ಕಾ..ಕಾ...ಸದ್ದಿಲ್ಲದೆ ನಿಶ್ಯಬ್ದ
ಅನಂತ ನಾಡಿಗ್
ಕ.ಪ್ರ. ವಾರ್ತೆ ತರೀಕೆರೆ ಏ.25
ಕಾಗೆ ಒಂದಗಳ ಕಂಡರೆ ಕರೆಯದೆ ತನ್ನ ಬಳಗವ ಎನ್ನುವ ಈ ಮಾತನ್ನು ಯಾರು ತಾನೆ ಕೇಳಿಲ್ಲ,
ಎಲ್ಲರಿಗೂ ಹಂಚಿ ತಿನ್ನು ಎನ್ನುವ ಸಹಕಾರದ ಸದಾಶಯವನ್ನು ಸಾರುವ ಮತ್ತು ಒಗ್ಗಟ್ಟಿನ ಸಂಕೇತವೆನಿಸಿದ ಪಕ್ಷಿ ಕಾಗೆ, ಆಹಾರದ ಒಂದೇ ಒಂದು ಅಗುಳು ಕಂಡರೂ ತನ್ನ ಇಡೀ ಪರಿವಾರಕ್ಕೆ ಹಂಚಬೇಕು ಎಂದು ಎಲ್ಲರನ್ನೂ ಕಾ.ಕಾ. ಎಂದು ಕೂಗಿ ಕರೆಯುತ್ತದೆ. ಇದು ಆ ಪಕ್ಷಿಯ ಪ್ರಕೃತಿ ಸಹಜವಾದ ಗುಣ ವಿಶೇಷ..
ನಾವು ಮನುಷ್ಯರು ಎಷ್ಟು ಸ್ವಾರ್ಥಿಗಳು ಕಂಡದ್ದೆಲ್ಲಾ ನಮಗೇ ಇರಲಿ ಎಂದು ಹಂಬಲಿಸುತ್ತೇವೆ. ಸಮಾಜಕ್ಕೋಸ್ಕರ ಬದುಕುವ ಕಾಗೆಗಿರುವ ವೈಶಾಲ್ಯತೆ ನಮಗಿಲ್ಲದಂತಾಗಿದೆ ಎಂದು
ಮಾನವನ ಸ್ವಾರ್ಥದ ಬಗ್ಗೆ ಅನೇಕರು ವಿವಿಧ ರೀತಿಯಲ್ಲಿ ವ್ಯಾಖ್ಯಾನ ಮಾಡಿದ್ದಾರೆ.
ಆದರೂ ಮನುಷ್ಯನ ಜೊತೆ ಜೊತೆಗೇ ಅವಿನಾಭಾವ ಸಂಬಂದ ಹೊಂದಿ ಶತ ಶತ ಮಾನಗಳಿಂದ ಬದುಕು ಸಾಗಿಸುತ್ತಾ ಬಂದಿದ್ದ ಇಂತಹ ನಿಸ್ವಾರ್ಥ ಪರೋಪಜೀವಿ ಕಾಗೆ ಪಕ್ಷಿ ಸಂಕುಲಕ್ಕೆ ಇದೀಗ ಬಹು ದೊಡ್ಡ ಆಘಾತ ಉಂಟಾಗುತ್ತಿದೆ.
ಅದೆಂದರೆ ವಾತಾವರಣದಲ್ಲಿ ಗುಬ್ಬಚ್ಚಿಗಳ ಸಂಖ್ಯೆ ಕ್ಷೀಣಿಸುತ್ತಿರುವಂತೆ ಇದೀಗ ಕಾಗೆಯ ಸರದಿ ಪ್ರಾರಂಭವಾದಂತಿದೆ. ಮೂಡಣ ದಿಕ್ಕಿನಲ್ಲಿ ಬೆಳಕು ಹರಿಯುವ ಮುನ್ನವೇ ಕಾ...ಕಾ. ಎಂದು ಕೂಗುತ್ತಾ ದೈನಂದಿನ ಬದುಕು ನೆನಪಿಸುವ ಕಾಗೆಗಳೇ ಈಗ ವಿರಳವಾಗುತ್ತಿದೆ. ಗುಂಪುಕಟ್ಟಿಕೊಂಡು ಆಕಾಶದಲ್ಲಿ ಹಾರಾಡುತ್ತಿದ್ದ ಕಾಗೆಗಳು ಇದೀಗ ವಿರಳವಾಗಿದೆ.
ಪ್ರಮುಖ ಸ್ಥಾನವಿದೆ: ವೇದ ಶಾಸ್ತ್ರ ಪುರಾಣಗಳ ಕಾಲದಿಂದಲೂ ಶಾಸ್ತ್ರದಲ್ಲಿ ಕಾಗೆಗೆ ಪೂರ್ವಿಕರು ಪ್ರಮುಖವಾದ ಸ್ಥಾನ ನೀಡಿದ್ದಾರೆ. ಮನೆ ಮುಂದೆ ಕಾಗೆ ಒಂದೇ ಸಮನೆ ಕೂಗಿದರೆ
ಮನೆಗೆ ನೆಂಟರು ತಪ್ಪದೇ ಬರುತ್ತಾರೆ ಎಂಬುದು ಒಂದು ಪೂರ್ವ ನಂಬಿಕೆ.
