ಚುನಾವಣಾ ಸಿಬ್ಬಂದಿ ನೇಮಕ
ತರೀಕೆರೆ: ಚುನಾವಣೆ ಹಿನ್ನೆಲೆಯಲ್ಲಿ 80 ಮೈಕ್ರೋ ಅಬ್ಸರ್ವರ್ಸ್ ಚುನಾವಣಾ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ ಎಂದು ತರೀಕೆರೆ ವಿಧಾನ ಸಭಾ ಕ್ಷೇತ್ರದ ಚುನಾವಣಾ ವೀಕ್ಷಕ ಟಿ.ಎನ್. ವೆಂಕಟೇಶ್ ತಿಳಿಸಿದ್ದಾರೆ.
ಸೋಮವಾರ ಚುನಾವಣಾಧಿಕಾರಿಗಳ ಕಾರ್ಯಾಲಯದಲ್ಲಿ ಚುನಾವಣಾ ಹಿನ್ನೆಲೆಯಲ್ಲಿ ಏರ್ಪಡಿಸಲಾಗಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ಕ್ಷೇತ್ರದ 66 ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತಗಟ್ಟೆಗಳಲ್ಲಿ ಒಟ್ಟು 80 ಮಂದಿ ಮೈಕ್ರೋ ಅಬ್ಸರ್ವರ್ಸ್ಗಳನ್ನು ನೇಮಕ ಮಾಡಲಾಗಿದೆ. ಮತದಾನಕ್ಕೆ ಯಾವುದೇ ರೀತಿಯ ಅಡಚಣೆಯಾಗದಂತೆ ಕಾರ್ಯ ನಿರ್ವಹಿಸಬೇಕೆಂದು ಅವರು ತಿಳಿಸಿದರು.
ಅನಂತ್ ಗೈರು
ಶೃಂಗೇರಿ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ್ಕು ಮಾರ್ ಸೋಮವಾರ ಪಟ್ಟಣಕ್ಕೆ ಭೇಟಿ ನೀಡಿ ಚುನಾವಣಾ ಪ್ರಚಾರ ಪ್ರಚಾರ ಕಾರ್ಯಕ್ರಮವಿತ್ತು. ಬೆಳಿಗ್ಗೆಯಿಂದಲೇ ಕಾರ್ಯಕರ್ತರು ಜಮಾಯಿಸತೊಡಗಿದ್ದರು. ಪೊಲೀಸ್ ಭದ್ರತೆಯನ್ನು ಆಯೋಜಿಸಲಾಗಿತ್ತು. ಆದರೆ ಕೊನೇಕ್ಷಣದಲ್ಲಿ ಹವಾಮಾನ ವೈಪರಿತ್ಯದ ಕಾರಣ ಪ್ರವಾಸ ದಿಢೀರ್ ರದ್ದಾಯಿತು ಎಂದು ತಿಳಿಸಿದ್ದಾರೆ. ಅನಂತ್ಕುಮಾರ್ ಗೈರು ಹಾಜರಿಯಲ್ಲಿ ಕಾರ್ಯಕ್ರಮ ನಡೆಯಿತು.
ಬಿಜೆಪಿ ನಗರಸಭಾ ಸದಸ್ಯರ ಕಾರಿಗೆ ಕಲ್ಲು
ಚಿಕ್ಕಮಗಳೂರು: ಬಿಜೆಪಿ ನಗರಸಭಾ ಸದಸ್ಯರ ಕಾರಿನ ಮೇಲೆ ಕಿಡಿಗೇಡಿಗಳು ಕೆಂಪನಹಳ್ಳಿ ಬಡಾವಣೆಯಲ್ಲಿ ಸೋಮವಾರ ರಾತ್ರಿ ಕಲ್ಲು ತೂರಿದ್ದಾರೆ.
ಇದರಿಂದಾಗಿ ಕಾರಿನ ಗಾಜು ಒಡೆದು ಹೋಗಿದ್ದು, ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ನಗರದ 33ನೇ ವಾರ್ಡಿನ ಕರ್ಕಿಪೇಟೆಯಲ್ಲಿ ಮಿನಿ ವಾಟರ್ ಟ್ಯಾಂಕ್ ನಿರ್ಮಾಣದ ಕೆಲಸ ನಡೆಯುತ್ತಿದೆ. ಈ ವಾರ್ಡಿನ ಸದಸ್ಯ ಸುಧೀರ್ ಸುಮಾರು 7.45ರ ವೇಳೆಗೆ ಕರ್ಕಿಪೇಟೆಗೆ ಹೋಗಿ ವಾಪಸ್ ಬರುವ ವೇಳೆಗೆ ಕೆಂಪನಹಳ್ಳಿ ಬಡಾವಣೆ ಬಳಿ ಯುವಕರು ಕಾರಿನ ಮೇಲೆ ಕಲ್ಲು ತೂರಿದ್ದು, ಕಾರಿನ ಹಿಂಬದಿಯ ಗಾಜು ಒಡೆದು ಹೋಗಿದೆ. ಈ ಸಂದರ್ಭದಲ್ಲಿ ಯುವಕರು ಶಾಸಕರ ಹಾಗೂ ಬಿಜೆಪಿಯ ವಿರುದ್ಧ ಘೋಷಣೆ ಹಾಕಿದರು ಎನ್ನಲಾಗಿದೆ. ಸುಧೀರ್ ನೀಡಿರುವ ದೂರಿನನ್ವಯ ಬಸವನಹಳ್ಳಿ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.
ಬಿಜೆಪಿ ತಿರಸ್ಕರಿಸಿ
ಮೂಡಿಗೆರೆ: ರಾಜ್ಯದಲ್ಲಿ ಜನಸಾಮಾನ್ಯರ ಸಮಸ್ಯೆಗಳತ್ತ ಸ್ಪಂಧಿಸದೆ ಕೇವಲ ಪಕ್ಷದೊಳಗಿನ ಭಿನ್ನಮತ ಶಮನ ಮಾಡುತ್ತಾ, ಕಾನೂನು ಸುವ್ಯವಸ್ಥೆ ಹದಗೆಡಿಸಿದ ಆಡಳಿತಾರೂಢರಿಗೆ ಮತದಾರರು ತಕ್ಕ ಪಾಠ ಕಲಿಸುವಂತೆ ಕೋಮು ಸೌಹಾರ್ಧ ವೇದಿಕೆ ಸಹ ಕಾರ್ಯದರ್ಶಿ ಗೌಸ್ ಮೊಹಿದ್ದೀನ್ ಮನವಿ ಮಾಡಿದ್ದಾರೆ.
ಈ ಕುರಿತು ಹೇಳಿಕೆ ನೀಡಿ, ರೇಣುಕಾಚಾರ್ಯ, ಹರತಾಳು ಹಾಲಪ್ಪ, ಪಾಟೀಲ್ರಂತವರಿಂದ ವಿಧಾನಸೌಧದ ಮಾನ ಮೂರಾಬಟ್ಟೆಯಾಗಿದೆ ಎಂದು ಅವರು ಹೇಳಿಕೆಯಲ್ಲಿ ಆರೋಪಿಸಿದ್ದಾರೆ.