ಬಿಜೆಪಿ ಆಡಳಿತ ವಿರುದ್ಧ ಸೋನಿಯಾ ಆಕ್ರೋಶ
ಕ.ಪ್ರ.ವಾರ್ತೆ, ಚಿಕ್ಕಮಗಳೂರು ಟಿ ಏ.27
ರಾಜ್ಯ ಬಿಜೆಪಿ ಸರ್ಕಾರದ ಆಡಳಿತಕ್ಕೆ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿಯವರು ಬೇಸರ ವ್ಯಕ್ತಪಡಿಸಿದ್ದು, ಸುಭದ್ರ ಸರ್ಕಾರಕ್ಕಾಗಿ ಕಾಂಗ್ರೆಸ್‌ಗೆ ಮತ ನೀಡುವಂತೆ ಮನವಿ ಮಾಡಿದ್ದಾರೆ.
ಇಲ್ಲಿನ ಜಿಲ್ಲಾ ಆಟದ ಮೈದಾನದಲ್ಲಿ ಶನಿವಾರ ಮಧ್ಯಾಹ್ನ 14 ನಿಮಿಷಗಳ ಕಾಲ ಭಾಷಣ ಮಾಡಿದ ಸೋನಿಯಾ ಗಾಂಧಿ, 'ರಾಜ್ಯದ ಆರ್ಥಿಕ ಸ್ಥಿತಿಗತಿ ಬಗ್ಗೆ ಉಲ್ಲೇಖ ಮಾಡುವ ಜತೆಗೆ ಜನ ಸೇವೆ ಮತ್ತು ಹಕ್ಕುಗಳ ರಕ್ಷಣೆ ಮಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ' ಎಂದು ಹೇಳಿದರು.
ಭಾಷಣದ ಆರಂಭದಿಂದ ಚಿಕ್ಕಮಗಳೂರು ಜಿಲ್ಲೆ ತಮ್ಮ ಕುಟುಂಬಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿಕೊಂಡ ಸೋನಿಯಾ, ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ನೋಡಿದರೆ, ಜನರು ಬದಲಾವಣೆ ಬಯಸಿರುವುದು ಸ್ಪಷ್ಟವಾಗಿದೆ. ಈ ಬದಲಾವಣೆಯ ಅತ್ಯಂತ ಜರೂರಾಗಿ ಬಂದಿದೆ.
ಬಿಜೆಪಿ ದುರಾಡಳಿತದಿಂದ ನೀವು ಸಾಕಷ್ಟು ನೋವನ್ನು ಉಂಡಿದ್ದೀರಿ. ಅವರ ಭ್ರಷ್ಟಚಾರ ತಾರಕಕ್ಕೆ ಏರಿದೆ. ರಾಜ್ಯದಲ್ಲಿ ರೈತರು ಸಂಕಷ್ಟದಲ್ಲಿದ್ದಾರೆ. ಗಣಿ ಮಾಫಿಯಾ ಪರಿಸರವನ್ನು ಕೊಳ್ಳೆ ಹೊಡೆಯುತ್ತಿದೆ. ಕಾನೂನು ಸುವ್ಯವಸ್ಥೆ ಕುಸಿದು ಬಿದ್ದಿದೆ. ಮೂಲಭೂತವಾದಿಗಳು ಸ್ವಾರ್ಥ ಸಾಧನೆಗಾಗಿ ಜನರಲ್ಲಿ ದ್ವೇಷವನ್ನು ಬಿತ್ತುತ್ತಾ ಬಂದಿದ್ದಾರೆ ಎಂದು ಕುಟುಕಿದರು.
ಕಾಂಗ್ರೆಸ್ ಅಧಿಕಾರದಲ್ಲಿ ಚೆನ್ನಾಗಿತ್ತು: ಈ ಹಿಂದೆ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಈ ರಾಜ್ಯ ಮಾಹಿತಿ ತಂತ್ರಜ್ಞಾನ ಮುಖ್ಯ ಕೇಂದ್ರವಾಗಿತ್ತು. ಕೈಗಾರಿಕೋದ್ಯಮಿಗಳು ಬಂಡವಾಳ ಹೂಡಲು ರಾಜಧಾನಿ ಬೆಂಗಳೂರಿಗೆ ಬರುತ್ತಿದ್ದರು. ಆದರೆ, ಈಗ ಏನಾಗಿದೆ? ಪರಿಸ್ಥಿತಿ ತದ್ವಿರುದ್ಧವಾಗಿದೆ.
ಕರ್ನಾಟಕದಲ್ಲಿ ಬಂಡವಾಳ ಹೂಡಿದ್ದ ಕೈಗಾರಿಕೋದ್ಯಮಿಗಳು ಬೇರೆ ಕಡೆಗೆ ಹೋಗುತ್ತಿದ್ದಾರೆ. ಇದಕ್ಕೆ ಕಾರಣ, ಇಲ್ಲಿರುವ ಭ್ರಷ್ಟಚಾರ ಮತ್ತು ಮೂಲಭೂತ ಸೌಲಭ್ಯಗಳ ಕೊರತೆ. ಇಲ್ಲಿ ದುರಾಡಳಿತ ಇದೆ. ಇದು ನೋವಿನ ಸಂಕೇತ. ಜನರು ಸರ್ಕಾರವನ್ನು ಆಯ್ಕೆ ಮಾಡುವುದು ಸೇವೆ ಮತ್ತು ಹಕ್ಕುಗಳ ರಕ್ಷಣೆಗಾಗಿ.
