ಬಿಜೆಪಿಗೆ ತಕ್ಕಪಾಠ ಕಲಿಸಿ; ಧರ್ಮೇಗೌಡ
ಕ.ಪ್ರ.ವಾರ್ತೆ , ಚಿಕ್ಕಮಗಳೂರು ,ಏ.27
ಜಾತಿ, ಧರ್ಮಗಳ ನಡುವೆ ದ್ವೇಷ ಹುಟ್ಟಿಸಿ ರಾಜಕೀಯ ಮಾಡುತ್ತಿರುವ ಬಿಜೆಪಿಗೆ ತಕ್ಕಪಾಠ ಕಲಿಸಲು ದಕ್ಷತೆ, ಪ್ರಾಮಾಣಿಕತೆ ಹೊಂದಿರುವ ಅಭ್ಯರ್ಥಿಗೆ ಮತ ನೀಡಿದರೆ ಸಾರ್ಥಕತೆ ಕಾಣಲು ಸಾಧ್ಯ ಎಂದು ಜೆಡಿಎಸ್ ಅಭ್ಯರ್ಥಿ ಎಸ್.ಎಲ್. ಧರ್ಮೇಗೌಡ ಹೇಳಿದ್ದಾರೆ.
ಜಾಗರ ಹೋಬಳಿ ವ್ಯಾಪ್ತಿಯಲ್ಲಿರುವ ಕಳವಾಸೆ, ಸಿದ್ದಾಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮತಯಾಚನೆ ಮಾಡಿ ಮಾತನಾಡಿದ ಅವರು, ಮಲೆನಾಡು ಭಾಗದ ರಸ್ತೆಗಳ ಅಭಿವೃದ್ಧಿ ಶೂನ್ಯವಾಗಿದ್ದು, ರವಿಯವರು ಕಾರ್ಮಿಕರ ಅನುಕೂಲಕ್ಕೆ ಯಾವುದೇ ಯೋಜನೆ ರೂಪಿಸಿಲ್ಲ ಎಂದು ದೂರಿದರು.
ಬಿಜೆಪಿಗೆ ಗಂಡಾಂತರ: ಪವಿತ್ರವಾದ ಮತವನ್ನು ಅಪವಿತ್ರ ಅಭ್ಯರ್ಥಿಗೆ ಹಾಕಬಾರದು. ಅವಕಾಶವಾದಿ ರಾಜಕಾರಣ ಮೂಲಕ ಸ್ವಜನ ಪಕ್ಷಪಾತ ಮಾಡಿ ಅಧಿಕಾರಕ್ಕೆ ಬಂದಾಗಿನಿಂದಲೂ ಭ್ರಷ್ಟಾಚಾರ, ಅತ್ಯಾಚಾರ, ಜೈಲುವಾಸ ಸೇರಿದಂತೆ ರಾಜ್ಯದ ಮಾನವನ್ನು ದೇಶದಲ್ಲಿ ಹರಾಜು ಹಾಕಿದ ಬಿಜೆಪಿ ಪಕ್ಷಕ್ಕೆ ಜನ ಬುದ್ಧಿ ಕಲಿಸಲಿದ್ದಾರೆ. ಹಾಗಾಗಿ ಬಿಜೆಪಿಗೆ ಮುಂದೆ ಗಂಡಾಂತರ ಕಾದಿದೆ ಎಂದು ಎಚ್ಚರಿಸಿದರು.
ಇರುವ ಅಧಿಕಾರವನ್ನು ಬಳಸಿಕೊಂಡು ಜನಸೇವೆ ಮಾಡಲು ಅವಕಾಶ ಕಲ್ಪಿಸಿ ಕೊಟ್ಟರೆ ಕಾಂಗ್ರೆಸ್ ಅಭ್ಯರ್ಥಿ ಶಾಂತೇಗೌಡರಿಗೆ ಅಧಿಕಾರದ ದುರಾಸೆ ಹೆಚ್ಚಾಗಿ ಎಲ್ಲವೂ ತಮಗೇ ಬೇಕು ಎನ್ನುವ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಪಕ್ಷದ ಮುಖಂಡ ಎಚ್.ಹೆಚ್. ದೇವರಾಜ್ ಮಾತನಾಡಿ, ಜಾಗರ ಸುತ್ತ ಮುತ್ತಲಿನ ಪ್ರದೇಶದಲ್ಲಿ ಕಳೆದ 10 ವರ್ಷಗಳಿಂದ ಅಭಿವೃದ್ಧಿ ಕುಂಠಿತವಾಗಿದೆ. ಅಭಿವೃದ್ಧಿ ಹೆಸರಿನಲ್ಲಿ ಲೂಟಿ ಮಾಡಿರುವ ರವಿಯವರು ಪುಸ್ತಕದಲ್ಲಿ ಸುಳ್ಳು ಮುದ್ರಣ ಮಾಡುವ ಮೂಲಕ ಜನರಿಗೆ ಮಂಕು ಬೂದಿ ಎರಚುತ್ತಿದ್ದಾರೆ ಎಂದರು.
ಜೆಡಿಎಸ್ ಅಧಿಕಾರಕ್ಕೆ ಬಂದು ಮೊದಲು ಮಾಡುವ ಕೆಲಸವೇ ವ್ಯಾಪಕ ಭ್ರಷ್ಟಾಚಾರದ ವಿರುದ್ಧ ತನಿಖೆ ನಡೆಸುವುದು ಎಂದು ಹೇಳಿದರು.
ಹೋಬಳಿ ಅಧ್ಯಕ್ಷ ಎಸ್.ಡಿ. ರಮೇಶ್, ಮುಖಂಡರಾದ ಹೊಲದಗದ್ದೆ ಗಿರೀಶ್, ಕೃಷ್ಣೇಗೌಡ, ರಾಜು, ಕೃಷ್ಣಪ್ಪ, ಮಂಜೇಗೌಡ, ಸಿದ್ದೀಕ್, ಚೇತನ್, ಕೃಷ್ಣಮೂರ್ತಿ ಹಾಜರಿದ್ದರು.