ಸರಿ ತೋರದ ಹಿರಿಯರು: ವಿಷಾದ
ಕ.ಪ್ರ.ವಾರ್ತೆ ಟಿ ಸೊರಬ ಟಿ ಏ.26
ದೇಶ ಕಟ್ಟುವ ಕಟ್ಟಾಳುಗಳಾದ ಯುವಕರನ್ನು ಸಮಾಜದ ಹಿರಿಯರು ಸರಿಯಾದ ಮಾರ್ಗ ತೋರಿಸಿ ಮುನ್ನಡೆಸುತ್ತಿಲ್ಲ, ಈ ಸ್ಥಿತಿ ಮುಂದುವರೆದರೆ ದೇಶಕ್ಕೆ ಭವಿಷ್ಯವಿಲ್ಲ ಎಂದು ಕುವೆಂಪು ವಿವಿ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ಸಣ್ಣರಾಮಪ್ಪ ವಿಷಾದ ವ್ಯಕ್ತಪಡಿಸಿದರು.
ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜು ಏರ್ಪಡಿಸಿದ್ದ ಕ್ರೀಡಾ, ಸಾಂಸ್ಕೃತಿಕ, ಎನ್ಎಸ್ಎಸ್ ಚಟುವಟಿಕೆ ಮೊದಲಾದವುಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ನಿಷ್ಕ್ರೀಯತೆ ಕಾರಣ: ದೇಶದಲ್ಲಿ ಚಿಂತಕರ ಚಿಂತನೆಗಳು, ವಿದ್ವಾಂಸರ ಮಾತುಗಳು ಹಾಗೂ ಸಾಹಿತಿಗಳ ವಿಚಾರಧಾರೆ ನಿಷ್ಪ್ರಯೋಜಕವಾಗಿದೆ. ಇತಿಹಾಸದ 1950 ರಿಂದ 1990ರವರೆಗಿನ ಕಾಲಘಟ್ಟವನ್ನು ಸಮಾಜಮುಖಿ ಕಾಲ ಎನ್ನಲಾಗುತ್ತದೆ, ಈ ಅವಧಿಯಲ್ಲಿ ವಿವಿಧ ರೈತಪರ, ಹಿಂದುಳಿದವರ ಪರ ಚಳುವಳಿಗಳು ಸಾಮಾನ್ಯವಾಗಿದ್ದವು. ಆದರೆ, ನಂತರದಲ್ಲಿ ಇಂತಹ ಚಳುವಳಿಗಳು ಮುಂದುವರೆಯದೆ ಇರುವುದು ನಮ್ಮಲ್ಲಿನ ನಿಷ್ಕ್ರೀಯತೆ ಕಾರಣ ಎಂದರು.
ಎಲ್ಲಿಯವರೆಗೆ ನಾವು ಭ್ರಷ್ಟ, ಸ್ವಹಿತಾಸಕ್ತ ರಾಜಕಾರಣಿಗಳನ್ನು ಆರಿಸುತ್ತೇವೆಯೋ ಅಲ್ಲಿಯವರೆಗೆ ದೇಶ ಉನ್ನತಿಯಾಗುವುದಿಲ್ಲ ಎಂದರು.
ಕನ್ನಡ ಸಂಘ ಹಾಗೂ ಸಾಂಸ್ಕೃತಿಕ ವೇದಿಕೆಯ ಸಂಚಾಲಕ ಕೆ.ಹೆಚ್. ಬಸವರಾಜಪ್ಪ ಪ್ರಾಸ್ತಾವಿಕ ಮಾತನಾಡಿದರು. ಪ್ರಾಂಶುಪಾಲ ಕೃಷ್ಣಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರುಗಳಾದ ಗಂಗಾಧರ್, ಸುಬ್ರಮಣಿ, ಶ್ಯಾಂಸುಂದರ್. ರವೀಂದ್ರಭಟ್, ರಾಜಶೇಖರ್, ಅಣ್ಣಪ್ಪ, ಸಂತೋಷ್, ನಿಲೇಶ್, ಸೀಮಾ, ಅಹ್ಮದ್ ಆಲಿ, ಸೌಮ್ಯ, ಗೀತಾ, ಅಶ್ವತ್ ನಾರಾಯಣ್, ವಿಘ್ನೇಶ್, ಶಶಿಕಲಾ, ಸಹಾಯಕ ಕಾರ್ಯಪಾಲಕ ಅಭಿಯಂತರ ತಿಮ್ಮಣ್ಣ ಮೊದಲಾದವರು ಇದ್ದರು.