ಸಾಮಾಜಿಕ ನ್ಯಾಯ ನೀಡುವ ಬಿಜೆಪಿ
ಕ.ಪ್ರ.ವಾರ್ತೆ, ಕಡೂರು, ಏ.26 ಸದ್ಯದ ರಾಜಕೀಯದ ಗೊಂದಲದ ಸ್ಥಿತಿಯಲ್ಲಿ ಜನರಿಗೆ ಸರಿಯಾದ ವ್ಯಕ್ತಿ ಯಾರು ಎಂಬ ಜಿಜ್ಞಾಸೆ ಕಾಡುತ್ತಿದ್ದು, ಆ ಮೂಲಕ ಆಯ್ಕೆ ಕುರಿತು ಜನರಲ್ಲಿ ಜಾಗೃತಿಯ ಅವಶ್ಯಕತೆ ಇದೆ ಎಂದು ಬಿಜೆಪಿ ಮುಖಂಡ ಮುಖ್ಯಮಂತ್ರಿ ಚಂದ್ರು ಹೇಳಿದರು.
ಕಡೂರು ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಬೀರೂರು ದೇವರಾಜುರವರ ಪರವಾಗಿ ಚುನಾವಣಾ ಪ್ರಚಾರ ಭಾಷಣ ಮಾಡಿದ ಅವರು, ಎಲ್ಲ ಕ್ಷೇತ್ರಗಳಲ್ಲಿಯೂ ರಾಜಕಿಯ ಬೆರೆತು ಹೋಗಿ ನಿಜಸ್ಥಿತಿ ತಿಳಿಯದ ವ್ಯವಸ್ಥೆಗೆ ನಾವು ಬಂದು ತಲುಪಿದ್ದೇವೆ. ರಾಜಕೀಯ, ಧಾರ್ಮಿಕ, ಶೈಕ್ಷಣಿಕ ಮುಂತಾದ ಕ್ಷೇತ್ರಗಳಲ್ಲೂ ರಾಜಕೀಯ ಬೆರೆತು ಸಮಾಜದ ವ್ಯವಸ್ಥೆ ಕಲುಷಿತವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಎಲ್ಲೆಡೆಯೂ ರಾಜಕೀಯ: ಊರು ಊರು, ಕೇರಿ ಕೇರಿಗಳಲ್ಲಿ ರಾಜಕೀಯ ಬೆರೆತು ಹೋಗಿದೆ. ಇಂತಹ ಸಂದಿಗ್ಧತೆಯಲ್ಲಿ ಇರುವ ಮತದಾರರ ಆಯ್ಕೆಯ ತಪ್ಪಿನಿಂದ ಸಮ್ಮಿಶ್ರ ಸರ್ಕಾರಗಳಿಂದ ಆಗಿರುವ ಅನಾಹುತಗಳನ್ನು ಮನಗಂಡು ಉತ್ತಮ ಆಯ್ಕೆ ಮಾಡಬೇಕಾಗಿದೆ.
ಈ ರಾಜ್ಯದ ಉತ್ತಮ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್ ಅವರ ನೇತೃತ್ವದಲ್ಲಿ ಉತ್ತಮ ಅಭಿವೃದ್ಧಿ ಕಾರ್ಯ ಕಂಡಿದೆ ಎಂದರು.
ಬಿಜೆಪಿ ಸಾಮಾಜಿಕ ನ್ಯಾಯ ನೀಡುತ್ತಿರುವ ಏಕೈಕ ಪಕ್ಷವಾಗಿದೆ. ಜೆಡಿಎಸ್‌ನ ದೇವೇಗೌಡರು ಸಿದ್ದರಾಮಯ್ಯನವರನ್ನು ಹೀಗಳೆದರೆ ಸಿದ್ದರಾಮಯ್ಯನವರು ದೇವೇಗೌಡರನ್ನು ಟೀಕಿಸುತ್ತಾರೆ. ಇತ್ತ ನನಗೆ, ನನ್ನ ಕುಟುಂಬಕ್ಕೆ ಅನ್ಯಾಯವಾಗಿದೆ ಎಂದು ಬೊಬ್ಬೆಯಿಡುತ್ತಿರುವ ಕೆಜೆಪಿ ನಾಯಕ ಯಡಿಯೂರಪ್ಪನವರನ್ನು ನೋಡಿ ರಾಜ್ಯದ ಜನತೆಗೆ ಬೇಸರವಾಗಿದೆ ಎಂದರು.
ಮುಂದಿನ ಮುಖ್ಯಮಂತ್ರಿಯಾಗಿ ಬಿಂಬಿತರಾಗಿರುವ ಜಗದೀಶ್ ಶೆಟ್ಟರ್ ಅವರ ಕೈ ಬಲಪಡಿಸಿ ಉತ್ತಮ ಸರ್ಕಾರ ರಚನೆಯಾಗಲು ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬೀರೂರು ದೇವರಾಜು ಅರವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.