. ಆದರೆ ಸಾರಿಗೆ ಸೌಲಭ್ಯ ಮಾತ್ರ ಅಷ್ಟಕಷ್ಟೆ.
ಹೆಚ್ಚು ಜನಸಾಂದ್ರತೆ ಪಡೆದಿರುವ ದೊಡ್ಡ ವ್ಯಾಪಾರಿ ಕೇಂದ್ರ ವಾಗಿರುವ ಪಟ್ಟಣದ ಮಧ್ಯೆ 206 ರಾಷ್ಟ್ರೀಯ ಹೆದ್ದಾರಿ ಸರಹದ್ದಿನಲ್ಲೆ ಹಾದು ಹೋಗಿದೆ. ಪ್ರಥಮ ದೆರ್ಜೆ ಕಾಲೇಜು, ಮೂರು ಪ.ಪೂ.ಕಾಲೇಜು, ಹತ್ತಾರು ಹೈಸ್ಕೂಲುಗಳು, ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಹೊಂದಿದ್ದು, ಕಸಬಾ ಸೇರಿದಂತೆ ಆರು ಹೋಬಳಿಗಳನ್ನು ಕಂದಾಯ ವಿಭಾಗದಲ್ಲಿ ಪಡೆದು ವಿಸ್ತಾರ ದೃಷ್ಟಿಯಿಂದ ಜಿಲ್ಲೆಯಲ್ಲೇ ಅತ್ಯಧಿಕ ಗ್ರಾಮೀಣ ಪ್ರದೇಶಗಳನ್ನು ಪಡೆದಿರುವ ತಾಲೂಕು ಕೇಂದ್ರವಾಗಿದೆ.
ವಾರ ಪೂರ್ತಿ ಶಾಲಾ ಕಾಲೇಜುಗಳಿಗೆ, ಕೋರ್ಟು ಕಚೇರಿಗಳಿಗೆ ಮತ್ತಿತರರ ವ್ಯವಹಾರಗಳಿಗೆ ಗ್ರಾಮೀಣ ಪ್ರದೇಶಗಳಿಂದ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು ಬಂದು ಹೋಗುತ್ತಾರೆ.
ಗ್ರಾಮೀಣ ಸಾರಿಗೆ ಇಲ್ಲ: ರಾಷ್ಚ್ರೀಯ ಹೆದ್ದಾರಿ ಪಕ್ಕದ ಗೇರಮರಡಿ, ಅಜ್ಜಂಪುರ ಕ್ರಾಸ್, ಬೆಟ್ಟದಹಳ್ಳಿ, ಕುಡ್ಲೂರು, ಕುಡ್ಲೂರು ಗೇಟ್, ಮುಂಡ್ರೆ, ಪುಂಡನಹಳ್ಳಿ, ಕೊರಟೀಕೆರೆ ಸುತ್ತುಮುತ್ತಲ ಗ್ರಾಮೀಣ ಪ್ರದೇಶಗಳಿಂದ ಪಟ್ಟಣಕ್ಕೆ ಗ್ರಾಮಾಂತರ ಸಾರಿಗೆ ವ್ಯವಸ್ಥೆ ಇಲ್ಲ. ಒಂದೆರಡು ಬಸ್ಸು ಇದ್ದರೂ, ಅದು ದಿನದ ಯಾವುದೋ ಒಂದು ಹೊತ್ತಿನಲ್ಲಿ ಬಂದು ಹೋದರೆ ಮುಗಿಯಿತು. ಮಿಕ್ಕಂತೆ ಸಣ್ಣಪುಟ್ಟ ಗ್ರಾಮೀಣ ಭಾಗದ ಪ್ರಯಾಣಿಕೆರಿಗೆ ಸರಕು ತುಂಬಿದ ಲಾರಿ, ತರಕಾರಿ ತುಂಬಿದ ಲಗೇಜ್ ವಾಹನ, ಇಟ್ಟಿಗೆ ಕಲ್ಲು ಮರಳು ತುಂಬಿದ ಟ್ರ್ಯಾಕ್ಟರೇ ಗತಿ.
ವಿದ್ಯಾರ್ಥಿಗಳಿಗೆ ತೊಂದರೆ: ಗ್ರಾಮೀಣ ಭಾಗದಿಂದ ತರೀಕೆರೆ ಪಟ್ಟಣಕ್ಕೆ ಪ್ರತಿ ನಿತ್ಯ ಬಂದು ಹೋಗಲೇಬೇಕಾದ ಶಾಲಾ ಕಾಲೇಜು ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಮನೆಯಿಂದ ಒಂದು ತಾಸಿಗೂ ಮುಂಚೆಯೇ ಬಂದು ರಸ್ತೆ ಬದಿ ವಾಹನಗಳಿಗಾಗಿ ಕಾಯುತ್ತ ನಿಂತು, ದಾರಿಯಲ್ಲಿ ಹಾದು ಹೋಗುವ ಲಾರಿ, ಟ್ರ್ಯಾಕ್ಟರ್ ಹಿಡಿದು ಪ್ರಯಾಣಿಸಬೇಕಿದೆ.
