ಚಂದ್ರಪ್ಪ ಗೆಲವಿಗೆ ಪ್ರಾಮಾಣಿಕವಾಗಿ ಶ್ರಮಿಸಿ: ಮೋಟಮ್ಮ
ಮೂಡಿಗೆರೆ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಎಲ್ಲಾ ಸಾಧ್ಯತೆಗಳು ಇರುವುದರಿಂದ ಪಕ್ಷದ ಅಭ್ಯರ್ಥಿ ಬಿ.ಎನ್. ಚಂದ್ರಪ್ಪರನ್ನು ಮುಕ್ತ ಮನಸ್ಸಿನಿಂದ ಗೆಲ್ಲಿಸುವ ಪ್ರಾಮಾಣಿಕತೆ ತೋರಬೇಕು ಎಂದು ಮೋಟಮ್ಮ ಮನವಿ ಮಾಡಿದರು.
ಅವರು ಶುಕ್ರವಾರ ಮೂಡಿಗೆರೆ ಪಟ್ಟಣದ ವಿದ್ಯಾನಗರದಲ್ಲಿ ಚುನಾವಣಾ ಸಂಬಂಧ ಪಕ್ಷದ ಎಸ್ಸಿ, ಎಸ್ಟಿ ವಿಭಾಗದ ಸಭೆಯಲ್ಲಿ ಮಾತನಾಡುತ್ತಿದ್ದರು. ದಲಿತರಿಗೆ ಕಾಂಗ್ರೆಸ್ ಪಕ್ಷವು ಸಾಮಾಜಿಕ ನ್ಯಾಯವನ್ನು ಕಲ್ಪಿಸಿಕೊಟ್ಟಿದೆ. ಕೇಂದ್ರದಲ್ಲಿ ಎಸ್ಸಿ, ಎಸ್ಟಿ ವಿಧೇಯಕ ಮಂಡಿಸಿ ಮೀಸಲಾತಿ ಸೌಕರ್ಯವನ್ನು ದೊರಕಿಸಲು ಪ್ರಯತ್ನಿಸಿದ್ದು ಕಾಂಗ್ರೆಸ್ ಸಾಧನೆಯಾಗಿದೆ ಎಂದರು. ದೇವರಾಜು ಅರಸರ ಕಾಲದಿಂದ ಎಸ್.ಎಂ. ಕೃಷ್ಣ ಆಡಳಿತದವರೆಗೆ ಅಭಿವೃದ್ಧಿ ಕಾರ್ಯಗಳು ನಾಡಿನ ಅವಶ್ಯಕತೆಗೆ ತಕ್ಕಂತೆ ನಡೆದಿದೆ ಎಂದು ಹೇಳಿದರು. ಚಂದ್ರಪ್ಪ ಅರ್ಹ ಮತ್ತು ಯೋಗ್ಯತೆಯುಳ್ಳ ಉತ್ತಮ ಅಭ್ಯರ್ಥಿಯಾಗಿದ್ದಾರೆ. ಕ್ಷೇತ್ರದ ಜನರೊಂದಿಗೆ ಸಾಕಷ್ಟು ವರ್ಷಗಳಿಂದ ಬೆರೆತು ಸಮಾಜಸೇವೆಯಲ್ಲಿ ಮುನ್ನಡೆಯುತ್ತಿದ್ದಾರೆ ಎಂದರು. ಸಭೆಯಲ್ಲಿ ಎಸ್ಸಿ,ಎಸ್ಟಿ ವಿಭಾಗದ ಅಧ್ಯಕ್ಷ ಸಬ್ಲಿ ದೇವರಾಜ್, ರಾಜಮ್ಮ, ಜಯರಾಂ, ಗಂಗಯ್ಯ, ದೇಜಪ್ಪ, ರಮೇಶ್ ಮತ್ತಿತರರಿದ್ದರು