ಜಿಲ್ಲೆಯಲ್ಲಿ ಜೆಡಿಎಸ್ ಅಲೆ: ಬೋಜೇಗೌಡ
ಚಿಕ್ಕಮಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರ ಆಡಳಿತದಲ್ಲಿದ್ದಾಗ ರಾಜ್ಯದಲ್ಲಿ ಮಾಡಿರುವ ಜನಪರ ಕೆಲಸ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಮನದಲ್ಲಿಟ್ಟುಕೊಂಡು ಯುವ ಸಮೂಹ ಪಕ್ಷ ಸೇರುತ್ತಿರುವುದರಿಂದ ಜಿಲ್ಲೆಯಲ್ಲಿ ಜೆಡಿಎಸ್ ಅಲೆ ನಿರ್ಮಾಣವಾಗಿದೆ ಎಂದು ಪಕ್ಷದ ಜಿಲ್ಲಾ ಕಾರ್ಯಾಧ್ಯಕ್ಷ ಎಸ್.ಎಲ್. ಬೋಜೇಗೌಡ ಹೇಳಿದ್ದಾರೆ. ನಗರದ ಜೆಡಿಎಸ್ ಚುನಾವಣಾ ಕಚೇರಿಯಲ್ಲಿ ವಿವಿಧ ಕಾರ್ಯಕರ್ತರನ್ನು ಪಕ್ಷಕ್ಕೆ ಸ್ವಾಗತಿಸಿ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬರಲು ಅತ್ಯಂತ ಕೀಳು ಮಟ್ಟದ ರಾಜಕೀಯಕ್ಕೆ ಇಳಿದಿದೆ ಎಂಬುದಕ್ಕೆ ನಿನ್ನೆ ನಡೆದ ಅಂಚೆ ಮತದಾನವೆ ಪ್ರತ್ಯಕ್ಷ ಸಾಕ್ಷಿಯಾಗಿದೆ. ಕೆಲವು ಬಿಜೆಪಿ ಕಾರ್ಯಕರ್ತರು ಹಣ ಕೊಟ್ಟು ಮತ ಕೊಂಡುಕೊಳ್ಳಲು ಹೋದಾಗ ಅಧಿಕಾರಿ ಮತ್ತು ನೌಕರರು ತಿರಸ್ಕರಿಸಿ ಪ್ರಜಾಪ್ರಭುತ್ವ ಎತ್ತಿ ಹಿಡಿದಿದ್ದಾರೆ ಎಂದು ತಿಳಿಸಿದರು.
ಕ್ಷೇತ್ರದಲ್ಲಿ ಸಚಿವ ಸಿ.ಟಿ. ರವಿಯವರು ಮಾಡಿರುವ ಭ್ರಷ್ಟಾಚಾರಕ್ಕೆ ಜನ ಪಾಠ ಕಲಿಸಲಿದ್ದಾರೆ. ಬೇಲಿಯೇ ಎದ್ದು ಹೊಲ ಮೇಯ್ದಂತೆ ಜನಪ್ರತಿನಿಧಿಗಳೆ ಅಭಿವೃದ್ಧಿ ಹೆಸರಿನಲ್ಲಿ ಹಣ ಕೊಳ್ಳೆ ಹೊಡೆಯುತ್ತಿದ್ದಾರೆ ಎಂದರು. ಮುಖಂಡರಾದ ಸಿ.ಎನ್. ಅಕ್ಮಲ್, ಜಮೀಲ್ ಅಹಮದ್, ಅಪ್ಸರ್ ಪಾಷಾ, ಅಬ್ದುಲ್, ಹಾಜರಿದ್ದರು.