ಸಖರಾಯಪಟ್ಟಣ ಹೋಬಳಿ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಬಿರುಸಿನ ಪ್ರಚಾರ
ಕಪ್ರವಾರ್ತೆ,ಚಿಕ್ಕಮಗಳೂರು, ಏ.29
ಸಖರಾಯಪಟ್ಟಣ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ರಣ ಬಿಸಲಿನ ನಡುವೆ ಕಾಂಗ್ರೆಸ್ ಮುಖಂಡರು ಭಾನುವಾರ ಬಿರುಸಿನ ಪ್ರಚಾರ ನಡೆಸಿದರು. ಚಿಕ್ಕದೇವನೂರಿನಲ್ಲಿ ಮನೆ ಮನೆಗೆ ತೆರಳಿದ್ದ ವಿವಿಧ ಕೋಮಿನ ಮುಖಂಡರು ಕಾಂಗ್ರೆಸ್ ಅಭ್ಯರ್ಥಿ ಕೆ.ಎಸ್. ಶಾಂತೇಗೌಡ ಪರ ಮತಯಾಚನೆ ನಡೆಸಿದರು.
ಬೊಮ್ಮೇನಹಳ್ಳಿ, ಗುಬ್ಬಿಹಳ್ಳಿ, ಸಖರಾಯಪಟ್ಟಣ, ತಿಪ್ಪಗೊಂಡನಹಳ್ಳಿ, ಬಾಣೂರು ಸೇರಿದಂತೆ ಅನೇಕ ಗ್ರಾಮಗಳಲ್ಲಿ ಮುಖಂಡ ಅಪ್ಸರ್, ಚಿಕ್ಕದೇವನೂರು ರಮೇಶ್, ರಾಮನಾಯಕ್, ಅಶೋಕ್, ರೇಣುಮೂರ್ತಿ, ನಗರಸಭೆ ಸದಸ್ಯ ಹಿರೇಮಗಳೂರು ಪುಟ್ಟಸ್ವಾಮಿ ಮನೆ ಮನೆಗೆ ತೆರಳಿ ಮತ ಕೇಳಿದರು.
ಎಲ್ಲರು ಜಾಗೃತರಾಗಿ: ಬಾಣೂರು ಕಾಲೋನಿಯಲ್ಲಿ ಮತದಾರರನ್ನುದ್ದೇಶಿಸಿ ಹಿರೇಮಗಳೂರು ಪುಟ್ಟಸ್ವಾಮಿ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಕೊಡುವ ಯಾವುದೇ ಆಸೆ, ಆಮಿಷಗಳಿಗೆ ಒಳಗಾಗಿ ತಮ್ಮ ಅಮೂಲ್ಯವಾದ ಮತವನ್ನು ಮಾರಾಟ ಮಾಡಿಕೊಳ್ಳಬೇಡಿ. ಡಾ. ಬಿ.ಆರ್. ಅಂಬೇಡ್ಕರ್ ನಮಗೆ ಕೊಟ್ಟಿರುವ ಹಕ್ಕನ್ನು ಪೊಳ್ಳು ಭರವಸೆ, ಆಮಿಷಗಳಿಗಾಗಿ ಬೀದಿಗೆ ಬೀಳಿಸಬೇಡಿ. ಎಲ್ಲರು ಜಾಗೃತರಾಗಿ ಜನಪರವಾಗಿ, ದಲಿತರು, ಶೋಷಿತರು, ಬಡವರು, ಕೂಲಿ ಕಾರ್ಮಿಕರ ಕೆಲಸ ಮಾಡುವಂತ ಅಭ್ಯರ್ಥಿ ಶಾಂತೇಗೌಡ ಅವರಿಗೆ ಚುನಾವಣೆಯಲ್ಲಿ ಮತ ನೀಡುವ ಮೂಲಕ ಬೆಂಬಲಿಸಿ ಎಂದರು.
ಮುಸ್ಲಿಂ ಮುಖಂಡ ಅಪ್ಸರ್ ಮಾತನಾಡಿ, ಬಿಜೆಪಿಯೊಂದಿಗೆ ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿದೆ. ಜೆಡಿಎಸ್ಗೆ ಹಾಕುವ ಮತಗಳು ವ್ಯರ್ಥವಾಗುವುದರಿಂದ ಎಲ್ಲ ಮುಸ್ಲಿಮರು ಕಾಂಗ್ರೆಸ್ಗೆ ಹಾಕುವುದು ಒಳ್ಳೆಯದು. ಈ ದೇಶದ ಸುಭದ್ರತೆ ಮತ್ತು ಸ್ಥಿರ ಸರ್ಕಾರಕ್ಕಾಗಿ ಕಾಂಗ್ರೆಸ್ ಬೆಂಬಲಿಸಿ ಎಂದು ಮನವಿ ಮಾಡಿದರು.
ಅಭಿವೃದ್ಧಿಗಾಗಿ: ಮುಖಂಡ ಸಂತೋಷ್ ಮಾತನಾಡಿ, ಕ್ಷೇತ್ರದಲ್ಲಿರುವ ಸಮಸ್ಯೆಗಳ ಪರಿಹಾರಕ್ಕಾಗಿ, ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ, ಶುದ್ಧ ಕುಡಿಯುವ ನೀರು, ನಿರಾಶ್ರಿತರು ಆಶ್ರಯ ಪಡೆಯಲಿಕ್ಕಾಗಿ ಕಾಂಗ್ರೆಸ್ ಅಭ್ಯರ್ಥಿ ಶಾಂತೇಗೌಡರನ್ನು ಮತದಾರರು ಬೆಂಬಲಿಸಬೇಕು ಎಂದರು. ಸತೀಶ್, ನಯಾಜ್, ಜಾಕೀರ್, ಇಮ್ರಾನ್, ವಾಸಿಂ ಇದ್ದರು.
ಕಾಂಗ್ರೆಸ್ಗೆ ಸೇರ್ಪಡೆ: ನಗರದ ಅರವಿಂದನಗರದಲ್ಲಿ ಇತ್ತೀಚೆಗೆ ಕೆಜೆಪಿಯ ನೂರಾರು ಕಾರ್ಯಕರ್ತರು ಪಕ್ಷ ತೊರೆದು ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಸೇರಿದರು.
ಕೆಜೆಪಿ ತೊರೆದಿರುವ ಅಬ್ಜಲ್, ಅಪ್ಸರ್, ಇಮ್ರಾನ್, ರಾಮನಾಯಕ್, ಜಾಕೀರ್, ನಯಾಜ್ ಸೇರಿದಂತೆ ನೂರಕ್ಕೂ ಹೆಚ್ಚು ಕಾರ್ಯಕರ್ತರಿಗೆ ಕಾಂಗ್ರೆಸ್ ಧ್ವಜವನ್ನು ನೀಡುವ ಮೂಲಕ ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು. ನೆಹರು, ಇಂದಿರಾಗಾಂಧಿ, ರಾಜೀವ್ಗಾಂಧಿ ಮತ್ತು ಮನಮೋಹನ್ ಸಿಂಗ್ ಉತ್ತಮ ಆಡಳಿತ ನೀಡುವ ಮೂಲಕ ದೇಶದ ಸರ್ವತೋಮುಖ ಅಭಿವೃದ್ಧಿಗೆ ಅಡಿಪಾಯ ಹಾಕಿದ್ದಾರೆ. ಕೇಂದ್ರ ಸರ್ಕಾರ ವಿವಿಧ ಜನಪರ ಯೋಜನೆಗಳ ಮೂಲಕ ರಾಜ್ಯಕ್ಕೆ ಸಹಸ್ರಾರು ಕೋಟಿ ಅನುದಾನವನ್ನು ನೀಡಿದೆ. ಆದರೆ, ರಾಜ್ಯ ಸರ್ಕಾರ ಕೇಂದ್ರದ ಯೋಜನೆಗಳನ್ನು ತಮ್ಮವೆಂದು ಜನರಲ್ಲಿ ಬಿಂಬಿಸುವ ಕೆಲಸವನ್ನು ಮಾಡುತ್ತಿದೆ ಎಂದು ಟೀಕಿಸಿದರು.
ಎಲ್ಲ ವರ್ಗದ ಜನರನ್ನು ಒಂದೇ ಸಮಾನವಾಗಿ ಕಾಣುವ ಪಕ್ಷ ಕಾಂಗ್ರೆಸ್. ಸ್ಥಿರ ಮತ್ತು ಅಭಿವೃದ್ಧಿಪರ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಸಾಧ್ಯ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಹಲವು ಹಗರಣಗಳು ಮತ್ತು ಭ್ರಷ್ಟಾಚಾರ, ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಫಲವಾಗಿದೆ ಎಂದ ಅವರು, ಈ ಚುನಾವಣೆಯಲ್ಲಿ ಬಿಜೆಪಿಯನ್ನು ತಿರಸ್ಕರಿಸಲು ಜನ ನಿರ್ಧರಿಸಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ. ಜನರು ಪಕ್ಷ ಬೆಂಬಲಿಸಬೇಕು ಎಂದು ಮನವಿ ಮಾಡಿದರು.