ಹೆಣ್ಣಿನ ಘನತೆ ಹೆಚ್ಚಿಸಿದ 'ಅಕ್ಕ'
ಕ.ಪ್ರ.ವಾರ್ತೆ,ಚಿಕ್ಕಮಗಳೂರು, ಏ.28
ಹೆಣ್ಣಿನ ಘನತೆ, ಗೌರವಗಳನ್ನು ಮುಗಿಲೆತ್ತರಕ್ಕೆ ಮುಟ್ಟಿಸಿದ ಮಹಾನ್ ಸಾಧಕಿ ಅಕ್ಕಮಹಾದೇವಿ. ಸ್ತ್ರೀತ್ವದ ಶಕ್ತಿಯನ್ನು ಶಬ್ದಾತೀತ, ಉಪಮಾತೀತವಾಗಿಸಿದ ಶರಣೆ ಎಂದು ಶಿಕ್ಷಕಿ ಎಸ್.ಎಂ. ನಾಗರತ್ನ ಚಂದ್ರಶೇಖರ್ ಹೇಳಿದರು.
ನಗರದ ಅಕ್ಕಮಹಾದೇವಿ ಮಹಿಳಾ ಸಮಾಜದ ಕೋಟೆ ಬಡಾವಣೆಯ ಶರಣೆ ಕೇತಲಾದೇವಿ ತಂಡ ಜಗದ್ಗುರು ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಅಕ್ಕಮಹಾದೇವಿ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.
ಸಾಹಿತ್ಯಿಕ ಬದಲಾವಣೆ: ನೀತಿ, ಶೀಲ, ಆದರ್ಶ, ದಯೆ ಹೊಂದಿದ ಮಹಾದೇವಿ ಅಕ್ಕ ವಚನಗಳ ಮೂಲಕ ಬದುಕಿನ ರೀತಿ, ನೀತಿಗಳನ್ನು ವಿಮರ್ಶಾತ್ಮಕವಾಗಿ ಮುಂದಿಟ್ಟ ಕವಯತ್ರಿಯೂ ಹೌದು. 12ನೇ ಶತಮಾನ ಕ್ರಾಂತಿಕಾರಿ ಕಾಲ ಎನಿಸಿಕೊಂಡಿತ್ತು. ವೀರಶೈವ ಧರ್ಮ ಪ್ರಾಬಲ್ಯ ಸಾಧಿಸುವತ್ತಾ ಧಾವಿಸಿತ್ತು. ಸಾಮಾಜಿಕ, ಧಾರ್ಮಿಕ ಮತ್ತು ಸಾಹಿತ್ಯಿಕ ಬದಲಾವಣೆಗೆ ಕಾರಣೀಭೂತವಾಯಿತು ಎಂದರು.
ಸ್ತ್ರೀ ಸ್ವಾತಂತ್ರ್ಯ, ಸಮಾನತೆ ಪ್ರತಿಪಾದಿಸಿದ ಹಿರಿಮೆ ಹೊಂದಿತ್ತು. ಬಸವಾದಿ ಶರಣರು ಸ್ಥಾಪಿಸಿದ ಅನುಭವ ಮಂಟಪ ಎಂಬ ಧಾರ್ಮಿಕ ವೇದಿಕೆ ಜಗತ್ತಿನ ಮೊಟ್ಟಮೊದಲ ಪ್ರಜಾ ಸಂಸತ್ತು ಎಂದು ಗುರುತಿಸಲ್ಪಟ್ಟಿದೆ. ಧರ್ಮಶಾಸ್ತ್ರದ ಸಂಗತಿಗಳನ್ನು ಸರಳ ಕನ್ನಡದಲ್ಲಿ ಜನಸಾಮಾನ್ಯರಿಗೆ ತಿಳಿಸುವ ಸಾಹಸಕ್ಕೆ ಕೈಹಾಕಿದ ಶರಣರಲ್ಲಿ ಅಕ್ಕಮಹಾದೇವಿಗೆ ವಿಶೇಷ ಸ್ಥಾನವಿತ್ತು ಎಂದು ನಾಗರತ್ನ ವಿಶ್ಲೇಷಿಸಿದರು.