ಆದರೆ, ಈ ಸರ್ಕಾರ ಮೋಸ ಮಾಡಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳ ಅಭಿವೃದ್ಧಿಗೆ, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರ ಹೆಸರಿನಲ್ಲಿ ಬಂದ ಹಣವನ್ನು ಅರ್ಹರಿಗೆ ತಲುಪಿಸುವ ಕೆಲಸ ಬಿಜೆಪಿ ಸರ್ಕಾರ ಮಾಡಿಲ್ಲ ಎಂದು ಅವರು ದೂಷಿಸಿದರು.
ಕೇಂದ್ರದಿಂದ ಮಹಿಳೆಯರಿಗೆ ಯೋಜನೆ: ಅಭಿವೃದ್ಧಿಗೆ ನಮ್ಮ ಮೊದಲು ಆದ್ಯತೆ. ಮಹಿಳೆಯರಿಗಾಗಿ ಹಲವು ಕಾರ್ಯಕ್ರಮವನ್ನು ಕೇಂದ್ರ ಸರ್ಕಾರ ಹಮ್ಮಿಕೊಂಡು ಅದನ್ನು ಅನುಷ್ಠಾನಗೊಳಿಸಲಾಗಿದೆ. ಸದ್ಯ ಕರ್ನಾಟಕ ರಾಜ್ಯದ ಪರಿಸ್ಥಿತಿ ನೋಡಿದರೆ, ರಾಜ್ಯ ಸೊರಗಿ ಹೋಗಿದೆ. ಕಳೆದು ಹೋದ ಘನತೆಯನ್ನು ಮತ್ತೆ ಮರುಸ್ಥಾಪನೆ ಮಾಡಲು ಮತ್ತು ಇಡೀ ದೇಶದಲ್ಲಿ ಹೆಮ್ಮೆಯ ರಾಜ್ಯವನ್ನಾಗಿ ಮಾಡುವ ಉದ್ದೇಶವನ್ನು ಕಾಂಗ್ರೆಸ್ ಹೊಂದಿದೆ ಎಂದರು.
ಈಡೇರಿಸುವ ಭರವಸೆಗಳು: ಚುನಾವಣಾ ಪ್ರಣಾಳಿಕೆಯಲ್ಲಿ ಹಲವು ಭರವಸೆಯನ್ನು ನೀಡಿದ್ದೇವೆ. ಅವುಗಳೆಲ್ಲವೂ ಈಡೇರಿಸುವ ಭರವಸೆಗಳು. ಈಡೇರಿಸಲು ಸಾಧ್ಯವಾಗದ ಭರವಸೆಯನ್ನು ನಾವು ನೀಡಿಲ್ಲ.
ಭೂ ಸುಧಾರಣೆಗೆ, ಪ್ರಗತಿಪರ ಬದಲಾವಣೆ, ಮಾಹಿತಿ ತಂತ್ರಜ್ಞಾನ ವಲಯಕ್ಕೆ ಮೂಲಭೂತ ಸೌಲಭ್ಯ ನೀಡಲು ಬುನಾದಿ ಹಾಕಿದೆ. ಇದು, ರಾಜ್ಯದ ಎಲ್ಲಾ ನಾಗರಿಕರಿಗೂ ತಲುಪಬೇಕು ಮತ್ತು ಹಿಂದಿನ ಗತವೈಭವ ಮರುಕಳಿಸಬೇಕು.
ರಾಜ್ಯದ ಜನತೆ ಉಜ್ವಲ ಭವಿಷ್ಯಕ್ಕಾಗಿ ಎದುರು ನೋಡುತ್ತಿದ್ದಾರೆ. ಇದು, ಈಡೇರಬೇಕಾದರೆ, ಸುಭದ್ರ ಸರ್ಕಾರದ ಅಗತ್ಯವಿದೆ. ರಾಜ್ಯದಲ್ಲಿ ಸುಭದ್ರ ಸರ್ಕಾರ ನೀಡಲು ನೀವು ಕಾಂಗ್ರೆಸ್‌ಗೆ ಮತಹಾಕಿ, ಬೇರೆಯವರಿಗೂ ಹೇಳಿ ಕಾಂಗ್ರೆಸ್ ಪಕ್ಷಕ್ಕೆ ಮತಹಾಕಲು ಎಂದು ಮನವಿ ಮಾಡಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಂಬಿಕಾ ಸೋನಿ, ಮಧುಸೂದನ್ ಮಿಸ್ತ್ರಿ, ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ವಿಧಾನಸಭೆಯ ಪ್ರತಿಪಕ್ಷದ ನಾಯಕ
ಸಿದ್ದರಾಮಯ್ಯ, ಸಂಸದ ಜಯಪ್ರಕಾಶ್ ಹೆಗಡೆ, ವಿಧಾನಪರಿಷತ್ ಸದಸ್ಯೆ ಮೋಟಮ್ಮ, ಕೇಂದ್ರದ ಮಾಜಿ ಸಚಿವೆ ಡಿ.ಕೆ. ತಾರಾದೇವಿ ಮತ್ತಿತರರು ಉಪಸ್ಥಿತರಿದ್ದರು.