ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ: ಹೆಗ್ಡೆ
ಕ.ಪ್ರ.ವಾರ್ತೆ ಟಿ ನರಸಿಂಹರಾಜಪುರ ಟಿ ಏ.23
ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಇದ್ದು ಶೃಂಗೇರಿ ಕ್ಷೇತ್ರದಲ್ಲೂ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ ಜಯಗಳಿಸಲಿದ್ದಾರೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಜಯಪ್ರಕಾಶ ಹೆಗಡೆ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶೃಂಗೇರಿ ಕ್ಷೇತ್ರದಲ್ಲಿ ಗೆದ್ದ ಪಕ್ಷವೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಎಂಬ ವಾಡಿಕೆಯಂತೆ ಈ ಬಾರಿ ರಾಜ್ಯದಲ್ಲಿ ಹಾಗೂ ಶೃಂಗೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಬಿಜೆಪಿ ಬಗ್ಗೆ ಭ್ರಮ ನಿರಶನಗೊಂಡ ಯುವ ಜನತೆ ಕಾಂಗ್ರೆಸ್ನತ್ತ ಮುಖ ಮಾಡಿದ್ದಾರೆ. ಟಿ.ಡಿ. ರಾಜೇಗೌಡ ಸಭ್ಯ ವ್ಯಕ್ತಿಯಾಗಿದ್ದು, ಉತ್ತಮ ಆಡಳಿತ ನಡೆಸುವ ಕನಸು ಕಂಡಿದ್ದಾರೆ. ಅವರನ್ನು ಗೆಲ್ಲಿಸುವಂತೆ ಕಾರ್ಯಕರ್ತರಿಗೆ ಮನವಿ ಮಾಡಿದರು.
ರೇಷನ್ ಕಾಡ್ ಅವ್ಯವಸ್ಥೆ: ಮಾಜಿ ಸಚಿವೆ ಮೋಟಮ್ಮ ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬರುವಾಗ ಕೇವಲ 3 ತಿಂಗಳಲ್ಲೇ ರೇಷನ್ ಕಾರ್ಡಿನ ಅವ್ಯವಸ್ಥೆ ಸರಿಪಡಿಸುವುದಾಗಿ ಭರವಸೆ ನೀಡಿತ್ತು. 5 ವರ್ಷವಾದರೂ ರೇಷನ್ ಕಾರ್ಡ್ ಸರಿಪಡಿಸಲಿಲ್ಲ. 2 ರುಪಾಯಿ ಅಕ್ಕಿ ಕೋಡುತ್ತೇವೆ ಎಂದು ಸುಳ್ಳು ಭರವಸೆ ನೀಡಿದರು. ಬಿಜೆಪಿ ಸರ್ಕಾರ ಖಾಸಗಿಯವರಿಗೆ ಶಿಕ್ಷಣ ಸಂಸ್ಥೆಯನ್ನು ವಹಿಸುವ ಮೂಲಕ ಶಿಕ್ಷಣ ಖಾಸಗೀಕರಣ ಹಾಗೂ ಕೇಸರೀಕರಣ ಮಾಡಿದೆ ಎಂದು ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ತಾರತಮ್ಯ: ಬಿಜೆಪಿ ಸರ್ಕಾರ ತಮ್ಮ ಪಕ್ಷದ ಶಾಸಕರಿರುವ ಕ್ಷೇತ್ರಕ್ಕೆ ಮಾತ್ರ ಹಣ ಬಿಡುಗಡೆ ಮಾಡಿದೆ, ವಿರೋದ ಪಕ್ಷದ ಶಾಸಕರಿರುವ ಕ್ಷೇತ್ರಕ್ಕೆ ಹಣ ಬಿಡುಗಡೆ ಮಾಡದೆ ತಾರತಮ್ಯ ಮಾಡುತ್ತಿದೆ. ಕಾಂಗ್ರೆಸ್ ಆಡಳಿತ ನಡೆಸುತ್ತಿದ್ದಾಗ ಲೋಕೋಪಯೋಗಿ ಇಲಾಖೆಯಲ್ಲಿ ಕೆಲವು ನಿಯಮಗಳನ್ನು ಅನುಸರಿಸುತ್ತಿದ್ದೆವು. ಈಗ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಬಿಜೆಪಿ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ. ಎಲ್ಲಾ ರಂಗವನ್ನು ಭ್ರಷ್ಚಾಚಾರ ಮಾಡಿ ಹಣವನ್ನು ಲೂಟಿ ಹೊಡೆದಿದ್ದಾರೆ ಎಂದು ಬಿಜೆಪಿ ಸರ್ಕಾರದ ಮೇಲೆ ಕಿಡಿ ಕಾರಿದರು.
ಗೋಷ್ಠಿಯಲ್ಲಿ ತಾಲೂಕು ಕಾಂಗ್ರೆಸ್ ಅಧ್ಯಕ್ಷ ಡಾ.ಕೆ.ಪಿ. ಅಂಶುಮಂತ್, ಕಾಂಗ್ರೆಸ್ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ನವೀನ್, ಆರ್. ಸದಾಶಿವ, ಕೆ.ಎಂ. ಗಂಗಾಧರ್, ಬಿ.ಸಿ. ಗೀತ, ಆದಿಲ್, ಕೆ.ವಿ. ವಸಂತಕುಮಾರ್, ಲಕ್ಷ್ಮಣಶೆಟ್ಟರು, ಟಿ.ವಿ. ರಾಜು, ಕೆ.ಎ. ಅಬೂಬಕರ್, ಶೇವಿಯಾರ್ ಇದ್ದರು.