ಸಂಸ್ಕಾರ ಅಗತ್ಯ: ಸಂಸ್ಕೃತಿ ಮತ್ತು ಸಂಸ್ಕಾರವನ್ನು ಮನೆಗಳಲ್ಲಿ ನೀಡಬೇಕು. ಸಂಸ್ಕೃತಿ ಎಂದರೆ ಜೀವನದ ಸೊಗಸನ್ನು ವೃದ್ಧಿಸುವ ನಡೆ, ನುಡಿ, ಆಚಾರ- ವಿಚಾರ, ರೀತಿ- ನೀತಿ, ಉಡುಗೆ- ತೊಡುಗೆ ಎಲ್ಲವನ್ನೂ ಒಳಗೊಂಡ ಜೀವನವಿಧಾನ ಎಂದು ಅವರು ಹೇಳಿದರು.
ಸಂಸ್ಕಾರವಂತ ವ್ಯಕ್ತಿ ತಾನೂ ಚೆನ್ನಾಗಿ ಬದುಕುವುದಲ್ಲದೆ ಇತರರನ್ನೂ ಚೆನ್ನಾಗಿ ಬದುಕಲು ಬಿಡುತ್ತಾನೆ. ಮಾನವ ಜೀವನದ ಪ್ರಗತಿಗೆ ಬೇಕಾದ ಅಂಶಗಳೆಲ್ಲವೂ ಭಾರತೀಯ ಪುರಾತನ ಸಂಸ್ಕೃತಿಯಲ್ಲಿದೆ ಎಂದ ನಾಗರತ್ನ, ದಯೆ, ಆದರ್ಶ, ಕಾಯಕದ ಮಹತ್ವ, ಸಹಕಾರ- ಸಹಬಾಳ್ವೆ ಮತ್ತಿತರ ಅಂಶಗಳನ್ನು ಮೈಗೂಡಿಸಿಕೊಂಡಾಗ ಒಳ್ಳೆಯ ಸಮಾಜ ನಿರ್ಮಾಣ ಸಾಧ್ಯ ಎಂದರು.
ಸಮಾಜಕ್ಕೆ ಕಳಂಕ: ಅಕ್ಕಮಹಾದೇವಿ ಮಹಿಳಾ ಸಮಾಜದ ಅಧ್ಯಕ್ಷೆ ಗೌರಮ್ಮ ಬಸವೇಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಕ್ಕಮಹಾದೇವಿ, ಬಸವಣ್ಣ, ಗಾಂಧೀಜಿ ಸೇರಿದಂತೆ ಮಹಾಪುರುಷರು ಜನಿಸಿದ ಈ ನಾಡಿನಲ್ಲಿ ಮಹಿಳಾ ದೌರ್ಜನ್ಯ ಮುಂದುವರೆದಿರುವುದು ನಾಗರಿಕ ಸಮಾಜಕ್ಕೆ ಕಳಂಕ. ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳುವ ಮೂಲಕ ಸ್ತ್ರೀಯರ ಮೇಲಿನ ದೌರ್ಜನ್ಯ ತಡೆಗಟ್ಟಬೇಕು ಎಂದರು.
ಧಾರವಾಡ ಅನುಭವ ಪೀಠದ ಮಾತೆ ಗಂಗಾದೇವಿ ಸಾನ್ನಿಧ್ಯ ವಹಿಸಿದ್ದರು. ಉಪಾಧ್ಯಕ್ಷೆ ಕಾತ್ಯಾಯನಿ ಚಂದ್ರಶೇಖರ್, ಖಜಾಂಚಿ ಯಮುನಾ ಸಿ. ಶೆಟ್ಟಿ, ಕಾರ್ಯದರ್ಶಿ ಹೇಮಲತಾ, ಸಹ ಕಾರ್ಯದರ್ಶಿ ಭಾರತಿ ಶಿವರುದ್ರಪ್ಪ, ಸಹ ಖಜಾಂಚಿ ರೇಖಾ ಉಮಾಶಂಕರ್, ಅಂಬುಜಾ ನಟರಾಜ್ ವೇದಿಕೆಯಲ್ಲಿದ್ದರು.
ಶರಣೆ ಕೇತಲಾದೇವಿ ತಂಡ ಮುಖ್ಯಸ್ಥೆ ಮಂಜುಳಾ ಮಹೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಭವಾನಿ ಸ್ವಾಗತಿಸಿದರು.
ಸ್ವಪ್ನಾ ಕಾರ್ಯಕ್ರಮ ನಿರೂಪಿಸಿದರು. ಸುಮಾ ಲೋಕೇಶ್ ಅವರು ವಂದಿಸಿದರು.