ಮೇ 3ರಂದು ವರ್ಧಂತಿ ಉತ್ಸವ
ಶೃಂಗೇರಿ: ಪಟ್ಟಣದ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಆರಾಧ್ಯ ದೈವ ಹೆಬ್ಬಾಗಿಲು ಲಕ್ಷ್ಮಿವೆಂಕಟರಮಣ ಸ್ವಾಮಿ ದೇವರ ಪ್ರಥಮ ಪುನಃಪ್ರತಿಷ್ಠಾ ವರ್ಧಂತಿ ಉತ್ಸವ ಮೇ 3 ರಿಂದ 5 ರವರೆಗೆ ವಿಜೃಂಭಣೆಯಿಂದ ನಡೆಯಲಿದೆ. ಮೇ 3ರಂದು ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ವಿದ್ಯಾಧಿರಾಜ ತೀರ್ಥರು, ವಡೇರ ಶ್ರೀ ಆಗಮಿಸಲಿದ್ದಾರೆ. ಅಂದು ಶ್ರೀಗಳಿಗೆ ಸ್ವಾಗತ, ಪಾದಪೂಜೆ, ಆಶಿರ್ವಚನ ಕಾರ್ಯಕ್ರಮ ನಡೆಯಲಿದೆ. 4 ಹಾಗೂ 5 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಲಿದೆ.
ಕಾಲೇಜು ವಾರ್ಷಿಕೋತ್ಸವ
ಶೃಂಗೇರಿ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜು ವಾರ್ಷಿಕೋತ್ಸವ ಸಮಾರಂಭ ನಡೆಯಿತು. ಎಸ್ಬಿಎಂ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ನಳಿನಾಕ್ಷ ಸಮಾರಂಭ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳತ್ತ ಆಸಕ್ತಿ ವಹಿಸಬೇಕು ಎಂದರು. ಮುಖ್ಯ ಅತಿಥಿಗಳಾಗಿ ರಾಜೀವ್ ಗಾಂಧಿ ಸಂಸ್ಕೃತ ಮಹಾ ವಿದ್ಯಾಲಯದ ಪ್ರಾಚಾರ್ಯ ಡಾ. ಕಣ್ಣನ್ ಮೊದಲಾದವರು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಚಾರ್ಯ ಪ್ರೊ. ಕೆ.ಜಿ. ಸಿದ್ದಲಿಂಗೇಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಿವಮೂರ್ತಿ ಸ್ವಾಗತಿಸಿದರು. ತೃಪ್ತಿ ನಿರೂಪಿಸಿದರು. ಸುನಿಲ್ ಕುಮಾರ್ ವಂದಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮೇ 12ರಂದು ನೆಮ್ಮಾರು ಉರೂಸ್
ಶೃಂಗೇರಿ: ತಾಲೂಕಿನ ನೆಮ್ಮಾರು ಪಂಚಾಯಿತಿ ನೆಮ್ಮಾರಿನಲ್ಲಿರುವ ಸೂಫಿ ಸಂತ ಹಜರತ್ ದಿಲಾವರುಷ ಔಲಿಯಾ ದರ್ಗಾದಲ್ಲಿ ಮೇ 12 ರಭಾನುವಾರ ವಿಶೇಷ ಉರೂಸ್ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂದು ಬೆಳಗ್ಗಯಿಂದ ದರ್ಗಾದಲ್ಲಿ ವಿವಿಧ ಧಾರ್ಮಿಕ ಕಾಯಕ್ರಮ ನೆರವೇರಲಿದ್ದು, ಸಂಜೆ 5 ಗಂಟೆಗೆ ದರ್ಗಾದ ಮುಂಭಾಗದಿಂದ ಸಂದಲ್ ಮೆರವಣಿಗೆ ಹೊರಟು ಪಟ್ಟಣದ ಮುಖ್ಯ ಬೀದಿಯಲ್ಲಿ ಸಾಗಲಿದೆ.
ಶ್ರೀ ಸೀತಾರಾಮ ಪಟ್ಟಾಭಿಷೇಕ ಮಹೋತ್ಸವ
ಕ.ಪ್ರ.ವಾರ್ತೆ,ನ.ರಾ. ಪುರ, ಏ.28
ಅಗ್ರಹಾರದ ಶ್ರೀರಾಮ ಸೇವಾ ಸಮಿತಿ ಆಶ್ರಯದಲ್ಲಿ ಉಮಾ ಮಹೇಶ್ವರ ಸಭಾಭವನದಲ್ಲಿ ನಡೆಯುತ್ತಿದ್ದ ರಾಮೋತ್ಸವ ಕಾರ್ಯಕ್ರಮವು ಭಾನುವಾರ ರಾಜಬೀದಿ ಉತ್ಸವ, ಹನುಮೋತ್ಸವದೊಂದಿಗೆ ಮುಕ್ತಾಯಗೊಂಡಿತು.
9 ದಿನಗಳ ಕಾಲವೂ ಪ್ರತಿ ನಿತ್ಯ ಸಂಜೆ, ಭಜನೆ, ಆಧ್ಯಾತ್ಮ ರಾಮಾಯಣ ಪಾರಾಯಣ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಶನಿವಾರ ವಿಶೇಷವಾಗಿ ಶ್ರೀ ಸೀತಾರಾಮ ಪಟ್ಟಾಭಿಷೇಕ ಮಹೋತ್ಸವ ನಡೆಯಿತು.
ಪಟ್ಟಾಭಿಷೇಕದ ಅಂಗವಾಗಿ ಅಗ್ರಹಾರದ ವಿವಿಧ ಬಡಾವಣೆಗಳಲ್ಲಿ ರಾಜಬೀದಿ ಉತ್ಸವ ನಡೆಯಿತು. ಭಕ್ತರು ಭಜನೆಯೊಂದಿಗೆ ರಥವನ್ನು ಎಳೆದರು.