ಪ್ರೇಕ್ಷಕರನ್ನು ದೇವರೆಂದ ರಾಜ್
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಏ.24
ಜನಮುಖಿ ಚಿಂತನೆ ಮತ್ತು ನೆಲಮುಖಿಯ ಧೋರಣೆ ಮೂಲಕ ಸಾಮಾನ್ಯ ಪ್ರೇಕ್ಷಕರನ್ನು ದೇವರೆಂದು ಕರೆದು ಭಾವ, ಬೆವರಿನ ಸಂಗಮ ಡಾ. ರಾಜ್ ಕುಮಾರ್ ಎಂದು ಸಾಹಿತಿ ಚಟ್ನಳ್ಳಿ ಮಹೇಶ್ ಹೇಳಿದ್ದಾರೆ.
ನಗರದ ರಾಜಾ ಸ್ಟುಡಿಯೋ ಮುಂಭಾಗ ಅಭಿಮಾನಿ ಎ.ಎನ್. ಮೂರ್ತಿ ಬುಧವಾರ ಹಮ್ಮಿಕೊಂಡಿದ್ದ ಡಾ. ರಾಜ್ ಕುಮಾರ್‌ರವರ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿ ಅವರು ಮಾತನಾಡಿದರು.
ಸಹೃದಯಿ ಕಲಾವಿದ: ಸತ್ಯ, ಸಂಸ್ಕಾರ, ವಿನಯ, ವಿಧೇಯತೆ, ಉಪಕಾರ ಸ್ಮರಣೆ ಇಂತಹ ಹಲವಾರು ಧರ್ಮ ಮಾರ್ಗಗಳ ಜತೆ ಯಶಸ್ಸು ಕಂಡ ಜಗತ್ತಿನ ವಿಶಾಲವಾದ ಕಲಾವಿದ ಡಾ. ರಾಜ್ ಎಂದ ಅವರು, ಸಂಪತ್ತಿಗೆ ಸವಾಲ್, ಬಂಗಾರದ ಮನುಷ್ಯ ಸೇರಿದಂತೆ ಹಲವು ಚಿತ್ರಗಳ ಮೂಲಕ ದುಷ್ಟರನ್ನು ಪರಿವರ್ತನೆ ಮಾಡಿ, ಒಂದು ಧರ್ಮ ಮಾಡಬೇಕಾದ ಸಮಾಜ ಪರಿವರ್ತನೆ ಕೆಲಸವನ್ನು ತನ್ನ ಅಪ್ರತಿಮೆ ಕಲೆಯ ಮೂಲಕ ಜಗತ್ತಿಗೆ ತೋರಿಸಿ ಇತಿಹಾಸ ಸೃಷ್ಠಿಸಿದ ಶಕ್ತಿ ರಾಜ್ ಎಂದರು.
ಕನ್ನಡಾಭಿಮಾನಿ ರಾಜ್: ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಾ. ಜೆ.ಪಿ. ಕೃಷ್ಣೇಗೌಡ, ನಮ್ಮ ಸಂಬಂಧಿಕರ ಹುಟ್ಟುಹಬ್ಬವನ್ನು ಮಾಡುವ ಕಾಲ ಮರೆಯಾಗುತ್ತಿರುವ ಈ ಸಂದರ್ಭದಲ್ಲಿ ಮೇರು ನಟನ ಹುಟ್ಟುಹಬ್ಬವನ್ನು ಕಳೆದ ಕೆಲ ವರ್ಷಗಳಿಂದ ಆಚರಿಸುತ್ತಾ ಬಂದಿರುವ ಮೂರ್ತಿಯವರ ಕೆಲಸ ನಿಜವಾದ ಕಲಾಭಿಮಾನಿ ಮತ್ತು ಕನ್ನಡಾಭಿಮಾನಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಡಾ. ರಾಜ್ ರವರಿಗೆ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಬಂದಂತ ಸಂದರ್ಭದಲ್ಲಿ ಜಿಲ್ಲೆಯ ಜನರು ಗೌರವಿಸಿದ ನೆನಪು ಇನ್ನು ಮಾಸಿಲ್ಲ ಎಂದರು.
ಎ.ಎನ್. ಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕರ್ನಾಟಕ ಆಟೋ ಚಾಲಕರ ಸಂಘದಿಂದ ಅಭಿಮಾನಿಗಳಿಂದ ಪಾನಕ ವಿತರಿಸಲಾಯಿತು. ರಾಜ್ ಭಾವಚಿತ್ರಕ್ಕೆ ಪುಷ್ಪವಿರಿಸಿ ದೀಪ ಬೆಳಗುವ ಮೂಲಕ ಕೇಕ್ ಕತ್ತರಿಸಲಾಯಿತು.
ವಾಣಿ ಚಂದ್ರಯ್ಯನಾಯ್ಡು, ಟಿಂಬರ್ ಪಾರ್ಥ, ವಕೀಲ ಎಸ್.ಎಸ್. ವೆಂಕಟೇಶ್, ಪ್ಲವರ್ ರಮೇಶ್, ಮಂಜು, ಬಾಲು, ಮಧು, ದೀಪಕ್ ಹಾಜರಿದ್ದರು