ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

5 ಕ್ಷೇತ್ರಗಳಿಗೆ 56 ಅಭ್ಯರ್ಥಿಗಳು, ರಂಗೇರಿದ ಚುನಾವಣಾ ಕಣ

Rashmi Kasaragodu
Updated On : 25 Apr 2013, 11:33 am

ಕಪ್ರವಾರ್ತೆ, ಚಿಕ್ಕಮಗಳೂರು, ಏ.24
ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ ಈ ಬಾರಿ 56 ಮಂದಿ ಅಭ್ಯರ್ಥಿಗಳಿದ್ದು, ಎಲ್ಲೆಡೆ ಚುನಾವಣಾ ಪ್ರಚಾರ ಕಾವೇರುತ್ತಿದೆ.
 ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳ ಮುಖಂಡರು ಕ್ಷೇತ್ರಗಳಲ್ಲಿ ಪ್ರಚಾರದ ಜತೆಗೆ ಪ್ರತಿ ಸ್ಪರ್ಧಿಗಳ ವಿರುದ್ಧ ಆರೋಪ ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ದಿನ ದಿನಕ್ಕೂ ಪ್ರಚಾರದ ಅಬ್ಬರ ಚುರುಕಾಗುತ್ತಿದೆ.
 ಇತ್ತ, ಜಿಲ್ಲಾಡಳಿತ ಚುನಾವಣೆಗೆ ತಯಾರಿ ನಡೆಸುತ್ತಿದೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾ ವೀಕ್ಷಕರು ಹಾಗೂ ಅಧಿಕಾರಿಗಳು ಬುಧವಾರ ಬೆಳಿಗ್ಗೆ ಸಭೆಯನ್ನು ನಡೆಸಿದರು. ಚುನಾವಣಾ ಬಂದೋಬಸ್ತಿಗಾಗಿ ತಮಿಳುನಾಡಿನಿಂದ ಬಂದಿರುವ ಪೊಲೀಸರು ನಗರದಲ್ಲಿ ಬೆಳಿಗ್ಗೆ ಪಥ ಸಂಚಲನ ನಡೆಸಿದರು. ಅತ್ತ ಎಐಟಿ ಕಾಲೇಜಿನಲ್ಲಿ ಚುನಾವಣೆಗೆ ನಿಯೋಜನೆಯಾಗಿರುವ ಮತಗಟ್ಟೆ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ತರಬೇತಿ ನೀಡಲಾಯಿತು. ಇದೇ ಸಂದರ್ಭದಲ್ಲಿ ಸಿಬ್ಬಂದಿಗಳು ಮತದಾನ ಮಾಡಿದರು.
5,630 ಸಿಬ್ಬಂದಿ: ಇಲ್ಲಿನ 5 ವಿಧಾನಸಭಾ ಕ್ಷೇತ್ರಗಳಲ್ಲಿ 1,165 ಮತಗಟ್ಟೆಗಳಿವೆ. ಇವುಗಳಲ್ಲಿ ಶೃಂಗೇರಿ ಕ್ಷೇತ್ರದಲ್ಲಿ 249, ಮೂಡಿಗೆರೆ- 224, ಚಿಕ್ಕಮಗಳೂರು- 237, ತರೀಕೆರೆ- 219 ಹಾಗೂ ಕಡೂರು ಕ್ಷೇತ್ರದಲ್ಲಿ 236 ಮತಗಟ್ಟೆಗಳಿವೆ.
ಇಲ್ಲಿ ಚುನಾವಣಾ ಕರ್ತವ್ಯಕ್ಕಾಗಿ 1165 ಮತಗಟ್ಟೆ ಅಧಿಕಾರಿಗಳು, 1,165 ಸಹಾಯಕ ಮತಗಟ್ಟೆ ಅಧಿಕಾರಿಗಳು, ಇದರ ಜತೆಗೆ 2 ಮತ್ತು 3ನೇ ಮತಗಟ್ಟೆ ಸಿಬ್ಬಂದಿಗಳಾಗಿ ತಲಾ 1,165 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. 1200ಕ್ಕಿಂತ ಹೆಚ್ಚು ಮತದಾರರು ಇರುವ ಮತಗಟ್ಟೆಗಳಿಗೆ ಹೆಚ್ಚುವರಿಯಾಗಿ 31 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಚುನಾವಣಾ ಕರ್ತವ್ಯಕ್ಕೆ 4,691 ಸಿಬ್ಬಂದಿಗಳನ್ನು ನಿಯೋಜಿಸುವ ಜತೆಗೆ ಶೇ. 