ಕಲ್ಲೇಶ್ವರ ಜಾತ್ರಾ ಮಹೋತ್ಸವ
ಕ.ಪ್ರ.ವಾರ್ತೆ ಟಿ ಶಿರಾಳಕೊಪ್ಪ ಟಿ ಏ.26
ಐತಿಹಾಸಿಕ ಸ್ಥಳ ಶಿವನಪಾದ ಕಲ್ಲೇಶ್ವರ ಜಾತ್ರಾ ಮಹೋತ್ಸವ ಹಾಗೂ ಶಿವಾನಂದ ಸ್ವಾಮಿಗಳ ಪುಣ್ಯದಿನವನ್ನು ಶಿವನಪಾದದಲ್ಲಿ ಆಚರಿಸಲಾಯಿತು.
ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಹಲವಾರು ಕಾರ್ಯಕ್ರಮಗಳು ರದ್ದಾದರೂ ನಡೆದ ಜಾತ್ರಾ ಮಹೋತ್ಸವದಲ್ಲಿ ಎಂದಿನಂತೆ ಸಾವಿರಾರು ಭಕ್ತಾದಿಗಳು ಭಾಗವಹಿಸಿ ಸ್ವಾಮಿಯ ದರ್ಶನ ಪಡೆದರು.
ಸಿರಿಗೆರೆ ಮಠದ ಶಾಖಾಮಠವಾಗಿರುವ ಶಿವನಪಾದ ಜಾತ್ರೆ ಮತ್ತು ಪುಣ್ಯ ದಿನ ಕಾರ್ಯಕ್ರಮ ಕಳೆದ 43 ವರ್ಷಗಳಿಂದ ನಡೆಯುತ್ತಿದ್ದು, ಪ್ರತಿವರ್ಷ ಅನ್ನಸಂತರ್ಪಣೆ ಹಾಗೂ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಆದರೆ ಈ ವರ್ಷ ಚುನಾವಣೆ ನೀತಿ ಸಂಹಿತೆ ಕಾರಣದಿಂದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಅಲ್ಲದಂತಾಗಿದೆ ಎಂದು ಶಿವನಪಾದ ಕ್ಷೇತ್ರದ ಅಧ್ಯಕ್ಷ ಪರಮೇಶ್ವರಪ್ಪ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಶಾಸಕ ಮಹಲಿಂಗಪ್ಪ ಜಿಪಂ ಸದಸ್ಯರಾದ ಮಲ್ಲೇನಹಳ್ಳಿ ಈಶ್ವರಪ್ಪ, ರುದ್ರಪ್ಪ ದಾನೇರ್, ಬಂಗಾರನಾಯ್ಕ್, ಅಗಡಿ ಅಶೋಕ ಹಾಗೂ ಇತರ ಹಲವಾರು ಪ್ರಮುಖರು ಭಾಗವಹಿಸಿ ಸ್ವಾಮಿಯ ದರ್ಶನ ಪಡೆದರು.