ಕುಚೋದ್ಯದ ಮಾತಿಗೆ ಮನ್ನಣೆಯಿಲ್ಲ: ಎಸ್‌ಎಂಕೆ
ಕಡೂರು: ನಾನು ಪ್ರಪಂಚದ ನೂರು ಕೆರೆಗಳ ನೀರು ಕುಡಿದಿದ್ದು, ನಾನು ಕಟ್ಟಿದ ಕಾಂಗ್ರೆಸ್ ಮನೆಯ ಮೇಲೆ ನನಗೆ ಪ್ರೀತಿಯಿರುವುದರಿಂದ ಬರುತ್ತೇನೆ ಹೊರತು ಯಾರದೋ ಕುಚೋದ್ಯದ ಮಾತಿಗೆ ನಾನು ಮನ್ನಣೆ ಕೊಡುವುದಿಲ್ಲ ಎಂದು ಮಾಜಿ ಕೇಂದ್ರ ಸಚಿವ ಎಸ್.ಎಂ. ಕೃಷ್ಣ ಗುಡುಗಿದರು.
ಅವರು ಬೀರೂರು ಪಟ್ಟಣದಲ್ಲಿ ಕಡೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ. ಮಲ್ಲಿಕಾರ್ಜುನ್ ಪರವಾಗಿ ಪ್ರಚಾರ ಭಾಷಣ ಮಾಡಿದ ಅವರು, ಕಾಂಗ್ರೆಸ್‌ನಲ್ಲಿಯೇ ಕೆಲವರು ನನ್ನ ಬಗ್ಗೆ ಕುಚೋದ್ಯದ ಮಾತುಗಳನ್ನಾಡುವ ಮೂಲಕ ಎಸ್.ಎಂ. ಕೃಷ್ಣ ಪ್ರಚಾರಕ್ಕೆ ಬರುವುದಿಲ್ಲ ಎಂಬ ರೀತಿಯ ಆಪಾದನೆ ಮಾಡುತ್ತಿದ್ದಾರೆ. ಆದರೆ, ಇಂತಹ ಕುಚೋದ್ಯಗಳಿಗೆ ನಾನು ಮನ್ನಣೆ ನೀಡುವುದಿಲ್ಲ. ಪ್ರಪಂಚದ ನೂರು ದೇಶಗಳ ಕೆರೆಗಳ ನೀರು ಕುಡಿದು ಬಂದಿರುವ ನಾನು ನನ್ನ ಮನೆಗೆ ಬರಲು ಯಾರದೇ ಆಣತಿ ಬೇಕಿಲ್ಲ ಎಂದರು.
ನನಗೆ ನೋವಾಗಿದೆ: ಪಕ್ಷ ಜೋಪಾನ ಮಾಡಬೇಕಾಗಿರುವ ನಾನು ಪ್ರಚಾರಕ್ಕೆ ಬರುವುದಿಲ್ಲ ಎಂಬ ಆರೋಪ ಮಾಡಿರುವುದರಿಂದ ನನಗೆ ನೋವಾಗಿದೆ. ಅದರಿಂದ ನಾನು ಬೇಸರವಾಗುವುದಿಲ್ಲ. ಕಾಂಗ್ರೆಸ್ ಪಕ್ಷ ನನಗೆ ಸಾಕಷ್ಟು ಕೊಟ್ಟಿದೆ ನಾನು ನಿರೀಕ್ಷೆ ಮಾಡದಿರುವಷ್ಟನ್ನು ಪಕ್ಷ ನೀಡಿದೆ. ನಾನು ಪಕ್ಷಕ್ಕೆ ನೀಡಬೇಕಾಗಿರುವುದು ಬಹಳಷ್ಟಿದೆ. ನಾನು ನಿರೀಕ್ಷಿಸದ್ದರೂ ನನ್ನನ್ನು ಮಹಾರಾಷ್ಟ್ರದ ರಾಜ್ಯಪಾಲರನ್ನಾಗಿ ನೇಮಕ ಮಾಡಿದಾಗ ಕನ್ನಡ ಮರಾಠಿ ಗೊಂದಲವಿದ್ದರೂ ಯಾವ ರೀತಿಯ ವಿರೋಧ ವ್ಯಕ್ತವಾಗಲಿಲ್ಲ. ನನಗೆ ಬೇಕಾದ ಪದವಿಗಳನ್ನು ಕಾಂಗ್ರೆಸ ನೀಡಿದೆ. ಅದಕ್ಕಿಂತ ಬೇರೆ ನಿರೀಕ್ಷಿಸುವುದು ಅಸಾಧ್ಯ ಎಂದರು.
ಸಮೀಕ್ಷಾ ವರದಿಗಳಲ್ಲಿ ಕಾಂಗ್ರೆಸ್ ಪಕ್ಷವು ಬಹುಮತ ಪಡೆದು ಸ್ವತಂತ್ರವಾಗಿ ಸರ್ಕಾರ ರಚಿಸಲಿದೆ ಎಂದು ಈಗಾಗಲೇ ಹೇಳಿರುವುದರಿಂದ ಉತ್ತಮ ಸರ್ಕಾರ ರಚನೆಯಾಗಲಿದೆ ಯಾವುದೇ ಸಂಶಯಬೇಡ. ಎಲ್ಲ ವರ್ಗದ ಮತದಾರರು ಪಕ್ಷವನ್ನು ಬೆಂಬಲಿಸಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಕಳುಹಿಸಬೇಕು ಎಂದು ಹೇಳಿದರು.