ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಬತ್ತಿದೆ ಅಂತರ್ಜಲ: ಕಾದಿವೆ ಕಷ್ಟದ ದಿನಗಳು

Rashmi Kasaragodu
Updated On : 25 Apr 2013, 11:34 am

 ಅನಂತ ನಾಡಿಗ್
ಕ.ಪ್ರ.ವಾರ್ತೆ, ತರೀಕೆರೆ, ಏ.24
ಕರೆಂಟ್ ಇಲ್ಲ, ನೀರು ಇಲ್ಲ, ಒಂದೆಡೆ ಕಾದು ಕಬ್ಬಿಣದಂತಿರುವ ನೆಲ, ಮತ್ತೊಂದೆಡೆ ನೆತ್ತಿಯ ಮೇಲೆ ಸುಡುವ ಬಿಸಿಲು. ಮಳೆ ಬಾರದೆ ಕೆರೆಗಳೆಲ್ಲಾ ಖಾಲಿ ಖಾಲಿ. ಹಸಿರು ನಾಪತ್ತೆ. ಬೆಳೆಯೂ ಇಲ್ಲ...
 ಮೊದಲೆ ಬರಗಾಲದಿಂದ ತತ್ತರಿಸಿದ್ದ ತರೀಕೆರೆ ತಾಲೂಕಿನಲ್ಲಿ ಈ ಬಾರಿ ತಲೆದೋರಿರುವ ತೀವ್ರ ಬರಗಾಲದಿಂದ ರೈತರ ಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ. ಕಳೆದ ಇಪ್ಪತ್ತು ವರ್ಷಗಳಿಂದ ಪ್ರೀತಿಯಿಂದ ಸಾಕಿ ಬೆಳಸಿದ ತೋಟದ ಅಡಕೆ, ತೆಂಗು, ಬಾಳೆ ಇತ್ಯಾದಿ ದೀರ್ಘಕಾಲಿಕ ಫಸಲು ಕೊಡುವ ಮರಗಳು, ಬೆಂಕಿಯಂತೆ ಸುಡುತ್ತಿರುವ ಬಿಸಲಿನಿಂದಾಗಿ ಒಣಗುತ್ತಿವೆ.
ಮಳೆ ಇಲ್ಲ: ಏಪ್ರಿಲ್ ತಿಂಗಳು ಕಳೆಯುತ್ತಿದ್ದರೂ ಮೋಡ ಕಟ್ಟುವ, ಮಳೆ ಬರುವ ಸೂಚನೆ ಕಂಡುಬಂದಿಲ್ಲ. ಬೆಳಿಗ್ಗೆ 7 ಗಂಟೆಗೆ ಪ್ರಾರಭವಾಗುವ ಬಿಸಿಲಿನ ದಗೆ, ಮಧ್ಯಾಹ್ನದ ಹೊತ್ತಿಗೆ ಮಿತಿ ಮೀರುತ್ತದೆ. ಸಂಜೆ ಸಮೀಪಿಸಿದರೂ ಬಿಸಿಲಿನ ಧಗೆ ಕಡಿಮೆಯಾಗುವುದಿಲ್ಲ.
 ಇಂತಹ ಭೀಕರ ಬರಗಾಲವನ್ನು ನನ್ನ 60 ವರ್ಷಗಳ ವಯಸ್ಸಿನಲ್ಲಿ ಹಿಂದೆಂದು ಕಂಡಿರಲಿಲ್ಲ ಎಂದು ಶಿವನಿ ಭಾಗದ ರೈತರೊಬ್ಬರು ಹೇಳುತ್ತಾರೆ. ಬಿಸಿಲಿನ ಬೇಗೆಯಿಂದ ಅಡಕೆ, ತೆಂಗು ಮತ್ತು ಬಾಳೆ ಗಿಡಗಳನ್ನು ಕಾಪಾಡಿಕೊಳ್ಳಬೇಕು ಎಂದು ತೋಟದಲ್ಲಿ   ಅರ್ಧ ಲಕ್ಷಕ್ಕೂ ಹೆಚ್ಚು ಹಣ ಖರ್ಚು ಮಾಡಿ ಬೋರ್‌ವೆಲ್ ಕೊರೆಸುವ ಸ್ಥಿತಿ ರೈತರಿಗೆ ಬಂದೊದಗಿದೆ.