ತೀವ್ರ ಉಷ್ಣಾಂಶ- ವಾತಾವರಣದ ಏರುಪೇರು ಗುಬ್ಬಚ್ಚಿ ಕಾಗೆಯಂತಹ ಸೂಕ್ಷ್ಮ ಜೀವಿಗಳಿಗೆ ಮಾರಕವಾಗಿದೆ.ತರೀಕೆರೆಯಂತಹ ಮಲೆನಾಡು ಪ್ರದೇಶಗಳಲ್ಲಿಯೇ ಬಿಸಿಲಿನ ಉಷ್ಣಾಂಶ 42 ಸೆಲ್ಲಿಯಸ್‌ನಷ್ಟು ಇದೆ, ಹೀಗಾಗಿ ಹೆಚ್ಚಿನ ಉಷ್ಣಾಂಶ ತಾಳಲಾರದೆ, ಗುಬ್ಬಚ್ಚಿ ಕಾಗೆಗಳು ತಂಪಾದ ಸ್ಥಳಗಳನ್ನು ಹುಡುಕಿಕೊಂಡು ವಲಸೆ ಹೋಗುತ್ತಿರಬಹುದು. ಜಾಗತೀಕರಣ ಮತ್ತು ಅಧುನಿಕತೆಯ ಸೋಗಿನಲ್ಲಿ ಬದಲಾಗುತ್ತಿರುವ ಜಗತ್ತಿನಲ್ಲಿ ಮೊಬೈಲ್, ಫೋನ್ ಇತ್ಯಾದಿ ಯಂತ್ರಗಳಿಂದ ಉಂಟಾಗುವ ತರಂಗಾಂತರಗಳ ಹೊಡೆತವನ್ನು ಗಾಳಿಯಲ್ಲಿ ಹಾರಾಡುವ ಈ ಅತಿಸೂಕ್ಷ್ಮ ಜೀವಾಣುಗಳು ಹೇಗೆ ತಾನೆ ತಡೆದುಕೊಂಡಾವು.
ಪ್ರತಿಕ್ಷಣ, ಪ್ರತಿನಿತ್ಯ ಕಾರ್ಖಾನೆ, ವಾಹನ ಇತ್ಯಾದಿಗಳಿಂದ ಉಂಟಾಗುವ ಅತಿಯಾದ ಶಬ್ದ ಮಾಲಿನ್ಯ ಕೂಡ ಈ ಪಕ್ಷಿಗಳು ಸಹಿಸುವುದಿಲ್ಲವಂತೆ.
ಆಹಾರದ ಕೊರತೆ- ಗುಬ್ಬಚ್ಚಿ ಮತ್ತು ಕಾಗೆಗಳಿಗೆ ದಿನನಿತ್ಯದ ಆಹಾರದ ಕೊರೆತೆಯೂ ಅವುಗಳ ಸಂತತಿ ಕಡಿಮೆಯಾಗಲು ಒಂದು ಪ್ರಮುಖ ಕಾರಣವೆನಿಸದೆ ಇರದು. ಕೈಗಾರೀಕರಣದಿಂದಾಗಿ
ಯಾವ ಕಾಳು ಕಡ್ಡಿಗಳು ಇಂದು ತ್ಯಾಜ್ಯ ವಸ್ತುಗಳು ಇಲ್ಲವೇ ಇಲ್ಲ. ಪಕ್ಷಿಗಳು ಆಯ್ದು ತಿನ್ನುತ್ತಿದ್ದ ಕಾಳುಗಳು, ಮುಸುರೆ ಪದಾರ್ಥಗಳು ಎಲ್ಲವೂ ಈಗ ನೇರವಾಗಿ ಕೊಳಚೆ ನೀರು ಹರಿಯುವ ಚರಂಡಿ ಪಾಲಾಗುತ್ತಿದೆ. ಇನ್ನು ಕಾಡು ಬಾಳೆ ಮಾವು ಪೇರಲೆ-ನೇರಲೆ ಇತ್ಯಾದಿ ಸಣ್ಣಪುಟ್ಟ ಹಣ್ಣುಗಳ ಮರಗಳು ಇಂದು ವ್ಯಾಪಾರೀಕರಣವಾಗಿದೆ. ಕೆರೆ ಕಟ್ಟೆಗಳೆಲ್ಲಾ ನೀರಿಲ್ಲದೆ ಒಣಗಿ ಹೋಗಿದೆ.
ಪರಿಸ್ಥಿತಿ ಹೀಗೆ ಮುಂದುವರಿದರೆ, ಗುಬ್ಬಚ್ಚಿ ಮತ್ತು ಕಾಗೆಗಳ ಚಿತ್ರವನ್ನು ಬರೆದು ಇಂದಿನ ಮಕ್ಕಳಿಗೆ ತೋರಿಸುವ ಕಾಲ ಕೂಡ ಬಹು ದೂರ ಇಲ್ಲವೇನೋ ಎಂದು ಅನಿಸುತ್ತದೆ. ಆದರೆ ಇದನ್ನು
ಹಾಗಾಗಲು ಬಿಡಬಾರದು. ಇಂತಹ ಜೀವಿಗಳನ್ನು ಕಾಪಾಡಿ ಉಳಿಸಿಕೊಳ್ಳುವಂತಹ ಪ್ರಯತ್ನವಾಗಬೇಕು ಎಂಬುದು ಪಕ್ಷಿ ಪ್ರೇಮಿಗಳ ಅಂಬೋಣ. ತರೀಕೆರೆಯ ವಸತಿ
ಪ್ರದೇಶದಲ್ಲಿ ಎಲ್ಲೆಂದರಲ್ಲಿ ಕಾಣಸಿಗುತ್ತಿದ್ದ ಕಾಗೆಗಳು ಇಂದು ಶಾಸ್ತ್ರಕ್ಕಾದರೂ ಒಂದು ಕಾಗೆಯೂ ಕಾಣದಂತಾಗಿರುವುದು ವಿಸ್ಮಯವೇ ಸರಿ.