ಬಿಎಸ್‌ವೈ ಸಾಧನೆಯೇ ಗೆಲವಿಗೆ ಸಹಕಾರಿ
ಕ.ಪ್ರ.ವಾರ್ತೆ, ಕಡೂರು, ಏ.24 ನಾನು ಶ್ರೀಮಂತನಲ್ಲದಿದ್ದರೂ ಜನರ ಶ್ರೀಮಂತಿಕೆ ಮತ್ತು ಯಡಿಯೂರಪ್ಪನವರ ಸಾಧನೆ ನಾನು ಗೆಲ್ಲಲು ಸಹಕಾರಿಯಾಗಲಿದೆ ಎಂದು ಕಡೂರು ವಿಧಾನಸಭಾ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಬೆಳ್ಳಿಪ್ರಕಾಶ್ ಹೇಳಿದರು.
ಅವರು ಕಡೂರು ಕ್ಷೇತ್ರದ ಕಸಬಾ ಹೋಬಳಿಯ ಅಂಚೆ ಚೋಮನಹಳ್ಳಿ, ಕೆರೆಸಂತೆ, ಕುಪ್ಪಾಳು, ಸಿದ್ರಾಮನಹಳ್ಳಿ, ಮಲ್ಲಪ್ಪನಹಳ್ಳಿ, ಸಂತೆ ಕಡೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮತಯಾಚನೆ ಮಾಡಿ ಮಾತನಾಡಿದರು.
ಮೊದಲ ಹಂತದ ಪ್ರಚಾರ: ಕ್ಷೇತ್ರದ ಆರು ಜಿಪಂ ಕ್ಷೇತ್ರಗಳಲ್ಲಿ ಮೊದಲ ಹಂತದ ಪ್ರಚಾರ ಕಾರ್ಯ ಮುಗಿಸಿ ಮತಯಾಚಿಸುತ್ತಿದ್ದೇನೆ. ಎಲ್ಲೆಡೆ ಮತದಾರರು ಕೆಜೆಪಿ ನಾಯಕ ಯಡಿಯೂರಪ್ಪನವರ ಸಾಧನೆ ನೋಡಿ ಕೆಜೆಪಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದು, ಸ್ವಯಂ ಪ್ರೇರಿತರಾಗಿ ಯುವಕರ ಪಡೆಗಳು ಈ ಚುನಾವಣೆ ನಡೆಸುತ್ತಿರುವುದರಿಂದ ನನ್ನ ಹುಮ್ಮಸ್ಸು ಹೆಚ್ಚುವ ಗೆಲವಿಗೆ ಶ್ರೀರಕ್ಷೆಯಾಗಲಿದೆ ಎಂದರು.
ಜಾತ್ಯತೀತತೆ ಮೇಲಿನ ನಂಬಿಕೆ ಮತ್ತು ಯಡಿಯೂರಪ್ಪನವರು ಹಿಂದುಳಿದವರು, ಅಲ್ಪಂಸಂಖ್ಯಾತರು, ಪರಿಶಿಷ್ಟ ವರ್ಗ ಮತ್ತು ದುರ್ಬಲ ವರ್ಗದರಿಗೆ ನೀಡಿರುವ ಕೊಡುಗೆಗಳಿಂದ ಅಭೂತಪೂರ್ವವಾಗಿ ಜನ ಕೆಜೆಪಿ ಬೆಂಬಲಿಸುತ್ತಿದ್ದಾರೆ. ನಮ್ಮ ಮುಖಂಡರೊಂದಿಗೆ ಹೋದೆಡೆಯಲ್ಲೆಲ್ಲಾ ಜನರು ಕರೆದು ಮಾತನಾಡಿಸಿ ತೋರುತ್ತಿರುವ ಪ್ರೀತಿಯು ಮತಗಳಾಗಿ ಪರಿವರ್ತನೆಯಾಗುತ್ತಿದೆ ಎಂದರು.
ಕೆಜೆಪಿ ತಾಲೂಕು ಅಧ್ಯಕ್ಷ ಎಸ್.ವಿ. ಉಮಾಪತಿ, ಕೆಜೆಪಿ ಮುಖಂಡ ಲಿಂಗ್ಲಾಪುರ ಶಂಕರಮೂರ್ತಿ, ಚಂದ್ರಶೇಖರ್, ಮಂಜುನಾಥ್, ಯಾಸೀನ್, ಚಿನ್ನರಾಜು, ಕುಶಾಲ್, ಶಿವಕುಮಾರ್, ಸಂತೋಷ್, ಗಂಗಾಧರ್, ಅಬ್ದುಲ್ ಉಪಸ್ಥಿತರಿದ್ದರು.