ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಅತ್ತೆಗೆ ಆಸರೆಯಾದ ನಾಡಿಗೆ ನಾಳೆ ಸೊಸೆ ಭೇಟಿ

Rashmi Kasaragodu
Updated On : 26 Apr 2013, 11:00 am

ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಏ.25
ಅತ್ತೆಗೆ ರಾಜಕೀಯದಲ್ಲಿ ಪುನರ್ ಜನ್ಮ ನೀಡಿರುವ ಕಾಫಿಯ ತವರೂರು ಚಿಕ್ಕಮಗಳೂರಿಗೆ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿಯವರು ಚುನಾವಣಾ ಪ್ರಚಾರಕ್ಕಾಗಿ ಏ.27 ರಂದು ಆಗಮಿಸುತ್ತಿದ್ದಾರೆ.
ಅವರು ಎಐಸಿಸಿ ಅಧ್ಯಕ್ಷೆಯಾದ ನಂತರ ಚಿಕ್ಕಮಗಳೂರು ಜಿಲ್ಲೆಗೆ  ಭೇಟಿ ನೀಡುತ್ತಿರುವುದು ಇದು, ಎರಡನೇ ಬಾರಿ. ಏ. 27 ರಂದು ಆಗಮಿಸಲಿರುವ ಅವರು ಇಲ್ಲಿನ ಜಿಲ್ಲಾ ಆಟದ ಮೈದಾನದಲ್ಲಿ ಅಂದು ಮಧ್ಯಾಹ್ನ  1.15ಕ್ಕೆ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಭಾಷಣ ಮಾಡಲಿದ್ದಾರೆ.
ಇಂದಿರಾಗಾಂಧಿ: 1977ರ ಲೋಕಸಭಾ ಚುನಾವಣೆಯಲ್ಲಿ ಇಂದಿರಾಗಾಂಧಿಯವರು ಸೋತಿದ್ದರು. ಆಗ ಅವರು ಲೋಕಸಭೆ ಪ್ರವೇಶ ಮಾಡಲು ಆಯ್ಕೆ ಮಾಡಿಕೊಂಡ ಕ್ಷೇತ್ರ ಚಿಕ್ಕಮಗಳೂರು, ಆಗ ಲೋಕಸಭಾ ಸದಸ್ಯರಾಗಿದ್ದ ಡಿ.ಬಿ. ಚಂದ್ರೇಗೌಡ ಅವರು ಸಂಸದ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರಿಂದ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಿತು. ಆಗ ಇಂದಿರಾಗಾಂಧಿ ಸೇರಿದಂತೆ 28 ಮಂದಿ ಸ್ಪರ್ಧೆ ಮಾಡಿದ್ದರು.
ಈ  ಚುನಾವಣಾ ಫಲಿತಾಂಶ ಬರೀ ಕರ್ನಾಟಕವಷ್ಟೇ ಅಲ್ಲ, ದೇಶ ಮತ್ತು ವೀದೇಶಗಳ ಗಮನ ಸೆಳೆಯಿತು. ಇಂದಿರಾಗಾಂಧಿಯವರು 2,49,376 ಮತಗಳನ್ನು ಪಡೆದು ಜಯಗಳಿಸಿದರು. ಜೆಎನ್‌ಪಿ ಪಕ್ಷದಿಂದ ಸ್ಪರ್ಧೆ ಮಾಡಿದ್ದ ವೀರೇಂದ್ರ ಪಾಟೀಲ್ 1,72,043 ಮತಗಳನ್ನು ಪಡೆದರು.
ಲೋಕಸಭೆಗೆ ಆಯ್ಕೆಯಾದ ಇಂದಿರಾಗಾಂಧಿಯವರು 1982ರಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ಆಗಮಿಸಿ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು. ಅವರು ಹತ್ಯೆಯಾದ ನಂತರ 1984ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಪ್ರಚಾರಕ್ಕಾಗಿ ರಾಜೀವ್‌ಗಾಂಧಿಯವರು ಜಿಲ್ಲೆಗೆ ಆಗಮಿಸಿದ್ದರು. ಆಗ ಕಾಂಗ್ರೆಸ್‌ನಿಂದ ಲೋಕಸಭೆಗೆ ಸ್ಪರ್ಧೆ ಮಾಡಿದ್ದ ಡಿ.ಕೆ. ತಾರಾದೇವಿ ಅವರು 2,68,912 ಮತಗಳನ್ನು ಪಡೆದು ಜಯಗಳಿಸಿದರು. ಆಗ ಕೇಂದ್ರದಲ್ಲಿ ಕಾಂಗ್ರೆಸ್ 429 ಸ್ಥಾನದೊಂದಿಗೆ ಅಧಿಕಾರಕ್ಕೆ ಬಂದಿತು.
ರಾಹುಲ್‌ಗಾಂಧಿ: 2008ರಲ್ಲಿ ನಡೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿಯವರು ಚಿಕ್ಕಮಗಳೂರು ಜಿಲ್ಲೆಗೆ ಚುನಾವಣಾ ಪ್ರಚಾರಕ್ಕಾಗಿ ಆಗಮಿಸಿದ್ದರು.
ಮೂಡಿಗೆರೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಕಾಂಗ್ರೆಸ್ ಅಭ್ಯರ್ಥಿ  ಬಿ.ಎನ್. ಚಂದ್ರಪ್ಪ ಅವರ ಪರವಾಗಿ ಮೂಡಿಗೆರೆಯ ಹೊಯ್ಸಳ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್‌ನ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರು.
ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಅವರು ಮಾತನಾಡಿ ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಮತಯಾಚನೆ ಮಾಡಿದರು.
ಸೋನಿಯಾಗಾಂಧಿ: ಇಂದಿರಾಗಾಂಧಿಯವರಿಗೆ ರಾಜಕೀಯ ಪುನರ್ ಜನ್ಮ ನೀಡಿದ ಬಳಿಕ ಚಿಕ್ಕಮಗಳೂರು ಜಿಲ್ಲೆ ಕಾಂಗ್ರೆಸ್‌ನ ಭದ್ರಕೋಟೆ ಎಂಬ ಹೆಸರಿಗೆ ಪಾತ್ರವಾಗಿತ್ತು. ಆದರೆ, 2004 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ  ಜಿಲ್ಲೆಯಲ್ಲಿದ್ದ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳಲ್ಲಿ ಮೊಟ್ಟ ಮೊದಲ ಬಾರಿಗೆ ಬಿಜೆಪಿ ಗೆಲವು ಸಾಧಿಸಿತು.
ಇನ್ನುಳಿದ ಮೂರು ಕ್ಷೇತ್ರಗಳಲ್ಲಿ ಎರಡು ಕ್ಷೇತ್ರಗಳಲ್ಲಿ ಜೆಡಿಎಸ್, ಇನ್ನುಳಿದ ಒಂದು ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಜಯಗಳಿಸಿತ್ತು. ಈ ಫಲಿತಾಂಶ ಕಾಂಗ್ರೆಸ್‌ನ ಭದ್ರಕೋಟೆ ಛಿದ್ರವಾಯಿತು.
ಅದೇ ವರ್ಷದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿ.ಎಲ್. ಶಂಕರ್ ಅವರು ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದ ಸಂದರ್ಭದಲ್ಲಿ ಚುನಾವಣಾ ಪ್ರಚಾರಕ್ಕಾಗಿ ಸೋನಿಯಾಗಾಂಧಿ ಅವರು ಚಿಕ್ಕಮಗಳೂರಿಗೆ ಆಗಮಿಸಿದ್ದರು.
2008ರ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಐದು ಕ್ಷೇತ್ರಗಳು ಮಾತ್ರ ಉಳಿದುಕೊಂಡಿದ್ದು, ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಿತ್ತು. ಒಂದು ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಜಯಗಳಿಸಿತ್ತು. ಸದ್ಯ ಚಿಕ್ಕಮಗಳೂರು ಜಿಲ್ಲೆಯ ಬಿಜೆಪಿಯ ಭದ್ರಕೋಟೆ. ಇಂತಹ ರಾಜಕೀಯದ ಸಂದಿಗ್ಧ ಪರಿಸ್ಥಿತಿಯಲ್ಲಿ ಸೋನಿಯಾಗಾಂಧಿ ಚಿಕ್ಕಮಗಳೂರು ಕಾಲಿಡುತ್ತಿದ್ದಾರೆ.
ಸೋನಿಯಾ ಗಾಂಧಿ ಅವರ ಆಗಮನ ಮತದಾರರ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರಬಹುದೆಂಬ ಪ್ರಶ್ನೆಗೆ ಮೇ 8 ಫಲಿತಾಂಶದಲ್ಲಿ ಉತ್ತರ ಸಿಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement