ವೈಚಾರಿಕ ನೆಲೆಗಟ್ಟಲ್ಲಿ ಕಣಕ್ಕೆ; ಸತೀಶ್
ಕ.ಪ್ರ.ವಾರ್ತೆ ಟಿ ಚಿಕ್ಕಮಗಳೂರು ಟಿ ಏ.25
ಯಾವುದೇ ವ್ಯಕ್ತಿ ಹಾಗೂ ವಿಚಾರದ ಪರವಾಗಿ ಬಿಜೆಪಿ ಚುನಾವಣೆ ಎದುರಿಸುತ್ತಿಲ್ಲ. ವೈಚಾರಿಕ ಹಿನ್ನೆಲೆ ನೆಲೆಗಟ್ಟಿನಲ್ಲಿ ಚುನಾವಣೆ ಎದುರಿಸುತ್ತಿದ್ದೇವೆ ಎಂದು ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಸತೀಶ್ ಹೇಳಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಚುನಾವಣಾ ನಿರ್ವಹಣಾ ಸಮಿತಿ ಜಿಲ್ಲಾ ಪ್ರಮುಖರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಳೆದ 5 ವರ್ಷದ ಬಿಜೆಪಿ ಅಧಿಕಾರವಧಿಯಲ್ಲಿ ಮೂವರು ಮುಖ್ಯಮಂತ್ರಿಗಳು ರಾಜ್ಯದ ಅಭಿವೃದ್ಧಿ ಪರ ಶ್ರಮಿಸಿ ಉತ್ತಮ ಸಾಧನೆ ಮಾಡಿದ್ದಾರೆ ಎಂದರು. ರಾಜ್ಯದಲ್ಲಿ ಆರಂಭದಲ್ಲಿ ಕಾಂಗ್ರೆಸ್ ಪರವಾದ ವಾತಾವರಣ ಇದೆ ಎಂದು ಸೃಷ್ಟಿ ಮಾಡಲಾಗಿತ್ತು. ಈಗ ಕಾಂಗ್ರೆಸ್ ಗೊಂದಲದ ಗೂಡಾಗಿದೆ. ಬಿಜೆಪಿಯಲ್ಲಿ ಗೊಂದಲವೂ ಇಲ್ಲ, ಬಂಡಾಯವೂ ಇಲ್ಲ ಎಂದರು.
ನಗರ ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲಿ ಮಾಡಿರುವ ಅಭಿವೃದ್ಧಿ ಬಿಜೆಪಿಗೆ ಮತ್ತೆ ಅಧಿಕಾರ ತಂದು ಕೊಡಲಿದೆ. ಊರಿನ ಅಭಿವೃದ್ಧಿ ಮತ್ತು ವೈಯುಕ್ತಿಕ ಸೌಲಭ್ಯ ನೀಡಿರುವ ಬಗ್ಗೆ ಪ್ರತಿ ಮತದಾರರಿಗೂ ಮನವರಿಕೆ ಮಾಡಬೇಕಿದೆ. ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಹಗರಣಗಳ ಸರಮಾಲೆಗಳಿದ್ದು ಅದನ್ನು ಬಿಚ್ಚಿಡುವ ಕೆಲಸ ಬಿಜೆಪಿ ಕಾರ್ಯಕರ್ತರು ಮಾಡಬೇಕಿದೆ ಎಂದರು.
ಮನಮುಟ್ಟುವ ಕೆಲಸ: ಜಿಲ್ಲಾಧ್ಯಕ್ಷ ಎಂ.ಕೆ. ಪ್ರಾಣೇಶ್ ಮತಾನಾಡಿ, ಈ ಚುನಾವಣೆಯಲ್ಲಿ ಹಲವು ಪ್ರಮುಖ ಅಂಶಗಳನ್ನು ಮುಂದಿಟ್ಟುಕೊಂಡು ಮತದಾರರ ಬಳಿ ಹೊರಟಿದ್ದೇವೆ. ಜೊತೆಗೆ ಸಮಿತಿ ಕಾರ್ಯ ಆರಂಭವಾಗಿದ್ದು ಮತದಾರರ ಮನ ಮುಟ್ಟುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.
ನಮ್ಮ ಸಮೀಕ್ಷೆ ಪ್ರಕಾರ ಮಲೆನಾಡು ಭಾಗದ ಚಿಕ್ಕಮಗಳೂರು, ಮೂಡಿಗೆರೆ, ಶೃಂಗೇರಿಗಳಲ್ಲಿ 2ನೇ ಸ್ಥಾನಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಪೈಪೋಟಿ ನಡೆಸುತ್ತಿದ್ದು, ಬಿಜೆಪಿಗೆ ಅಗ್ರಸ್ಥಾನ ಖಚಿತವಾಗಿದೆ. ಬಯಲು ಭಾಗದ ಕಡೂರು, ತರಿಕೆರೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟುದ್ದು, ಅಲ್ಲೂ ಬಿಜೆಪಿ ಗೆಲ್ಲುವ ವಿಶ್ವಾಸವಿದೆ. ಒಟ್ಟಾರೆ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಹಿಂದಿನ ಬಾರಿಯ ಫಲಿತಾಂಶ ಮರುಕಳಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಬೋಜೇಗೌಡ, ಪ್ರೇಂಕುಮಾರ್, ವರಸಿದ್ದಿ ವೇಣುಗೋಪಾಲ್, ಸೀತಾರಾಂಭರಣ್ಯ, ಕೆಂಜಿಗೆ ಕೇಶವ, ರತನ್, ಪರಕ್ಷೀತ್ ಹಾಜರಿದ್ದರು.