ಬಿಜೆಪಿ ಸರ್ಕಾರದಿಂದ ಉತ್ತಮ ಆಡಳಿತ
ಕ.ಪ್ರ.ವಾರ್ತೆ ಟಿ ಚಿಕ್ಕಮಗಳೂರು ಟಿ ಏ.23
ಬಿಜೆಪಿ ತನ್ನ ಸಂಘಟನಾತ್ಮಕ ಶಕ್ತಿಯಿಂದ ರಾಜ್ಯಕ್ಕೆ ಉತ್ತಮ ಆಡಳಿತ ನೀಡಿದೆ ಎಂದು ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ ಹೇಳಿದ್ದಾರೆ.
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕೆ.ಬಿ. ಹಾಳ್, ಮಾಚೇನಹಳ್ಳಿ, ಬೆಳವಾಡಿ ಹಾಗೂ ಸಿಂದಿಗೆರೆ ಗ್ರಾಮಗಳಲ್ಲಿ ಮಂಗಳವಾರ ಚುನಾವಣಾ ಪ್ರಚಾರ ನಡೆಸಿದ ವೇಳೆಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬಂದು, ಇನ್ನೂ ಹೆಚ್ಚಿನ ಅಭಿವೃದ್ಧಿ ಮೂಲಕ ಈ ಕ್ಷೇತ್ರವನ್ನು ರಾಷ್ಟ್ರದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ಮಾಡಲಾಗುವುದು ಎಂದರು.
ಯಾವ ಗ್ರಾಮದಲ್ಲೂ ಜಾತಿಯ ವಿಷ ಬೀಜ ಬಿತ್ತದೆ, ಗ್ರಾಮಗಳಲ್ಲಿ ಸಾಮರಸ್ಯ ಕಾಪಾಡಿ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗಿದೆ.
ಜನರ ಸಮಸ್ಯೆಗೆ ಅನೇಕ ಯೋಜನೆಗಳನ್ನು ಸರ್ಕಾರ ರೂಪಿಸಲಾಗಿದೆ. ಈ ಗ್ರಾಮಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆಯ ಜೊತೆಗೆ 21 ಲಕ್ಷ ರು. ವೆಚ್ಚದಲ್ಲಿ ವಿದ್ಯುತ್ ಕಾಮಗಾರಿ ಮಂಜೂರು ಮಾಡಿಸಲಾಗಿದೆ ಎಂದು ಹೇಳಿದರು.
ನಗರಕ್ಕೆ ಎಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜು ಮಂಜೂರು ಮಾಡಿಸುವುದರ ಜೊತೆಗೆ 5 ಕೋಟಿ ರು. ವೆಚ್ಚದಲ್ಲಿ ಬಾಜು ಜಗಜೀವನ್ ರಾಮ್ ಭವನ, ಮೂರು ಪಾಲಿಟೆಕ್ನಿಕ್ ಕಾಲೇಜು, ಕದ್ರಿಮಿದ್ರಿ ಬಳಿ ಸ್ನಾತಕೋತ್ತರ ಕೇಂದ್ರ, ಒಂದು ಕೋಟಿ ರು. ವೆಚ್ಚದಲ್ಲಿ ವಾಲ್ಮಿಕಿ ಭವನ, ಹಾಲಿನ ಡೈರಿಗಳನ್ನು ಮಂಜೂರು ಮಾಡಿಸಲಾಗಿದೆ. ಭವಿಷ್ಯದ ಕನಸುಗಳು ಈಡೇರಿಸಲು ನನಗೆ ಬೆಂಬಲಿಸಬೇಕೆಂದರು.
ಜಿಪಂ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಮಾತನಾಡಿ, ಎಲ್ಲಾ ಗ್ರಾಮಗಳಲ್ಲೂ ಈ ಹಿಂದೆ ಎಂದೂ ಕಂಡಿರದಂತಹ ಕಾಮಗಾರಿಗಳು ನಮ್ಮ ಅವಧಿಯಲ್ಲಿ ಆಗಿವೆ. ಯಾವುದೇ ಗ್ರಾಮಗಳಲ್ಲಿ ಗಲಾಟೆ ಘರ್ಷಣೆಗೆ ಅವಕಾಶ ನೀಡದೆ ಸಾಮರಸ್ಯ ಕಾಪಾಡಿಕೊಂಡು ಪ್ರತಿಯೊಬ್ಬರೂ ಒಗ್ಗಟ್ಟಿನಿಂದ ಅಭಿವೃದ್ಧಿಗೆ ಸಹಕರಿಸಿದ್ದಾರೆ. ಜಾತಿ ಬೇಧ ಮತ್ತು ಪಕ್ಷ ಬೇಧ ಮರೆತು 7 ಸಾವಿರಕ್ಕೂ ಹೆಚ್ಚು ಆಶ್ರಯ ಮನೆಗಳನ್ನು ನೀಡುವುದರ ಮೂಲಕ ಬಡವರಿಗೆ ಸೂರು ಒದಗಿಸಲಾಗಿದೆ ಎಂದರು.
ನಗರ ಬಿಜೆಪಿ ಅಧ್ಯಕ್ಷ ಕೋಟೆ ರಂಗನಾಥ್, ತಾಪಂ ಅಧ್ಯಕ್ಷ ಬಸವರಾಜ್, ಉಪಾಧ್ಯಕ್ಷ ಪುಟ್ಟೇಗೌಡ, ಎಪಿಎಂಸಿ ಅಧ್ಯಕ್ಷ ರವೀಂದ್ರ ಬೆಳವಾಡಿ, ನಾರಾಯಣ ಸ್ವಾಮಿ, ಚನ್ನಶೆಟ್ಟಿ, ನಿಂಗೇಗೌಡ, ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.