ಪ್ರಜ್ಞಾವಂತಿಕೆ ಇಲ್ಲದಿದ್ದರೆ ಪ್ರಜಾರಾಜ್ಯ ಅಸಾಧ್ಯ
ಕ.ಪ್ರ.ವಾರ್ತೆ, ಸಾಗರ, ಏ.25
ಮತ ಚಲಾಯಿಸುವಾಗ ಎಲ್ಲಿಯವರೆಗೆ ನಾವು ಪ್ರಜ್ಞಾವಂತಿಕೆ ಮೆರೆಯುವುದಿಲ್ಲವೋ ಅಲ್ಲಿಯವರೆಗೆ ಉತ್ತಮ ಪ್ರಜಾರಾಜ್ಯ ನಿರ್ಮಾಣವಾಗುವುದಿಲ್ಲ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಹೇಳಿದರು.
ಇಲ್ಲಿನ ಸಹೃದಯ ಬಳಗ ಹಾಗೂ ತಾಲೂಕು ಇತಿಹಾಸ ವೇದಿಕೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪತ್ರಕರ್ತ ಜಿ. ನಾಗೇಶ್ ಬರೆದಿರುವ ಡಾ.ಎಚ್. ಗಣಪತಿಯಪ್ಪ ಅವರ ಕುರಿತ ಹೋರಾಟದ ಹೆಜ್ಜೆಗಳು ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
ತಪ್ಪನ್ನು ಪ್ರಶ್ನಿಸಿ: ಮತ ಚಲಾಯಿಸುವಾಗ ಮೈಯೆಲ್ಲಾ ಕಣ್ಣಾಗಿರಬೇಕು. ಅರ್ಹರನ್ನು ಆಯ್ಕೆ ಮಾಡಿ ಕಳಿಸಿದಾಗ ಮಾತ್ರ ನಮ್ಮ ಮತಕ್ಕೆ ಬೆಲೆ ಬರುತ್ತದೆ. ಮತ ನೀಡುವ ನಾವು ರಾಜಕಾರಣಿಗಳ ಬಾಲ ಹಿಡಿದುಕೊಂಡು ಹೋಗುತ್ತಿದ್ದೇವೆ. ಮತ ನೀಡಿದವರಿಗೆ ಬಹುಪರಾಕ್ ಹೇಳುವುದನ್ನು ಬಿಟ್ಟು, ತಪ್ಪು ಮಾಡಿದಾಗ ಅವರನ್ನು ಹಿಡಿದು ಪ್ರಶ್ನಿಸುವ ಕೆಲಸ ನಮ್ಮಿಂದ ಆಗಬೇಕು ಎಂದರು.
ಮತ ನೀಡುವ ಪ್ರತಿಯೊಬ್ಬ ಪ್ರಜೆಗೂ ಐದು ಎಕರೆ ಖುಷ್ಕಿ ಜಮೀನು ಸಿಗುವಂತಹ ಕಾನೂನು ಜಾರಿಗೆ ಬರಬೇಕು ಎಂದ ಅವರು, ಹೋರಾಟದ ಮೂಲಕ ಭೂಸುಧಾರಣಾ ಕಾಯ್ದೆ ಜಾರಿಗೆ ಬಂತು. ಆದರೆ ಭೂಮಿತಿ ಶಾಸನ ಜಾರಿಗೆ ಬಾರದೆ ಇಸಿಝಡ್ನಂತಹ ಸಂಸ್ಥೆಗಳು, ಶ್ರೀಮಂತರು ನೂರಾರು ಎಕರೆ ಜಮೀನು ಹೊಂದಲು ಸಾಧ್ಯವಾಯಿತು. ಭೂಮಿತಿ ಶಾಸನ ಜಾರಿಗೆ ಬರಲು ಕಾಗೋಡು ಸತ್ಯಾಗ್ರಹ ಮಾದರಿಯಲ್ಲಿಯೆ ಇನ್ನೊಂದು ಹೋರಾಟ ನಡೆಯಬೇಕು ಎಂದು ಅಭಿಪ್ರಾಯಪಟ್ಟರು.
ವಂಚಕರ ಸಂಖ್ಯೆ ಹೆಚ್ಚಳ: ಪುಸ್ತಕ ಕುರಿತು ಸಾಹಿತಿ ಡಾ. ನಾ.ಡಿಸೋಜ ಮಾತನಾಡಿ, ಸಮಾಜವನ್ನು ಉದ್ಧಾರ ಮಾಡುತ್ತೇವೆ ಎಂದು ಸೋಗು ಹಾಕಿಕೊಂಡು ಜನರನ್ನು ವಂಚಿಸುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ ಎಂದು ಅವರು ಹೇಳಿದರು.