ಡಾ.ಅಂಬೇಡ್ಕರ್ ಮಹಾನ್ ದಾರ್ಶನಿಕ
ಶೃಂಗೇರಿ: ಶೋಷಣೆ, ದಬ್ಬಾಳಿಕೆ ವಿರುದ್ಧ ಸಾಮಾಜಿಕ ಸಮಾನತೆಗಾಗಿ ಹೋರಾಡಿದ ಸಂವಿದಾನ ಶಿಲ್ಪಿ ಭಾರತ ರತ್ನ ಡಾ. ಬಾಬಾ ಸಹೇಬ್ ಅಂಬೇಡ್ಕರ್ ದೇಶ ಕಂಡ ಮಹಾನ್ ದಾರ್ಶನಿಕ ಹಾಗೂ ಮಾನವತಾವಾದಿ ಎಂದು ಬಹುಜನ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ. ಕೃಷ್ಣಪ್ಪ ಬಣದ) ಜಿಲ್ಲಾ ಸಂಚಾಲಕ ತರಿಕೇರೆ ವೆಂಕಟೇಶ್ ತಿಳಿಸಿದರು. ಅವರು ಪಟ್ಟಣದ ರೋಟರಿ ಭವನದಲ್ಲಿ ಆಯೋಜಿಸಲಾಗಿದ್ದ ಅಂಬೇಡ್ಕರ್ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಸ್ಪುಶ್ಯತೆ ವಿರುದ್ಧ ಅಹಿಂಸಾತ್ಮಕ ಆಂದೋಲನ ನಡೆಸಿ ಶೋಷಿತ ಸಮುದಾಯದಲ್ಲಿ ಸಂಚಲನ ಮೂಡಿಸಿದರು. ಶೋಷಿತ ವರ್ಗದ ಧ್ವನಿಯಾಗಿದ್ದರು. ಕೆಳವರ್ಗದ ಜನರಲ್ಲಿ ಶಿಕ್ಷಣ ಮತ್ತು ಸಂಸ್ಕೃತಿಯ ಅರಿವು ಮೂಡಿಸಲು ತಮ್ಮ ಜೀವನವನ್ನೇ ಹೋರಾಟಕ್ಕೆ ಮುಡುಪಾಗಿಟ್ಟಿದ್ದರು ಎಂದರು.ಕರಡಯ್ಯ, ರವಿ, ಶೇಷಯ್ಯ ಮತ್ತಿತರರು ಮುಖ್ಯ ಅತಿಥಿಗಳಾಗಿ ಸಮಾರಂಭದಲ್ಲಿ ಉಪಸ್ಥಿತರಿದ್ದರು.