ಬಿಜೆಪಿ ಸರ್ಕಾರದ ಸಾಧನೆಯೇ ಶ್ರೀರಕ್ಷೆ
ಕ.ಪ್ರ.ವಾರ್ತೆ, ಕಡೂರು, ಏ.24 ಜನ ಸಾಮಾನ್ಯರ ಕೈಗೆ ಸಿಗುವ ಮತ್ತು ಬಡವರ ಪರ ಹೋರಾಟ ಮಾಡುತ್ತಾ ಜನರ ಸೇವೆಯಿಂದ ಹಿಂದೆ ಸರಿಯದೇ ಮುನ್ನುಗುತ್ತಿರುವ ಬಿಜೆಪಿ ಅಭ್ಯರ್ಥಿ ಬೀರೂರು ದೇವರಾಜುರವರ ಗೆಲವಿಗೆ ಬಿಜೆಪಿ ಸರ್ಕಾರದ ಸಾಧನೆಯೇ ಶ್ರೀರಕ್ಷೆ ಎಂದು ಪಕ್ಷದ ಜಿಲ್ಲಾ ಮುಖಂಡ ಕೆ.ಎಚ್. ಶಂಕರ್ ಹೇಳಿದರು.
ಅವರು ಕಡೂರು ಪಟ್ಟಣದಲ್ಲಿ ವಿವಿಧ ಪಕ್ಷಗಳಿಂದ ಬಿಜೆಪಿಗೆ ಸೇರ್ಪಡೆಯಾದ ಮುಖಂಡರು ಹಾಗೂ ಕಾರ್ಯಕರ್ತರನ್ನು ಬಿಜೆಪಿಗೆ ಬರಮಾಡಿಕೊಂಡು ಮಾತನಾಡಿದರು.
ಜನಪರ ಕಾಳಜಿ: ಬಿಜೆಪಿಯ ಸಮರ್ಥ ಅಭ್ಯರ್ಥಿ ಬೀರೂರು ದೇವರಾಜುರವರು ಕ್ಷೇತ್ರದಲ್ಲಿ ಹದಿನೈದು ವರ್ಷಗಳಿಗಿಂತಲೂ ಹೆಚ್ಚು ವರ್ಷದಿಂದ ಸಕ್ರಿಯ ರಾಜಕಾರಣ ಮಾಡಿಕೊಂಡು ಜನ ಸಾಮಾನ್ಯರ ಜೊತೆಯಲ್ಲಿಯೇ ಇದ್ದು, ಅವರ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಜನಪರ ಕಾಳಜಿ ಮೆಚ್ಚಿ ಕಾಂಗ್ರೆಸ್, ಜೆಡಿಎಸ್, ಕೆಜೆಪಿ ಮತ್ತು ಬಿ ಎಸ್‌ಆರ್‌ಗಳಿಂದ ಎಲ್ಲಾ ವರ್ಗಗಳ ಮುಖಂಡರು ಹಾಗೂ ಕಾರ್ಯಕರ್ತರು ಬಿಜೆಪಿ ಸೇರುತ್ತಿದ್ದಾರೆ ಎಂದರು.
ಬೀರೂರಿನ ಮಾಜಿ ಪುರಸಭಾಧ್ಯಕ್ಷ ಎಸ್. ರಮೇಶ್ ಮಾತನಾಡಿ, ಎಲ್ಲ ಸಮುದಾಯದ ಜನರೂ ಮತ್ತು ಪಕ್ಷದ ಮುಖಂಡರು ಸೇರಿ ಜನಪರ ವ್ಯಕ್ತಿಯಾಗಿರುವ ಬೀರೂರು ದೇವರಾಜುರವರ ಗೆಲುವಿಗೆ ಹಗಲಿರುಳೂ ಶ್ರಮಿಸುತ್ತಿದ್ದಾರೆ ಎಂದರು.
ಗೆಲವು ಖಚಿತ: ಬೀರೂರು ಪುರಸಭಾ ಸದಸ್ಯ ದೇವರಾಜು ಮಾತನಾಡಿ, ಬಿಜೆಪಿ ಅಭ್ಯರ್ಥಿ ದೇವರಾಜುರವರ ಉತ್ತಮ ವ್ಯಕ್ತಿತ್ವ ಹಾಗೂ ಪ್ರೀತಿ ಮನೋಭಾವದಿಂದ ಎಲ್ಲ ವರ್ಗದ ಜನರು ಬೆಂಬಲಿಸುತ್ತಿರುವುದರಿಂದ ದೇವರಾಜುರವರು ಗೆಲುವು ಸಾಧಿಸಲಿದ್ದಾರೆ ಎಂದರು.
ಬೀರೂರು ಮಾಜಿ ಪುರಸಭಾ ಅಧ್ಯಕ್ಷ ಬಿ.ಕೆ. ಶಶಿಧರ್, ಕಡೂರು ಪುರಸಭಾ ಸದಸ್ಯ ರಾಜೇಶ್, ಮುಖಂಡ ತೌಫೀಕ್ ಪಾಶಾ, ಮಂಜುನಾಥ್, ಶರೀಫ್, ಅಸ್ಲಾಂ, ಕಲ್ಲೇನಹಳ್ಳಿ ಬಸವರಾಜಪ್ಪ, ಲೋಹಿತ್, ಮಹೇಶ್, ರಾಜಣ್ಣ, ರಾಮಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು.