ಕಾಂಗ್ರೆಸ್ ಕ್ಯಾಪ್ಟನ್ ಇಲ್ಲದ ಪಕ್ಷ: ಅಶೋಕ
ಕ.ಪ್ರ.ವಾರ್ತೆ . ನರಸಿಂಹರಾಜಪುರ , ಏ.27
ಬಿಜೆಪಿ ಪಕ್ಷದಿಂದ ಮುಂದಿನ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಎಂದು ಘೋಷಣೆ ಮಾಡಿದ್ದೇವೆ. ಕಾಂಗ್ರೆಸ್ನವರೇ ನಿಮ್ಮ ಮುಂದಿನ ಮುಖ್ಯಮಂತ್ರಿ ಯಾರು ಎಂದು ರಾಜ್ಯದ ಉಪಮುಖ್ಯಮಂತ್ರಿ ಆರ್. ಅಶೋಕ ಪ್ರಶ್ನಿಸಿದರು.
ಶನಿವಾರ ವಾಟರ್ ಟ್ಯಾಂಕ್ ಸಮೀಪದ ರಂಗಮಂದಿರದಲ್ಲಿ ನಡೆದ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ಕ್ಯಾಪ್ಟನ್ ಇಲ್ಲದ ಪಕ್ಷವಾಗಿದೆ. ಕೇಂದ್ರದ 35 ಸಚಿವರು ಅವ್ಯವಹಾರದಲ್ಲಿ ಮುಳುಗಿದ್ದಾರೆ. ಪ್ರಧಾನಮಂತ್ರಿ ಮನಮೋಹನ್ ಸಿಂಗ್ ದುರ್ಬಲ ಪ್ರಧಾನಿಯಾಗಿದ್ದು, ಅವರು ರೀಮೋಟ್ ಕಂಟ್ರೋಲ್ ಪ್ರಧಾನಿ ಎಂದು ಕುಟುಕಿದರು.
ಶೃಂಗೇರಿ ಕ್ಷೇತ್ರದಲ್ಲಿ ಕಳೆದ 10 ವರ್ಷದಿಂದಲೂ ಜನರ ಜೊತೆಯಲ್ಲಿದ್ದು, ಕ್ಷೇತ್ರವನ್ನು ಅಭಿವೃದ್ಧಿಪಡಿಸಿದ ಡಿ.ಎನ್. ಜೀವರಾಜ್ ಅವರಿಗೆ ಮತ ನೀಡಿ ಎಂದು ಮನವಿ ಮಾಡಿದರು.
ಲೇವಡಿ: ನನ್ನ ವಿರುದ್ಧ ಸ್ಪರ್ಧೆ ಮಾಡಿದ ಅಭ್ಯರ್ಥಿಗಳಿಗೆ ಕ್ಷೇತ್ರದ ಪರಿಚಯವೇ ಇಲ್ಲ. ಊರು, ಬೂತ್ ಹಾಗೂ ಕ್ಷೇತ್ರ ಗೊತ್ತಿರದ ಅಭ್ಯರ್ಥಿಗಳು ಎಂದು ಶೃಂಗೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಸಚಿವ ಡಿ.ಎನ್. ಜೀವರಾಜ್ ಲೇವಡಿ ಮಾಡಿದರು.
ಬಿದರಗೋಡು, ಹರಿಹರಪುರದಿಂದ ಹಿಡಿದು ಕೊಪ್ಪ, ನ.ರಾ. ಪುರ, ಮುತ್ತಿನಕೊಪ್ಪ, ಬಾಳೆಹೊನ್ನೂರು, ಶೃಂಗೇರಿ, ನೆಮ್ಮಾರಿನವರೆಗೂ ಯಾವುದೇ ರಸ್ತೆಯಲ್ಲಿ ಹೊಂಡ ಇದೆಯೆ ಎಂದು ನೋಡಲು ಕಾಂಗ್ರೆಸ್ನವರು ಸುತ್ತಾಡಿ ಬರಲಿ ಎಂದು ಸವಾಲು ಹಾಕಿದರು.
