ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

3 ಹೋಳಾಗಿದ್ದೇ ಬಿಜೆಪಿ ಸಾಧನೆ

Rashmi Kasaragodu
Updated On : 26 Apr 2013, 10:57 am

ಕ.ಪ್ರ.ವಾರ್ತೆ ಟಿ ಮೂಡಿಗೆರೆ ಟಿ  ಏ.25
ಕೇಂದ್ರ ಸರಕಾರ ಶೇ.90ರಷ್ಟು ಬಹುಪಯೋಗಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಂಪೂರ್ಣ ವಿಫಲವಾಗಿರುವ ರಾಜ್ಯ ಬಿಜೆಪಿ ಸರಕಾರ ಅಭಿವೃದ್ಧಿ ಕಾರ್ಯಗಳಿಗೆ ಬೇಡಿಕೆ ಸಲ್ಲಿಸದೇ ಕೇವಲ ಕುರ್ಚಿಗಾಗಿ ಕಿತ್ತಾಟ ನಡೆಸುವಲ್ಲಿ ಅವಧಿ ಮುಕ್ತಾಯಗೊಳಿಸಿದೆ ಎಂದು ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಆರೋಪಿಸಿದರು.
ಗುರುವಾರ ಮೂಡಿಗೆರೆ ಕ್ಷೇತ್ರದ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಪರವಾಗಿ ಕಿರುಗುಂದ ಗ್ರಾಮದಲ್ಲಿ ಪ್ರಚಾರ ನಡೆಸಿ ಮಾತನಾಡುತ್ತಿದ್ದರು. ಕೇಂದ್ರವು ಗ್ರಾಮೀಣಾಭಿವೃದ್ಧಿಗೆ ಮಹತ್ವ ನೀಡಿದೆ. 13ನೇ ಹಣಕಾಸು ಯೋಜನೆಯಿಂದ ರಾಜ್ಯಕ್ಕೆ ಸಾಕಷ್ಟು ಲಾಭವಿದೆ. ಉದ್ಯೋಗ ಖಾತ್ರಿ ಯೋಜನೆ, ಆರೋಗ್ಯ, ಶಿಕ್ಷಣ ಅಭಿಯಾನ, ಪಡಿತರ ಚೀಟಿದಾರರಿಗೆ ಆಹಾರ ಸೌಕರ್ಯ ಒದಗಿಸುತ್ತಿದ್ದು, ಮುಂದಿನ ದಿನಗಳಲ್ಲಿ ಬಡವರಿಗೆ ಅರ್ಹ ರೀತಿಯಲ್ಲಿ ಪಡಿತರ ತಲುಪಿಸಲು ಫುಡ್‌ಸೆಕ್ಯೂರಿಟಿ ಆಕ್ಟ್ ಜಾರಿಗೊಳಿಸಲಿದೆ ಎಂದು ಅವರು ತಿಳಿಸಿದರು.
ಮೂರು ಹೋಳು:  ಬಿಜೆಪಿ ಕಳೆದ ಚುನಾವಣೆಯಲ್ಲಿ ರೈತರಿಗೆ ಉಚಿತ ವಿದ್ಯುತ್ ಮತ್ತು ದಿನದ 24 ತಾಸು ವಿದ್ಯುತ್ ಸೇವೆ, ನಿರುದ್ಯೋಗಿ ಭತ್ಯೆ ಹಾಗೂ ಗ್ರಾಮೀಣ ಪ್ರದೇಶಗಳ ಮೂಲ ಸೌಕರ್ಯ ಒದಗಿಸುವ ತರಹೇವಾರಿ ಭರವಸೆಗಳನ್ನು ನೀಡಿದ್ದು ಹುಸಿಗೊಂಡಿದೆ. ಪಡಿತರ ಚೀಟಿಯನ್ನು ಸರಿಯಾಗಿ ವಿತರಿಸಲಿಲ್ಲ. ಆಡಳಿತ ವೈಪಲ್ಯದ ನಡುವೆ ಐದು ವರ್ಷಗಳಲ್ಲಿ ಮೂರು ಮುಖ್ಯಮಂತ್ರಿಗಳನ್ನು ಕಂಡ ಬಿಜೆಪಿ ಸರಕಾರ ಮೂರು ಹೋಳಾಗಿದ್ದೇ ಬಹು ದೊಡ್ಡ ಸಾಧನೆಯಾಗಿದೆ ಎಂದು ವಾಗ್ದಾಳಿ ನಡೆಸಿದರು.
ಪಕ್ಷದ  ಅಭ್ಯರ್ಥಿ ಬಿ.ಎನ್. ಚಂದ್ರಪ್ಪ ಸಮಾಜ ಸೇವೆ ಮನೋಭಾವ ಹೊಂದಿರುವುದರಿಂದ ಪ್ರಾಮಾಣಿಕ ಮತ್ತು ಪಾರದರ್ಶಕ ಆಡಳಿತವನ್ನು ಕಾಣಬಹುದು. ಈ ನಿಟ್ಟಿನಲ್ಲಿ ಹಣ, ಹೆಂಡ, ಆಮಿಷಗಳಿಗೆ ಬಲಿಯಾಗದೇ ಮತದಾರರು ಕಾಂಗ್ರೇಸ್ ಅಭ್ಯರ್ಥಿಯನ್ನು ಪ್ರಚಂಡ ಬಹುಮತದೊಂದಿಗೆ ಜಯ ಗಳಿಸುವಂತೆ ಮಾಡಬೇಕು ಎಂದು ಮನವಿ ಮಾಡಿದರು.
ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಮಾತನಾಡಿ, ಕ್ಷೇತ್ರದ ಸಮಸ್ಯೆಗಳಾದ ನಿವೇಶನ, ವಸತಿ, ರಸ್ತೆ, ಚರಂಡಿ, ಸಮುದಾಯ ಭವನ, ಆಸ್ಪತ್ರೆ, ಭೂಮಿ, ಒತ್ತುವರಿ, ಕುಡಿಯುವ ನೀರು, ಅಂಗನವಾಡಿ, ವಿದ್ಯುತ್ಸೌಕರ್ಯಗಳನ್ನು ಒದಗಿಸಲು ಕಾಂಗ್ರೆಸನ್ನು ಬೆಂಬಲಿಸಲೇಬೇಕಿದೆ. ಇಂದಿರಾಜಿಯವರ 20 ಅಂಶಗಳನ್ನು ಇಂದು ರಾಜ್ಯದಲ್ಲಿ ಬಿಜೆಪಿ ಸರಕಾರ ಅನುಷ್ಠಾನಗೊಳಿಸದೇ ಜನರನ್ನು ಕಂಗಾಲು ಮಾಡಿದೆ ಎಂದರು.
ಈ ಸಮಯದಲ್ಲಿ ರಾಜ್ಯ ಗೃಹ ಮಂಡಳಿ ಮಾಜಿ ಅಧ್ಯಕ್ಷ ಹಾಲಪ್ಪಗೌಡ, ಮುಖಂಡರಾದ ಯು.ಎಚ್.ಹೇಮಶೇಖರ್, ಕಿರುಗುಂದ ನಝೀರ್, ಅಗ್ರಹಾರ ಮಹೇಶ್, ಜಿ.ಪಂ.ಮಾಜಿ ಸದಸ್ಯೆ ರಾಜಮ್ಮ, ಸುಶೀಲಮ್ಮ, ಕಮಲಾಕ್ಷಮ್ಮ, ವಸಂತಮ್ಮ, ತಾ.ಪಂ.ಸದಸ್ಯ ಸಬ್ಲಿ ದೇವರಾಜ್, ರಾಜೇಶ್, ಯು.ಎಚ್.ರಾಜಶೇಖರ್ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement