ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಖಚಿತ
ಕ.ಪ್ರ.ವಾರ್ತೆ, ತರೀಕೆರೆ, ಏ.26 ರಾಜ್ಯದಲ್ಲಿ ಮತ್ತೆ ಬಿಜಿಪಿ ಸರ್ಕಾರ ರಚನೆಯಾಗುವುದು ಖಚಿತ ಎಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.
ಅವರು, ಶುಕ್ರವಾರ ತಾಲೂಕು ಬಿಜೆಪಿಯಿಂದ ಪಟ್ಟಣದ ಬಯಲು ರಂಗಮಂದಿರದಲ್ಲಿ ವಿಧಾನಸಭಾ ಕ್ಷೇತ್ರದ ಪಕ್ಷದ ಅಭ್ಯರ್ಥಿ ಟಿ.ಜೆ. ಅವಿನಾಶ್ ಪರ ಏರ್ಪಡಿಸಲಾಗಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಉತ್ತಮ ಬೆಂಬಲ: ರಾಜ್ಯಾದ್ಯಂತ ತಾವು ಪ್ರವಾಸ ಮಾಡಿದ್ದು, ಪಕ್ಷದ ಪರವಾಗಿ ಎಲ್ಲಾ ಕಡೆ ಉತ್ತಮ ವಾತಾವರಣ ಇದೆ, ಬಿಜೆಪಿ ಸರ್ಕಾರ ಮತ್ತೆ ರಚನೆಯಾಗುತ್ತದೆ, ರಾಜ್ಯದಲ್ಲಿ 10,000 ಕೋಟಿಯಲ್ಲಿ 23 ನೀರಾವರಿ ಯೋಜನೆ ನಿರ್ವಹಿಸಲಾಗಿದೆ. ರು. 25 ಸಾವಿರಗಳ ರೈತರ ಸಾಲ ಮನ್ನಾ ಮಾಡಲಾಗಿದೆ, ಕೃಷಿ ಸಾಲ ವಿತರಿಸಲಾಗಿದೆ ಎಂದರು.
ಹಾಲು ಉತ್ಪಾದನೆ ಹೆಚ್ಚಿಸಲಾಗಿದ್ದು, ಹೆಣ್ಣುಮಕ್ಕಳಿಗೆ ಭಾಗ್ಯಲಕ್ಷ್ಮಿ ಬಾಂಡ್ಗೆ ರು. 25,000 ಡಿಪಾಸಿಟ್ ನೀಡಿ ರು. 16,50,000 ಬಾಂಡ್ ವಿತರಿಸಲಾಗಿದೆ, ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 50 ಕಿ.ಮಿ ರಸ್ತೆ
ನಿರ್ಮಿಸಲಾಗಿದೆ. ರಾಜ್ಯದಲ್ಲಿ ಹೊಸ ತಾಲೂಕುಗಳನ್ನು ರಚಿಸಲಾಗಿದೆ. ಬಿಜೆಪಿ ಉತ್ತಮ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ ಎಂದು ತಿಳಿಸಿದ ಅವರು ವಿದ್ಯಾರ್ಥಿಗಳಿಗೆ ಲ್ಯಾಪ್ಟ್ಯಾಪ ಇತ್ಯಾದಿ ಹಲವಾರು ಯೋಜನಗಳನ್ನು ತಿಳಿಸಲಾಗಿದೆ ಎಂದು ಅವರು ತಿಳಿಸಿದರು..
ಸ್ವಚ್ಛ ಸರ್ಕಾರ: ರು. 1 ಲಕ್ಷ17 ಸಾವಿರ ಕೋಟಿ ಆಯವ್ಯಯ ಮಂಡಿಸಿದ್ದೇವೆ. ಈಗಾಗಲೇ ಪಕ್ಷ ಮುಂದಿನ ಮುಖ್ಯಮಂತ್ರಿಯನ್ನಾಗಿ ತಮ್ಮನ್ನೇ ಪ್ರಕಟಿಸಿದೆ, ಕಪ್ಪು ಚುಕ್ಕೆ ಇಲ್ಲದ ಸ್ವಚ್ಛ ಸರ್ಕಾರವನ್ನು ಕೊಡುತ್ತೇವೆ. ಮುಂದಿನ ಸಿ.ಎಂ. ಯಾರು ಎಂದು ಕಾಂಗ್ರೆಸ್ ಪಕ್ಷ ಪ್ರಕಟಿಸಿಲ್ಲ, ಬಿಜಿಪಿಗೆ ಸ್ಪಷ್ಟ ಬಹುಮತ ಖಂಡಿತ ಬರುತ್ತದೆ ಎಂದು ತಿಳಿಸಿದ ಅವರು ಪಕ್ಷದ ಅಭ್ಯರ್ಥಿ ಅವಿನಾಶ್ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದು, ಅತಿ ಹೆಚ್ಚಿನ ಮತ ನೀಡಿ ಅವಿನಾಶ್ ಅವರನ್ನು ಗೆಲ್ಲಿಸಿಕೊಡಬೇಕು ಎಂದು ಮನವಿ ಮಾಡಿದರು.
ಬಿಜಿಪಿ ಅಭ್ಯರ್ಥಿ ಟಿ.ಜೆ. ಅವಿನಾಶ್ ಮಾತನಾಡಿ, ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಬಿಜೆಪಿ ಸರ್ಕಾರ ತಾಲೂಕಿನಲ್ಲಿ ರು. 460 ಕೋಟಿಗಳ ಅಭಿವೃದ್ಧಿ ಕಾರ್ಯ ನಿರ್ವಹಿಸಿದೆ. ಪಟ್ಟಣದ ಅಭಿವೃದ್ಧಿಗೆ ರು. 8 ಕೋಟಿ ನೀಡಿದೆ ಎಂದು ಅವರು ತಿಳಿಸಿದರು.
ಬಿಜೆಪಿ ಮುಖಂಡ ಎನ್.ಮಂಜುನಾಥ್ ಮಾತನಾಡಿದರು. ಆರ್. ದೇವಾನಂದ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಡಾ. ವಿಶ್ವನಾಥ್, ದುಗ್ಲಾಪುರ ಮಂಜುನಾಥ್, ಟಿ.ಜಿ. ಸದಾನಂದ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪ್ರೇಂಕುಮಾರ್, ವಿನಾಯಕ್, ಅಜಯ್ ಕುಮಾರ್, ಮೋಹನ್, ರವಿಶಂಕರ್ ಪಕ್ಷದ ಕಾರ್ಯಕರ್ತರು ಸಮಾರಂಭದಲ್ಲಿ ಉಪಸ್ಥಿತರಿದ್ದರು.