ಅಂತರ್ಜಲ ಖಾಲಿ: ಆದರೆ 600 ರಿಂದ 800 ಅಡಿ ಕೊರೆದರೂ ನೀರಿಲ್ಲ. ತಾಲೂಕಿನ, ಶಿವನಿ, ಅಜ್ಜಂಪುರ ಲಿಂಗದಹಳ್ಳಿ ಹೋಬಳಿಯ ಸಾವಿರಾರು ಎಕರೆಯ ತೋಟಗಳಲ್ಲಿ ಹೊಸದಾಗಿ ತೋಡಿಸಿದ ನೂರಾರು ಬೋರ್‌ವೆಲ್‌ಗಳಲ್ಲಿ ನೀರು ಸಿಕ್ಕಿಲ್ಲ. 30 ರಿಂದ 40 ಪೈಪುಗಳನ್ನು ಇಳಿಸಿದರೂ ಪ್ರಯೋಜನವಿಲ್ಲದಂತಾಗಿದೆ. ಭೂಮಿ ಕೊರೆಯುವಾಗ ಅಕಸ್ಮಾತ್ ಯಾವುದಾದರೂ ಬೋರ್‌ನಲ್ಲಿ ನೀರು ಕಾಣಿಸಿದರೂ ಅದು ತಾತ್ಕಾಲಿಕವಷ್ಟೆ. ಕೇವಲ ಒಂದು ವಾರದಲ್ಲಿ ಹೊಸ ಬೋರ್‌ನಲ್ಲೂ ನೀರು ಖಾಲಿಯಾಗುತ್ತದೆ. ಯಾಥಾಪ್ರಕಾರ ರೈತರಿಗೆ ನಿರಾಶೆ ಕಟ್ಟಿಟ್ಟ ಬುತ್ತಿ.
ಗಿರಿ ಪ್ರದೇಶದಲ್ಲೇ ನೀರಿಲ್ಲ: ತಾಲೂಕಿನ ಜಲಾನಯನ ಪ್ರದೇಶಗಳೆಂದು ಹಸಿರಿಗೆ ಹೆಸರು ಪಡೆದಿರುವ ಕಲ್ಲತ್ತಿಗಿರಿ, ಕೆಮ್ಮಣಗುಂಡಿ ಇತ್ಯಾದಿ ಗಿರಿ ಪ್ರದೇಶಗಳಲ್ಲೇ ಭೂಮಿಯಲ್ಲಿ ನೀರಿಲ್ಲದಂತಾಗಿದೆ.
ಕಳೆದ ಎರಡು ವರ್ಷಗಳಿಂದಲೂ  ಸಮರ್ಪಕ ಮಳೆಯ ಕೊರೆತೆಯಿಂದ ಹೀಗಾಗಿದೆ, ತೋಟಗಳಲ್ಲಿ ಎಷ್ಟು ಆಳ ಕೊರೆಸಿದರೂ ಬೋರ್‌ನಲ್ಲಿ ನೀರು ಸಿಗುತ್ತಿಲ್ಲ, ಅಲ್ಲಲ್ಲಿ ಬೋರ್‌ನಲ್ಲಿರುವ ನೀರನ್ನು ಉಪಯೋಗಿಸಿಕೊಳ್ಳೋಣವೆಂದರೆ ಕರೆಂಟೂ ಸರಿಯಾಗಿ ಇಲ್ಲ ಎಂದು ದೋರನಾಳು ಕೃಷಿಕ ನಿಸಾರ್ ಖಾನ್ ಅಭಿಪ್ರಾಯಪಡುತ್ತಾರೆ.
ಕುಡಿವ ನೀರಿಗೂ ತತ್ವಾರ: ತಾಲೂಕಿನಲ್ಲಿ ಪ್ರಮುಖ ಕೆರೆಗಳೇ ನೀರಿಲ್ಲದೆ ಒಣಗಿವೆ. ಗ್ರಾಮೀಣ ಪ್ರದೇಶಗಳ ಜನ ಜಾನುವಾರುಗಳಿಗೆ ಕುಡಿಯಲು ನೀರಿಲ್ಲದಂತಾಗಿದೆ. ದೂರದ ಊರುಗಳಿಂದ ಟ್ಯಾಂಕರ್‌ಗಳಲ್ಲಿ ನೀರನ್ನು ತರಬೇಕಾದ ಸ್ಥಿತಿ ತಲೆದೋರಿದೆ. ಮಳೆಯೊಂದೆ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement