ಬಸ್ಸು, ಬೈಕ್ ಡಿಕ್ಕಿ: ಇಬ್ಬರ ಸಾವು
ಕಡೂರು: ಬಸ್ಸು ಹಾಗು ಬೈಕಿನ ನಡುವೆ ನಡೆದ ರಸ್ತೆ ಅಫಘಾತವೊಂದರಲ್ಲಿ ಬೈಕಿನಲ್ಲಿ ಊರಿಗೆ ತೆರಳುತ್ತಿದ್ದ ಇಬ್ಬರು ರೈತರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಕಡೂರು ತಾಲೂಕು ಮತಿಘಟ್ಟದಲ್ಲಿ ನಡೆದಿದೆ.
ಕಡೂರು ತಾಲೂಕು ಕುಪ್ಪಾಳಿನ ಕರೇನಹಳ್ಳಿಯ ಕೃಷಿಕ ರವಿಕುಮಾರ್ ಮತ್ತು ನೀಲಂಕಠಪ್ಪ ಮೃತರು. ಗುರುವಾರ ರಾತ್ರಿ ಮತಿಘಟ್ಟದಿಂದ ಕರೇನಹಳ್ಳಿಗೆ ಬೈಕಿನಲ್ಲಿ ತೆರಳುತ್ತಿದ್ದ ನೀಲಕಂಠಪ್ಪ ಹಾಗೂ ರವಿಕುಮಾರ್ ಮತಿಘಟ್ಟದಲ್ಲಿ ಬೆಂಗಳೂರು ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಗೆ ಚುನಾವಣಾ ಹಿನ್ನೆಲೆಯಲ್ಲಿ ಚೆಕ್ ಪೋಸ್ಟ್ ಮಾಡಿರುವುದರಿಂದ ರಸ್ತೆಗೆ ಹಾಕಲಾಗಿರುವ ಬ್ಯಾರಿಕೇಡ್ ಬಳಿ ಬೈಕಿನಲ್ಲಿ ಬಂದಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸು ನಿಯಂತ್ರಣ ತಪ್ಪಿ ಬ್ಯಾರಿಕೇಡ್ ಹಾಗು ಬೈಕಿಗೆ ಅಪ್ಪಳಿಸಿದ ಪರಿಣಾಮ ಬೈಕಿನಲ್ಲಿದ್ದ ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಪೋಲೀಸ್ ಅಧಿಕಾರಿಗಳು ಹಾಗು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮುಂದಿನ ಕ್ರಮ ಕೈಗೊಂಡಿದ್ದು ಪ್ರಕರಣ ದಾಖಲಾದೆ.
ಮರಳು ಗಣಿಗಾರಿಕೆ: ಲಾರಿ ವಶ
ಕೊಪ್ಪ: ತಾಲೂಕಿನ ಭಂಡಿಗಡಿಯ ಕೆಸವಿನಮನೆ ಗ್ರಾಮದ ಎಡಕುತ್ತು ಬಳಿ ತುಂಗಾ ನದಿ ದಂಡೆಯ ಬಳಿಯಲ್ಲಿ ಅಕ್ರಮ ಮರಳು ತುಂಬುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಹರಿಹರಪುರ ಪೊಲೀಸರು ಬುಧವಾರ ದಾಳಿ ನಡೆಸಿ ಲಾರಿ, ಹಿಟಾಚಿ ವಶಪಡಿಸಿಕೊಂಡು ಚಾಲಕರನ್ನು ಬಂಧಿಸಿದ್ದಾರೆ. ದಾಳಿ ನಡೆಸಿದ ಸಂದರ್ಭದಲ್ಲಿ ಹಿಟಾಚಿಯಿಂದ ಮರಳು ತುಂಬುತ್ತಿರುವುದು ಕಂಡು ಬಂದಿದ್ದು, ಪರವಾನಿಗೆ ಇಲ್ಲದ ಕಾರಣ ಒಂದು ಟಿಪ್ಪರ್ ಲಾರಿ, ಹಾಗೂ ಹಿಟಾಚಿ ಯಂತ್ರವನ್ನು ವಶಪಡಿಸಿಕೊಂಡು ಚಾಲಕ ಬಳಿಗಾ ಮತ್ತು ಧರ್ಮ ಎಂಬುವರನ್ನು ಬಂದಿಸಲಾಗಿದೆ ಎಂದು ಹರಿಪರಪುರ ಪಿಎಸ್ ಐ ಚಂದ್ರಶೇಖರ್ ತಿಳಿಸಿದ್ದಾರೆ.
ಅಕ್ರಮ ಮದ್ಯ: ಬಂಧನ
ಚಿಕ್ಕಮಗಳೂರು: ಅಕ್ರಮವಾಗಿ ದ್ವಿ ಚಕ್ರ ವಾಹನದಲ್ಲಿ ಮದ್ಯವನ್ನು ಸಾಗಾಣಿಕೆ ಮಾಡುತ್ತಿದ್ದ ಆರೋಪಿಯನ್ನು ಅಬಕಾರಿ ಅಧಿಕಾರಿಗಳು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಏ. 23 ರಂದು ನಗರದ ಬೈಪಾಸ್ ರಸ್ತೆಯ ನರಿಗುಡ್ಡನಹಳ್ಳಿಯ ಸರ್ಕಲ್ನಲ್ಲಿ ಇ.ಎನ್. ಲೋಕೇಶ್ ಎಂಬಾತ ಬೈಕ್ನಲ್ಲಿ ಅಕ್ರಮವಾಗಿ 37,792 ಮೌಲ್ಯದ ಮದ್ಯ ಸಾಗಾಣಿಕೆ ಮಾಡುತ್ತಿದ್ದಾಗ ಅವರನ್ನು ಬಂಧಿಸಿ ಮದ್ಯ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಅಬಕಾರಿ ಇಲಾಖೆ ಕಚೇರಿ ಪ್ರಕಟಣೆ ತಿಳಿಸಿದೆ.