ಕೆಜೆಪಿ ಮತಯಾಚನೆ
ಕ.ಪ್ರ.ವಾರ್ತೆ,ಕಡೂರು, ಏ.28
ಕಡೂರು ವಿಧಾನಸಭಾ ಕ್ಷೇತ್ರದ ಹಿರೇನಲ್ಲೂರು ಜಿಪಂ ವ್ಯಾಪ್ತಿಯಲ್ಲಿ ಕೆಜೆಪಿ ಅಭ್ಯರ್ಥಿ ಬೆಳ್ಳಿ ಪ್ರಕಾಶ್ ಅವರ ಪರವಾಗಿ ಪಕ್ಷದ ಮುಖಂಡರು ಕಾರ್ಯಕರ್ತರು ಮನೆ ಮನೆಗೆ ತೆರಳಿ ಮತಯಾಚನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಹಿರೇನಲ್ಲೂರು ಹೋಬಳಿಯ ಕೆಜೆಪಿ ಮುಖಂಡ ಮೌನೇಶ್, ಅಂತರಘಟ್ಟೆ ಡಿ.ಕೆ. ಶಿವಕುಮಾರ್, ಚಂದ್ರಶೇಖರ್, ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಆಸಂದಿ, ಕಲ್ಕೆರೆ, ಅಂತರಘಟ್ಟೆ, ಹೂಲಿಹಳ್ಳಿ, ಹೊಸಳ್ಳಿ, ಚೋಮನಹಳ್ಳಿ ಮೊದಲಾದ ಗ್ರಾಮಗಳಲ್ಲಿ ನೂರಾರು ಬೆಂಬಲಿಗರು ಮತ್ತು ಮಹಿಳೆಯರೊಂದಿಗೆ ಮತಯಾಚಿಸಿದರು.
ಆಲದಮರದಂತೆ ಬೆಳವಣಿಗೆ: ಅಂತರಗಟ್ಟೆಯ ದುರ್ಗಾಂಬ ದೇವಾಲಯದ ಸಮೀಪದಿಂದ ಮೆರವಣಿಗೆ ಹೊರಟು ಗ್ರಾಮದ ಹಲವು ಬೀದಿಗಳಲ್ಲಿ ಮನೆ ಮನೆಗೆ ತೆರಳಿ ಮತಯಾಚಿಸಿ ಸಾಗಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮೌನೇಶ್, ಕೆಜೆಪಿ ನಾಯಕ ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ರಾಜ್ಯದ ಜನಸಾಮಾನ್ಯರ ಪರವಾಗಿ ರೂಪಿಸಿದ ನೂರಾರು ಕಾರ್ಯಕ್ರಮಗಳಿಂದಾಗಿ ಕೆಜೆಪಿ ಪಕ್ಷ ಹುಟ್ಟಿದ ಕೆಲವೇ ದಿನಗಳಲ್ಲಿ ರಾಜ್ಯದಲ್ಲಿ ಆಲದ ಮರದಂತೆ ಬೆಳೆದಿದೆ ಎಂದರು.
ಯಡಿಯೂರಪ್ಪನವರು ಹೆಣ್ಣು ಮಕ್ಕಳಿಗೆ ಭಾಗ್ಯಲಕ್ಷೀ ಬಾಂಡ್ ವಿತರಣೆ, ವೃದ್ಧರಿಗೆ ಸಂಧ್ಯಾ ಸುರಕ್ಷಾ, ಫ್ರೌಢಶಾಲಾ ಮಕ್ಕಳಿಗೆ ಬೈಸಿಕಲ್ ವಿತರಣೆ, ರಾಜ್ಯದ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲವಿತರಣೆ, ರು. 25,000 ರೈತರ ಸಾಲ ಮನ್ನಾದಂತಹ ಅತಿ ಉಪಯುಕ್ತ ಕಾರ್ಯಕ್ರಮ ರೂಪಿಸಿ ಜನಸಾಮಾನ್ಯರ ಪರವಾದ ಶಕ್ತಿಯಾಗಿ ನಿಂತಿದ್ದಾರೆ ಎಂದರು.
ಕಡೂರು ವಿಧಾನಸಭಾ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಬೆಳ್ಳಿ ಪ್ರಕಾಶ್ ಕಳೆದ ಒಂದು ದಶಕದಿಂದಲೂ ಕಡೂರು ಕ್ಷೇತ್ರದಲ್ಲಿ ಸಕ್ರಿಯ ರಾಜಕಾರಣ ಮಾಡುತ್ತಾ ಬಡವರ ಮತು ನೊಂದ ಎಲ್ಲ ವರ್ಗದವರ ಪರವಾಗಿ ದುಡಿಯುತ್ತಾ ಕಡೂರು ಕ್ಷೇತ್ರದ ಜನರ ಧ್ವನಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದರು. ಮುಖಂಡ ಆರ್. ದೊರೆಸ್ವಾಮಿ, ಈಶ್ವರಪ್ಪ, ಕರಿಯಪ್ಪ, ಕೆ. ಚೇತನ್, ಲೋಕೇಶ ನಾಯ್ಕ, ಚಂದ್ರಶೇಖರ್, ಪ್ರಸನ್ನ, ಮಹಿಳಾ ಕಾರ್ಯಕರ್ತರು ಉಪಸ್ಥಿತರಿದ್ದರು.