20 ರಷ್ಟು ಅಂದರೆ 939 ಸಿಬ್ಬಂದಿಗಳು ತಕ್ಷಣಕ್ಕೆ ನಿಯೋಜಿಸಲು ಮೀಸಲಿಡಲಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ 5,630 ಮಂದಿಯನ್ನು ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ. ಈ ಪೈಕಿ ಶೃಂಗೇರಿ ಕ್ಷೇತ್ರಕ್ಕೆ 1,200, ಮೂಡಿಗೆರೆಗೆ 1,081, ಚಿಕ್ಕಮಗಳೂರು 1,149, ತರೀಕೆರೆ- 1,057, ಕಡೂರಿಗೆ 1,143 ಸಿಬ್ಬಂದಿ ನಿಯೋಜಿಸಲಾಗಿದೆ.
33,642 ಮತದಾರರು ಸೇರ್ಪಡೆ: ಚಿಕ್ಕಮಗಳೂರು ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ ಈ ಹಿಂದೆ 8,01,380 ಮತದಾರರು ಇದ್ದರು. ಈ ಬಾರಿ ಈ ಸಂಖ್ಯೆ 8,35,022ಕ್ಕೆ ಏರಿದೆ. ಅಂದರೆ 33,642 ಮತದಾರರು ಹೊಸದಾಗಿ ಸೇರ್ಪಡೆಗೊಂಡಿದ್ದಾರೆ.
ಇತ್ತೀಚೆಗೆ ನಡೆದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಸಂದರ್ಭದಲ್ಲಿ ಕೆಲವು ಮತದಾರರ ಹೆಸರು ಕೈಬಿಡಲಾಗಿದೆ ಹಾಗೂ ವಾರ್ಡ್‌ಗಳನ್ನು ಅದಲುಬದಲು ಮಾಡಲಾಗಿದೆ. ಈ ಕೆಲಸ ಉದ್ದೇಶ ಪೂರ್ವಕವಾಗಿ ಮಾಡಲಾಗಿದೆ ಎಂಬ ಆರೋಪದ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿದ್ದವು. ಇದರಿಂದಾಗಿ ಚುನಾವಣಾ ಆಯೋಗ ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ಸೇರ್ಪಡೆ ಮಾಡಲು ಏ. 17ರವರೆಗೆ ಕಾಲಾವಕಾಶ ನೀಡಿತ್ತು. ಅದರಂತೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಂದ ಅರ್ಜಿಗಳ ಸಂಖ್ಯೆ 40,083, ಅವುಗಳಲ್ಲಿ ಪರಿಶೀಲಿಸಿ 33,642 ಹೆಸರುಗಳನ್ನು ಅಂತಿಮಗೊಳಿಸಿ ಮತದಾರರ ಪಟ್ಟಿಗೆ ಸೇರಿಸಲಾಗಿದೆ.
ಚಿಕ್ಕಮಗಳೂರಿನಲ್ಲಿ 1,91,074: ಅದರಂತೆ ಶೃಂಗೇರಿ ಕ್ಷೇತ್ರದಲ್ಲಿ 5,346, ಮೂಡಿಗೆರೆ- 6,845, ಚಿಕ್ಕಮಗಳೂರು- 9,366, ತರೀಕೆರೆ- 5,061, ಕಡೂರು ಕ್ಷೇತ್ರದಲ್ಲಿ 7,024 ಮತದಾರರು ಹೊಸದಾಗಿ ಸೇರ್ಪಡೆಗೊಂಡಿದ್ದಾರೆ. ಅದರಿಂದ ಇದೀಗ ಶೃಂಗೇರಿ ಕ್ಷೇತ್ರದಲ್ಲಿ 1,49,980, ಮೂಡಿಗೆರೆ- 1,52,650, ಚಿಕ್ಕಮಗಳೂರು- 1,91,074, ತರೀಕೆರೆ- 1,59,863, ಕಡೂರು ಕ್ಷೇತ್ರದಲ್ಲಿ 1,81,455 ಮತದಾರರು ಇದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement