ಕನಸು ನನಸಾಗಿಸಲು ಜೆಡಿಎಸ್ಗೆ ಮತ ನೀಡಿ: ವೈ.ಎಸ್.ವಿ. ದತ್ತಾ
ಕ.ಪ್ರ.ವಾರ್ತೆ, ಕಡೂರು, ಏ.30
ಜಾತಿ ರಾಜಕಾರಣ ಧಿಕ್ಕರಿಸಿ ಪ್ರೀತಿ ರಾಜಕಾರಣ ಒಪ್ಪಿರುವ ನನ್ನ ಕಡೂರು ಕ್ಷೇತ್ರದಲ್ಲಿ ಹೊಸ ರೀತಿಯ ರಾಜಕಾರಣದ ಕನಸನ್ನು ನನಸು ಮಾಡಲು ಮತದಾರರು ನನಗೆ ಆಶೀರ್ವಾದ ಮಾಡಬೇಕು ಎಂದು ಜೆಡಿಎಸ್ ಅಭ್ಯರ್ಥಿ ವೈ.ಎಸ್.ವಿ.ದತ್ತ ಮನವಿ ಮಾಡಿದರು.
ಅವರು ಕಡೂರು ವಿಧಾನಸಭಾ ಕ್ಷೇತ್ರದ ಯಗಟಿ ಹೋಬಳಿಯ ಪರ್ವತನಹಳ್ಳಿ, ಸಾಣೇಹಳ್ಳಿ, ಕಾವಲುಹಟ್ಟಿ,ಅಣ್ಣೇಗೆರೆ, ಸೀತಾಪುರ, ಹನುಮನಹಳ್ಳಿ, ಗುಡ್ಡೇಹಳ್ಳಿ, ಮುಗಳೀಕಟ್ಟೆ ಮೊದಲಾದ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದರು.
ನಾನು ವಿಧಾನಪರಿಷತ್ ಸದಸ್ಯನಾದ ಅವಧಿಯಲ್ಲಿ ಕ್ಷೇತ್ರಕ್ಕೆ ತಂದ ಅನುದಾನದಲ್ಲಿ ಗ್ರಾಮಾಂತರ ಪ್ರದೇಶಗಳಿಗೆ ಹೆಚ್ಚಿನ ಅನುದಾನ ನೀಡಿ, ಊರಿನ ಅಭಿವೃದ್ಧಿಗೆ ಅನುದಾನ ಸದ್ವಿನಿಯೋಗವಾಗುವಂತೆ ಮಾಡಿದ್ದೇನೆ ಎಂದರು.
ಜಾತಿ ಸಾಮರಸ್ಯ: ಯಾವುದೇ ಊರಿನಲ್ಲಿ ಜಾತಿ ಜಾತಿಗಳ ನಡುವೆ ಜಗಳ ಮಾಡಿಸದೆ ಪ್ರತಿಯೊಂದು ಜಾತಿಯೂ ಮತ್ತೊಂದು ಜಾತಿಯನ್ನು ಸಾಮರಸ್ಯದಿಂದ ಕಾಣುವಂತೆ ತಾವು ಗಮನಹರಿಸಿ ವೀರಶೈವ, ಕುರುಬ, ಉಪ್ಪಾರರರು, ತೆಲುಗು ಗೌಡರು, ಅಲ್ಪಸಂಖ್ಯಾತರು, ಪರಿಶಿಷ್ಟ ವರ್ಗದವರು ಸೇರಿದಂತೆ ಹಿಂದುಳಿದ ವಿವಿಧ ಸಮುದಾಯಗಳ ಎಲ್ಲರ ಪ್ರೀತಿ ಸಂಪಾದಿಸಿದ್ದೇನೆ ಎಂದರು.
ಹಣದ ಆಮಿಷದಿಂದ ನಾನು ಎಲ್ಲಿಯೂ ಚುನಾವಣೆ ನಡೆಸಿಲ್ಲ. ಬದಲಾಗಿ ಪ್ರೀತಿ ರಾಜಕಾರಣ ನಡೆಸಿದ್ದೇನೆ. ಹಾಗಾಗಿ ನನ್ನ ಜನರು ಜಾತಿಯನ್ನು ಧಿಕ್ಕರಿಸಿ ಪ್ರೀತಿಯನ್ನು ಅಪ್ಪಿಕೊಂಡು ನನ್ನನ್ನು ಎರಡು ಬಾರಿ ಸಲಹಿದ್ದಾರೆ. ನನ್ನಲ್ಲಿ ಹಣವಿಲ್ಲ ಹಾಗೂ ನಾನು ಯಾವ ದುರ್ಲಾಭ ಮಾಡಿಕೊಳ್ಳಲೂ ಕ್ಷೇತ್ರದಲ್ಲಿ ರಾಜಕೀಯ ಮಾಡುತ್ತಿಲ್ಲ. ಈ ಕ್ಷೇತ್ರಕ್ಕೆ ನನ್ನದೇ ಆದ ರೀತಿಯಿಲ್ಲಿ ಹೊಸ ರೀತಿಯ ಆಶಯ ಹೊಂದುವ ಕನಸು ಕಂಡಿದ್ದೇನೆ. ಎಲ್ಲ ಸಮುದಾಯಗಳೂ ಕೂಡ ನನ್ನ ಬೆಂಬಲಕ್ಕಿವೆ ಎಂದರು.
ಅಭಿವೃದ್ಧಿ ಚಿಂತನೆ: ಮುಖಂಡ ವೈ.ಎಸ್.ವಿ. ಪ್ರಕಾಶ್ ಮಾತನಾಡಿ, ಗ್ರಾಮೀಣ ಪ್ರದೇಶದ ಜನರ ಪ್ರೀತಿ ಹಾಗೂ ನಾಡಿಮಿಡಿತ ಅರಿತು ಜನರ ಪ್ರೀತಿ ಸಂಪಾದಿಸಿ ರಾಜಕಾರಣ ಮಾಡುತ್ತಿರುವ ವ್ಯಕ್ತಿ ದತ್ತ ಎಂದರು.
ಅಭಿವೃದ್ಧಿ ಚಿಂತನೆ ಮಾಡುವ ಮೂಲಕ ಕ್ಷೇತ್ರಕ್ಕೆ ಹೊಸರೂಪ ಕೊಡುವಲ್ಲಿ ಗಟ್ಟಿದನಿಯ ಶಾಸಕರಾಗಿ ಕೆಲಸ ಮಾಡುವ ಸಾಮರ್ಥ್ಯ ಇರುವ ದತ್ತ ಅವರನ್ನು ಮತದಾರರು ಜಾತ್ಯತೀತವಾಗಿ ಆಯ್ಕೆ ಮಾಡಬೇಕು ಎಂದು ಕೋರಿದರು. ಜೆಡಿಎಸ್ ಮುಖಂಡ ಎಚ್. ದುನ್ನೇಗೌಡ, ಬಿ.ಎಸ್. ಪ್ರದೀಪ್, ಡಿ.ಕೆ. ಕೃಷ್ಣಮೂರ್ತಿ,ಬಸವರಾಜು, ಬಿಳಿಗೆರೆ ವಿಜಯಕುಮಾರ್, ಚೇತು, ಬಿಳುವಾಲ ಪ್ರಕಾಶ್, ಮುತ್ತು ಮೊದಲಾದವರು ಉಪಸ್ಥಿತರಿದ್ದರು.