ರಸ್ತೆಯಲ್ಲಿ ಸಾಗುವ ವಾಹನಗಳು ಕೃಪೆ ತೋರಿ ನಿಲ್ಲಿಸಿದರೆ ಓಡುತ್ತ ಬಂದು ಹತ್ತಿ, ತರೀಕೆರೆ ಸೇರಬೇಕು. ಶಾಲಾ ಕಾಲೇಜು, ಐಟಿಐ ಮುಂತಾದ ವಿದ್ಯಾಭ್ಯಾಸಕ್ಕೆ ಬರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರು ತೊಂದರೆ ಅನುಭವಿಸುತ್ತಿದ್ದಾರೆ. ವಾಹನಗಳ ಸೌಲಭ್ಯ ಸಮರ್ಪಕವಾಗಿಲ್ಲದೆ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಶಾಲಾ ಕಾಲೇಜುಗಳಿಗೆ ಬಂದು ಹೋಗಲು ಆಗುತ್ತಿಲ್ಲ. ಎಕ್ಸ್ಪ್ರೆಸ್ ಬಸ್ಸುಗಳು ರಾ.ಹೆ.206ರ ಬದಿಯ ಹಳ್ಳಿಗಳಲ್ಲಿ ನಿಲ್ಲಿಸುವುದಿಲ್ಲ. ಗ್ರಾಮೀಣ ಸಾರಿಗೆ ಬಸ್ಸುಗಳ ಸೌಕರ್ಯವೂ ಸಮರ್ಪಕವಾಗಿಲ್ಲ, ಪ್ರಯಾಣಿಕರ ಖಾಸಗಿ ಬಸ್ಸುಗಳು ಹೋಗುವಂತಿಲ್ಲ.
ಹೀಗಾಗಿ ವಿದ್ಯಾರ್ಥಿಗಳ ಕಷ್ಟ ಹೇಳತೀರದು. ಮಕ್ಕಳು ಎಷ್ಟು ಹೊತ್ತಿಗೆ ಮನಗೆ ಸುರಕ್ಷಿತವಾಗಿ ಬರುತ್ತಾರೋ ಎಂದು ಪೋಷಕರು ಆತಂಕದಿಂದ ಕಾಯುತ್ತ ಕೂರಬೇಕಾದ ಸ್ಥಿತಿ ರ್ನ್ಮಾಣವಾಗಿದೆ. ಹೆಣ್ಣುಮಕ್ಕಳು ಲಾರಿ ಮುಂತಾದ ವಾಹನಗಳಲ್ಲಿ ಹೋಗುವುದರಿಂದ ಸುರಕ್ಷಿತ ದೃಷ್ಟಿಯಿಂದ ಆತಂಕ ಪಡುವಂತಾಗಿದೆ.
ಸಾರಿಗೆ ಬಸ್ಸು ಅಗತ್ಯ: ದೂರ ವ್ಯಾಪ್ತಿಯಲ್ಲಿ ಹೆಚ್ಚು ಗ್ರಾಮೀಣ ಪ್ರದೇಶಗಳನ್ನೇ ಹೊಂದಿರುವ ತರೀಕೆರೆ ಪಟ್ಟಣಕ್ಕೆ ಮತ್ತು ಪಟ್ಟಣದಿಂದ ಗ್ರಾಮೀಣ ಪ್ರದೇಶಗಳಿಗೆ ಪ್ರತಿ ಸಣ್ಣಪುಟ್ಟ ಹಳ್ಳಿಗಳಲ್ಲೂ ನಿಲ್ಲಿಸುವ ಗ್ರಾಮೀಣ ಸಾರಿಗೆ ಬಸ್ಸುಗಳು ಹೆಚ್ಚಿನ ಸಂಖ್ಯೆಯಲ್ಲಿ ಅಗತ್ಯವಾಗಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.
ಶಾಲಾ-ಕಾಲೇಜು ಮತ್ತು ಸರ್ಕಾರಿ ಕಚೇರಿಗಳ ಬೆಳಗಿನ ಮತ್ತು ಸಂಜೆಯ ಸಮಯದಲ್ಲಿ ಗ್ರಾಮೀಣ ಸಾರಿಗೆ ಬಸ್ಸುಗಳು ಸಂಚರಿಸಿದರೆ ಇದರಿಂದ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ.
ಪ್ರವಾಸಿ ಕೇಂದ್ರ: ತಾಲೂಕಿನಲ್ಲಿ ಹೆಸರಾಂತ ಪ್ರವಾಸಿ ಕೇಂದ್ರಗಳಾದ ಅಮೃತಾಪುರ, ಸೋಂಪುರ, ಬಗ್ಗವಳ್ಳಿ, ಹಾದಿಕೆರೆ, ಲಕ್ಕವಳ್ಳಿ, ಭದ್ರಾ ಅಭಯಾರಣ್ಯ ಮತ್ತು ಗಿರಿ ಪ್ರದೇಶಗಳಾದ ಕೆಮ್ಮಣಗುಂಡಿ, ಕಲ್ಲತ್ತಿಗಿರಿ ಇತ್ಯಾದಿ ಪ್ರವಾಸಿ ಕೇಂದ್ರಗಳಿರುವುದೂ ಗ್ರಾಮೀಣ ಪ್ರದೇಶಗಳಲ್ಲೇ.
ಈ ಪ್ರದೇಶಗಳಿಗೂ ಹೆಚ್ಚು ಗ್ರಾಮೀಣ ಸಾರಿಗೆ ಬಸ್ಸು ಇಲ್ಲದಂತಾಗಿದೆ. ಎಲ್ಲ ಹಳ್ಳಿಗಳಲ್ಲೂ ಸಂಚರಿಸಬಹುದಾದ ಗ್ರಾಮೀಣ ಸಾರಿಗೆ ಬಸ್ಸುಗಳ ದಿನನಿತ್ಯ ಸಂಚರಿಸುವ ಪ್ರಯಾಣಿಕರಿಗೂ ಅನುಕೂಲವಾಗುತ್ತದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.