ಕೆಜೆಪಿ, ಕಾಂಗ್ರೆಸ್ನ ಬಿ ಟೀಮ್: ಶೆಟ್ಟರ್ ಟೀಕೆ
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಏ.26
ಕೆಜೆಪಿ, ಕಾಂಗ್ರೆಸ್ನ ಬಿ ಟೀಮ್ ಎಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ.
ಶಕ್ತಿಶಾಲಿಯುತ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಎ ಟೀಮ್, ಕೆಜೆಪಿ ಬಿ ಟೀಮ್ ಆಗಿ ಆಟವಾಡುತ್ತಿವೆ ಎಂದು ಚುನಾವಣಾ ಪ್ರಚಾರಕ್ಕಾಗಿ ಚಿಕ್ಕಮಗಳೂರಿಗೆ ಶುಕ್ರವಾರ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಕೆಜೆಪಿ ಹೊಂದಾಣಿಕೆ ಮಾಡಿಕೊಂಡಿವೆ ಎಂದು ಟೀಕಿಸಿದರು.
ನಮ್ಮ ಪಕ್ಷದ ಬಗ್ಗೆ ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ. ಅದು, ಅವರು ಗೆಲ್ಲಲು ಅಲ್ಲ. ಯಾರೇ ವ್ಯಕ್ತಿ ಬಿಜೆಪಿಗೆ ಬಂದರು, ಹೋದರೂ ನಮ್ಮ ಶಕ್ತಿ ಕಡಿಮೆಯಾಗೋದಿಲ್ಲ. ನಮ್ಮದು ಸಿದ್ಧಾಂತದ ಮೇಲೆ ಕಟ್ಟಿದ ಪಕ್ಷ. ಈ ಕಾರಣದಿಂದಲೇ ಈ ಮಟ್ಟದಲ್ಲಿ ದೊಡ್ಡದಾಗಿ ಬೆಳೆದಿದೆ ಎಂದು ಹೇಳಿದರು.
ಸ್ಪಷ್ಟ ಬಹುಮತ: ಹೈದ್ರಾಬಾದ್ ಕರ್ನಾಟಕ ಸೇರಿದಂತೆ ರಾಜ್ಯದ ಸುಮಾರು 50 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿದ್ದೇನೆ. ಎಲ್ಲಾ ಕಡೆಯಲ್ಲೂ ದೊಡ್ಡ ಮಟ್ಟದ ಜನ ಬೆಂಬಲ ವ್ಯಕ್ತವಾಗುತ್ತಿದೆ. ದುರ್ಬಲವಾಗಿದ್ದ ಕ್ಷೇತ್ರದಲ್ಲೂ ಕೂಡ ಜನರು ಬೆಂಬಲ ಸೂಚಿಸುತ್ತಿದ್ದಾರೆ, ಆದುದರಿಂದ ಸ್ಪಷ್ಟವಾದ ಬಹುಮತದೊಂದಿಗೆ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ನಾನೇ ಮುಂದಿನ ಸಿಎಂ. ಈ ತೀರ್ಮಾನ ಈಗಾಗಲೇ ಪಕ್ಷದಲ್ಲಿ ತೆಗೆದುಕೊಳ್ಳಲಾಗಿದೆ ಎಂದರು.
ಸುಳ್ಳು ವದಂತಿ: ಡಿ.ವಿ. ಸದಾನಂದಗೌಡರು ಸಿಎಂ ಆಗಿದ್ದಾಗ ಚೀಟಿ ವ್ಯವಹಾರ ನಡೆಸುತ್ತಿದ್ದರು ಎಂದು ಕೆಜೆಪಿ ಮುಖಂಡ ವಿಜಯ ಸಂಕೇಶ್ವರ್ ಆರೋಪ ಮಾಡಿರುವುದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಯವರು, ಕೆಜೆಪಿ ಜನರಲ್ಲಿ ಸುಳ್ಳು ವದಂತಿ ಹಬ್ಬಿಸುತ್ತಿದೆ. ಇದು, ಸೋಲಿನ ಭೀತಿ ಮತ್ತು ಜನ ಬೆಂಬಲ ಕಡಿಮೆ ಮಾಡುವ ಕುತಂತ್ರ ಮತ್ತು ಪಿತೂರಿಯ ರಾಜಕಾರಣವಾಗಿದೆ. ಧನಂಜಯ ಕುಮಾರ್ ಅವರು ಬಿಜೆಪಿಯ ರಾಷ್ಟ್ರೀಯ ನಾಯಕರಾದ ಆಡ್ವಾಣಿಯ ಬಗ್ಗೆ ಗಂಭೀರವಾಗಿ ಆರೋಪ ಮಾಡಿದ್ದರು. ಈ ಬಗ್ಗೆ ಯಡಿಯೂರಪ್ಪರವರು ಕ್ಷಮೆಯಾಚಿಸಿದರು.
ಈ ಕುರಿತು ಆಡ್ವಾಣಿಗೆ ಪತ್ರ ಬರೆಯುವುದಾಗಿ ಹೇಳಿದ್ದರು. ಈ ಅಪಾದನೆ ನಿರಾಧಾರವಾದುದು, ಸುಳ್ಳು ಹೇಳುವುದು, ಚಾರಿತ್ರ್ಯವಧೆ ಮಾಡುವುದು ಕೆಜೆಪಿಯವರ ಚಾಳಿ. ಸದಾ ಸುದ್ದಿಯಲ್ಲಿರಲು ಈ ರೀತಿಯ ಅಪಪ್ರಚಾರ ಮಾಡುತ್ತಿರುತ್ತಾರೆ. ಇದಕ್ಕೆಲ್ಲಾ ಯಾವುದೇ ಅರ್ಥ ಇರುವುದಿಲ್ಲ. ರಾಜಕಾರಣದಲ್ಲಿ ಇದು ಸರಿಯಲ್ಲ ಎಂದು ಕಿವಿ ಮಾತು ಹೇಳಿದರು.
ಪ್ರತಿ ಪಕ್ಷದವರು ಏನೇ ಟೀಕೆ, ಆರೋಪ ಮಾಡಿದರೂ ಬಿಜೆಪಿಯ ಜನಪ್ರಿಯತೆ ಕಡಿಮೆ ಮಾಡಲು ಸಾಧ್ಯವಿಲ್ಲ. ಬಿಜೆಪಿ 125 ರಿಂದ 135 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.