ಕಾಂಗ್ರೆಸ್ನಿಂದ ಏಕೆ ಸಾಧ್ಯವಾಗಿಲ್ಲ: ನನ್ನ 8 ವರ್ಷದ ಅವಧಿಯಲ್ಲಿ ನ.ರಾ.ಪುರ ವಿದ್ಯುತ್ ವಿತರಣಾ ಕೇಂದ್ರ, ಸರ್ಕಾರಿ ಆಸ್ಪತ್ರೆ 100 ಹಾಸಿಗೆಯ ಮೇಲ್ದರ್ಜೆಗೆ, ಸಂತೆ ಮಾರ್ಕೆಟ್, ಪಟ್ಟಣದ ರಸ್ತೆ ಅಭಿವೃದ್ಧಿ, ಎಸ್.ಸಿ. ಕಾಲೋನಿಗಳಿಗೆ ಕಾಂಕ್ರಿಟ್ ರಸ್ತೆ ಮಾಡಿಸಿದ್ದೇನೆ. ರಾಜ್ಯವನ್ನು 47 ವರ್ಷಗಳ ಕಾಲ ಆಳ್ವಿಕೆ ಮಾಡಿದ ಕಾಂಗ್ರೆಸ್ಗೆ ಎಸ್.ಸಿ. ಕಾಲೋನಿಗಳಿಗೆ ಕಾಂಕ್ರೀಟಿಕರಣ ಮಾಡಲು ಏಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದರು.
ನೀವು ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾಗಿದ್ದಾಗ ಶೃಂಗೇರಿ ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಏನು ಎಂದು ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡರನ್ನು ಪ್ರಶ್ನಿಸಿದ ಅವರು, ನನ್ನ ಮೇಲೆ ಕಾಂಗ್ರೆಸ್ನವರು ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಯಾವುದೇ ಜಾತಿಯವರನ್ನು ನಿಂದಿಸಿಲ್ಲ. ಆದರೆ, ನನ್ನ ತೇಜೋವಧೆಗಾಗಿ ನಾನು ಬ್ರಾಹ್ಮಣರ ಜಾತಿ ನಿಂದನೆ ಮಾಡಿದ್ದೇನೆ ಎಂದು ವ್ಯವಸ್ಥಿತವಾಗಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ನವರನ್ನು ತರಾಟೆಗೆ ತೆಗೆದುಕೊಂಡರು.
ಸಭೆಯ ಅಧ್ಯಕ್ಷತೆಯನ್ನು ತಾಲೂಕು ಬಿಜೆಪಿ ಅಧ್ಯಕ್ಷ ಕೆ.ಪಿ. ಸಂಪತ್ಕುಮಾರ್ ವಹಿಸಿದ್ದರು. ಸಭೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಪ್ರಾಣೇಶ್, ಬಿಜೆಪಿ ಮುಖಂಡರಾದ ಪಿ.ಜೆ. ಆಂಟೋನಿ, ನೀಲೇಶ್, ಎಚ್.ಎಂ. ಮನು, ಆಶೀಶ್ಕುಮಾರ್, ಜೆ.ಜಿ. ನಾಗರಾಜ್, ಗುಳದಮನೆ ಪ್ರಕಾಶ್, ಗೋಪಾಲ್, ಶಬೀರ್, ಗೀತ, ಸುಜಾತ, ಸುಮಿತ್ರ, ಶೆಟ್ಟಿಗದ್ದೆ ರಾಮಸ್ವಾಮಿ, ಕೆ.ಎಸ್. ಸುರೇಶ್, ಮಂಜುನಾಥ್ ಲಾಡ್, ವೈ.ಎಸ್. ಗಣೇಶ್, ಕೆ.ಟಿ. ಸತೀಶ್,ಪುಣ್ಯಪಾಲ್ ಮುಂತಾದವರಿದ್ದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ನಿಂದ ಬಿಜೆಪಿಗೆ ಸೇರಿದ ಕಾರ್ಯಕರ್ತರನ್ನು ಸ್ವಾಗತಿಸಲಾಯಿತು. ಸಭೆಗೂ ಮುನ್ನ ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ಸಚಿವ ಡಿ.ಎನ್. ಜೀವರಾಜ್, ಬಿಜೆಪಿ ಮುಖಂಡರು, ಕಾರ್ಯಕರ್ತರು ಸಭೆ ನಡೆಯುವ ಸ್ಥಳಕ್ಕೆ ಬಂದರು.