ವಿದ್ಯುತ್ ವ್ಯತ್ಯಯ
ಚಿಕ್ಕಮಗಳೂರು: ನಗರದ ರತ್ನಗಿರಿ ರಸ್ತೆಯಲ್ಲಿ ವಿದ್ಯುತ್ ಕಂಬಗಳು ಮತ್ತು ವಾಹಕಗಳನ್ನು ಸ್ಥಳಾಂತರಿಸಬೇಕಿರುವುದರಿಂದ ಮಂಗಳವಾರ ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ ಎಫ್- 3, ಮಾರ್ಕೆಟ್ ರಸ್ತೆ ಫೀಡರ್‌ನ ವಿಜಯಪುರ ಬಡಾವಣೆ, ಬಸವರಾಜ ಲೇಔಟ್, ಆರ್.ಜಿ. ರಸ್ತೆ, ತಿಲಕ್ ಪಾರ್ಕ್, ಪೆನ್ಷನ್ ಮೊಹಲ್ಲಾ, ದುಬೈ ನಗರ ಮತ್ತು ಮಲ್ಲಂದೂರು ರಸ್ತೆಯಲ್ಲಿ ವಿದ್ಯುತ್ ನಿಲುಗಡೆಯಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕಾಗಿ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಮುಂದುವರೆದ ಮಳೆ
ಶೃಂಗೇರಿ: ತಾಲೂಕಿನಾದ್ಯಂತ ಕಳೆದೆರೆಡು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಸೋಮವಾರ ನಸುಕಿನ ವೇಳೆ ಸಾಧಾರಣ ಮಳೆ ಸುರಿಯಿತು. ಕೆಲವೆಡೆ ಗುಡುಗು ಮಿಂಚು ಸಹಿತ ಮಳೆ ಬಿದ್ದಿತು. ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣ ಉಂಟಾಗಿತ್ತು. ಗುಡುಗು ಸಿಡಿಲಿನ ಅಬ್ಬರಕ್ಕೆ ಆಗಾಗ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದೆ.
ಮತದಾನದಲ್ಲಿ ಪಕ್ಷಪಾತ ಬೇಡ
ತರೀಕೆರೆ: ಮತದಾನ ಮುಕ್ತ ಮತ್ತು ನಿಷ್ಪಕ್ಷಪಾತವಾಗಿರಬೇಕು ಎಂದು ತರೀಕೆರೆ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ, ಉಪವಿಭಾಗಾಧಿಕಾರಿ ಅನುರಾಧ ತಿಳಿಸಿದ್ದಾರೆ. ತಾಲೂಕು ಅಡಳಿತ ವತಿಯಿಂದ ವಿಧಾನಸಭಾ ಕ್ಷೇತ್ರದ ಚುನಾವಣೆ ಹಿನ್ನಲೆಯಲ್ಲಿ ಪಟ್ಟಣದ ಎಂ.ಜಿ.ಹಾಲ್‌ನಲ್ಲಿ ಏರ್ಪಡಿಸಲಾಗಿದ್ದ ಮತಗಟ್ಟೆ ಅಧಿಕಾರಿಗಳಿಗೆ ಎರಡನೆ ಹಂತದ ಚುನಾವಣೆ ಕುರಿತು ತರಬೇತಿಯಲ್ಲಿ ಮಾತನಾಡುತ್ತಿದ್ದರು. ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದ ಅವರು, ಮತದಾನದ ರಹಸ್ಯ ಕಾಪಾಡಲು ತಿಳಿಸಿದರು. ಮತಗಟ್ಟೆ ಅಧಿಕಾರಿಗಳು, ಚುನಾವಣೆ ಸಿಬ್ಬಂದಿ ಸಭೆಯಲ್ಲಿ ಭಾಗವಹಿಸಿದ್ದರು.