ಬಿಜೆಪಿ, ಜೆಡಿಎಸ್ ಭರ್ಜರಿ ರೋಡ್ ಶೋ
ಕಪ್ರವಾರ್ತೆ,ಚಿಕ್ಕಮಗಳೂರು, ಏ.30
ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಪ್ರಚಾರಕ್ಕಾಗಿ ಹೆಚ್ಚು ಜನರು ಸೇರುವ ಸ್ಥಳಗಳಾದ ಮದುವೆ ಸಮಾರಂಭ, ಧಾರ್ಮಿಕ ಕಾರ್ಯಕ್ರಮ ಹಾಗೂ ಸಂತೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಟಿ. ರವಿ ಹಾಗೂ ಜೆಡಿಎಸ್ ಅಭ್ಯರ್ಥಿ ಎಸ್.ಎಲ್. ಧರ್ಮೇಗೌಡ ಅವರು ಸಖರಾಯಪಟ್ಟಣದಲ್ಲಿ ಮಂಗಳವಾರ ಸಂತೆಯ ದಿನ ರೋಡ್ ಶೋ ಹಾಗೂ ಚುನಾವಣಾ ಪ್ರಚಾರ ನಡೆಸಿದರು.
ಅಭಿವೃದ್ಧಿಯ ಹೂರಣ: ಪ್ರಚಾರ ಸಭೆಯಲ್ಲಿ ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ ಮಾತನಾಡಿ, ನಿತ್ಯ ಬೀದಿ ಜಗಳದ ಮೂಲಕ ಜೀವನ ಕಳೆಯುತ್ತಿದ್ದ ಬಯಲು ಭಾಗದ ಜನರಿಗೆ ನೆಮ್ಮದಿ ಬದುಕು ಸಾಗಿಸಲು ಅನುವು ಮಾಡಿಕೊಟ್ಟು ಅಭಿವೃದ್ಧಿಯ ಹೂರಣ ಬಡಿಸಿದ ಬಿಜೆಪಿಗೆ ದೊಡ್ಡ ಪ್ರಮಾಣದಲ್ಲಿ ಜನ ಬೆಂಬಲ ನೀಡುತ್ತಾರೆಂಬ ವಿಶ್ವಾಸವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗೆಲುವು ನಿಶ್ಚಿತ: ಕ್ಷೇತ್ರದಲ್ಲಿ ಪ್ರವಾಸ ಮಾಡಿದ ಸಂದರ್ಭದಲ್ಲಿ ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಯಲು ಭಾಗದಲ್ಲಿ ನೆಮ್ಮದಿ ಇದೆ. ಅಭಿವೃದ್ಧಿಯೂ ಆಗಿದ್ದು, ಯಾವುದೇ ಜಾತಿ ಮತ ಪರಿಗಣಿಸದೆ ಜನಾಭಿಪ್ರಾಯ ನಿಮ್ಮೊಂದಿಗಿದೆ. ನಿಮ್ಮ ಗೆಲುವು ನಿಶ್ಚಿತ ಎಂಬ ಆಶಯವನ್ನು ಹಿರಿಯರು ವ್ಯಕ್ತಪಡಿಸಿದ್ದಾರೆ ಎಂದರು. ಸೋಲಿನ ಹತಾಶೆಯಲ್ಲಿರುವ ಜೆಡಿಎಸ್, ಕಾಂಗ್ರೆಸ್ ಪಕ್ಷಗಳು ದೌರ್ಜನ್ಯಕ್ಕೆ ಮುಂದಾಗಿದ್ದಾರೆ. ಇದಕ್ಕೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದರು.
ರಸ್ತೆ ಅಭಿವೃದ್ಧಿ: ರೈತ ಸಿದ್ದೇಶ್ವರ ಮಾತನಾಡಿ, ಸಖರಾಯಪಟ್ಟಣ ಹೋಬಳಿ ಮಾತ್ರವಲ್ಲದೆ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಸುಳ್ಳು ಮಾತನಾಡಿದರೆ ದೇವರು ಮೆಚ್ಚಲ್ಲ. 5 ದಶಕಗಳಲ್ಲಿ ಕಾಣದ ಅಭಿವೃದ್ಧಿಯನ್ನು ರವಿ ಮಾಡಿದ್ದಾರೆ. ಅದರ ವಿಷಯ ಹಾಗಿರಲಿ, ಮದುವೆ, ಮುಂಜಿಗೆ, ಸ್ನೇಹಿತರಿರಲಿ, ಒಂದು ಕುಟುಂಬದವರು ಹೊರಗೆ ಹೋಗೋದೆ ಕಷ್ಟವಾಗಿತ್ತು. ಕಾಲೋನಿಯಿಂದ, ಕೆ.ಎಂ. ರಸ್ತೆವರೆಗೂ ರಸ್ತೆ ಅಭಿವೃದ್ಧಿಯಾಗಿದೆ. ಕೆಲವೊಂದು ಸಾರಿ ಎಲ್ಲ ಪಕ್ಷದವರು ಒಟ್ಟಿಗೆ ಕೂತು ಕಷ್ಟ, ಸುಖ, ವೈಯಕ್ತಿಕವಾಗಿ ಹಂಚಿಕೊಳ್ಳುವ ಪರಿಸ್ಥಿತಿ ಬಂದಾಗ, ಸಚಿವರು ಎದುರು ಬಂದು, ಪ್ರೀತಿಯಿಂದ ಮಾತಾಡ್ಸಿ ಹೋಗ್ತಾರೆ ಎಂದು ಹೇಳಿದರು.
ಋಣ ತೀರಿಸಲು ಅವಕಾಶ ಕೊಡಿ: ಸಖರಾಯಪಟ್ಟಣದಲ್ಲಿ ಮತಯಾಚನೆ ಮಾಡಿ ಮಾತನಾಡಿದ ಜೆಡಿಎಸ್ ಅಭ್ಯರ್ಥಿ ಎಸ್.ಎಲ್. ಧರ್ಮೇಗೌಡ, ಬಯಲು ಭಾಗದ ಹಲವಾರು ಜನಪರ ಯೋಜನೆಗಳನ್ನು ಪೂರ್ಣಗೊಳಿಸಿ ನಿಮ್ಮ ಋಣ ತೀರಿಸಲು ಈ ಬಾರಿ ಜೆಡಿಎಸ್‌ಗೆ ಬೆಂಬಲಿಸಿ ಎಂದು ಮನವಿ ಮಾಡಿದರು.
ಯಾವುದೇ ಜಾತಿ ಮತ ಲೆಕ್ಕಿಸದೆ ಈ ಹಿಂದೆ ನನ್ನನ್ನು ಆಶೀರ್ವದಿಸಿದ್ದೀರಿ. ಅಂದು ಶಾಸಕ ಸ್ಥಾನಕ್ಕೆ ಮೊಟಕುಂಟಾಗಿ ಹಲವು ಜನಪರ ಯೋಜನೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ನಾನು ನಿಮ್ಮ ಸೇವೆಗೆ ಸದಾ ಸಿದ್ದನಿದ್ದು, ನಿಮ್ಮ ಪ್ರೀತಿ ವಿಶ್ವಾಸದ ಋಣ ತೀರಿಸಲು ಈ ಬಾರಿ ನನಗೆ ಮತ ನೀಡಿ ಎಂದು ಮನವಿ ಮಾಡಿದರು.
ಪ್ರಚಾರ ಗಿಟ್ಟಿಸುತ್ತಿದೆ: ಈ ಭಾಗದಲ್ಲಿ 6 ಮೊರಾರ್ಜಿ ಶಾಲೆ, ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಕಾಲೇಜು ಸ್ಥಾಪನೆ, ಬಸ್‌ಸ್ಟಾಂಡ್ ನಿರ್ಮಾಣ ಸೇರಿದಂತೆ ಹಲವು ಕಾಮಗಾರಿಗಳನ್ನು ನಾನೇ ಮಂಜೂರು ಮಾಡಿಸಿದ್ದರು, ಪುಸ್ತಕದಲ್ಲಿ ಮಾತ್ರ ದೊಡ್ಡದಾಗಿ ಅಚ್ಚು ಮಾಡಿಸಿ ಬಿಜೆಪಿ ಪ್ರಚಾರ ಗಿಟ್ಟಿಸುತ್ತಿದೆ ಎಂದು ಆರೋಪಿಸಿದರು.
ನರೇಂದ್ರ ಮಾತನಾಡಿ, ಅತ್ಯಂತ ಸಂಕ್ರಮಣ ಕಾಲದಲ್ಲಿ ಚುನಾವಣೆ ಎದುರಿಸುತ್ತಿದ್ದೇವೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಮೂವರು ಮುಖ್ಯಮಂತ್ರಿಗಳಾಗಿದ್ದರು. ಬಿಜೆಪಿ ನಾಲ್ಕು ಭಾಗವಾಗಿ ಹರಿದು ಹಂಚಿ ಹೋಗಿ ಬಿನ್ನಮತ ಬುಗಿಲೆದ್ದಿದೆ. ಕಾಂಗ್ರೆಸ್ ಪಕ್ಷದ ಕಿತ್ತಾಟ ಈ ಕ್ಷೇತ್ರವನ್ನು ಬಿಡದೆ ಆವರಿಸಿದೆ. ಒಟ್ಟಾರೆ ಕ್ಷೇತ್ರದಲ್ಲಿ ನೇರ ನುಡಿಯ ಧರ್ಮೇಗೌಡರ ಪರ ಅಲೆ ಎದ್ದಿದ್ದು, ಗೆಲುವು ಖಚಿತ ಎಂದರು.